ತಿ.ನರಸೀಪುರ: ತಾಲೂಕಿನ ಮೂಗೂರು ಗ್ರಾಮದಲ್ಲಿರುವ ನಾಡಕಚೇರಿಯಲ್ಲಿ ಮೂಲಸೌಲಭ್ಯಗಳ ಕೊರತೆ ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಕ್ರಮ ವಹಿಸಬೇಕಿದೆ.
ಹೋಬಳಿ ಕೇಂದ್ರದ ನಾಡಕಚೇರಿ ವ್ಯಾಪ್ತಿಗೆ ಇದರೊಂದಿಗೆ ವಾಟಾಳು, ಕರೋಹಟ್ಟಿ, ಕೊತ್ತೇಗಾಲ ಹಾಗೂ ಮೂಗೂರು ಪಂಚಾಯಿತಿ ಒಳಪಟ್ಟಿದ್ದು, ಇದರೊಂದಿಗೆ 20 ರಿಂದ 25 ಹಳ್ಳಿಗಳು ಒಳಪಡುತ್ತವೆ. ಹೀಗಾಗಿ, ಸಾರ್ವಜನಿಕರು ಕಂದಾಯ ಹಾಗೂ ಇತರ ಇಲಾಖೆಗೆ ಸೇರಿದ ಅರ್ಜಿಗಳನ್ನು ಅಲ್ಲಿಯೇ ಸಲ್ಲಿಸಬೇಕಿದೆ.
ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಅರ್ಜಿ ಹಾಕಲು ನಾಡ ಕಚೇರಿಗೆ ಜನರು ನಿತ್ಯ ಬರುತ್ತಾರೆ. ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರೆ ಇಲ್ಲಿಗೆ ಬರುತ್ತಾರೆ. ಅಂತಹವರಿಗೆ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಅಥವಾ ಶೌಚಗೃಹ ವ್ಯವಸ್ಥೆಯಾಗಲಿ ಇಲ್ಲ. ಹೀಗಾಗಿ, ವೃದ್ಧರು ಬಯಲನ್ನೇ ಅವಲಂಬಿಸುವ ಸ್ಥಿತಿ ಇದೆ.
ವಿಪರ್ಯಾಸವೆಂದರೆ ಕಚೇರಿ ಸಿಬ್ಬಂದಿಗೂ ಶೌಚಗೃಹವಿಲ್ಲ. ಪರಿಣಾಮ ಅಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಶೌಚಗೃಹವನ್ನು ಅವಲಂಬಿಸಿದ್ದಾರೆ. ಇನ್ನು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಪರಿಣಾಮ ಹೋಟೆಲ್‌ಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ದುಡ್ಡು ಕೊಟ್ಟು ನೀರು ಕೊಂಡುಕೊಳ್ಳುವ ಸ್ಥಿತಿ ಇದೆ. ಇವೆಲ್ಲದರ ನಡುವೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ಕೆಲಸ ಕಾರ್ಯ ನಿಗದಿತ ಸಮಯಕ್ಕೆ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.
ಈ ಹಿಂದೆ ಈ ಕಟ್ಟಡವನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ವಸತಿ ಗೃಹವನ್ನಾಗಿ ನೀಡಲಾಗಿತ್ತು. ಆ ಬಳಿಕ ಅದೇ ಕಟ್ಟಡ ಗ್ರಾಮ ಪಂಚಾಯಿತಿ ಕಚೇರಿಯಾಗಿ ಬದಲಾಯಿತು. ದಿನ ಕಳೆದಂತೆ ಗ್ರಾಪಂ ಕಚೇರಿಯನ್ನು ಬೇರೆಡೆ ಹೊಸದಾಗಿ ನಿರ್ಮಾಣ ಮಾಡಿದ್ದರಿಂದ ಕಚೇರಿ ಬದಲಾಯಿತು. ಆ ಬಳಿಕ ಈ ಕಟ್ಟಡವು ನಾಡಕಚೇರಿಯಾಗಿ ಪರಿವರ್ತನೆಯಾಯಿತು. ಇದೀಗ ಈ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ದಾಖಾಲಾತಿಗಳು ಹಾನಿಗೊಳಗಾಗುವ ಸಾಧ್ಯತೆಗಳಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ವಾರದಲ್ಲಿ ಎರಡು ಅಥವಾ ಮೂರು ದಿನಕ್ಕೊಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಕುಂದುಕೊರತೆಗಳ ಬಗ್ಗೆ ಗಮನಹರಿಸುತ್ತಿಲ್ಲ.
ಹೆಸರಿಗೆ ಮಾತ್ರ ಮೂಗೂರು ಹೋಬಳಿ ಕೇಂದ್ರವಾಗಿದ್ದು, ಸರ್ಕಾರಿ ಕಚೇರಿಯಲ್ಲೇ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಿವಿಧ ಪಕ್ಷಗಳ ಮುಖಂಡರು ಇಲ್ಲಿಂದ ಆಯ್ಕೆಯಾಗಿದ್ದರೂ ಯಾರೊಬ್ಬರೂ ಇದರತ್ತ ಗಮನಹರಿಸಲಿಲ್ಲ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಟಿ.ದೇವೇಗೌಡ ಮೂಗೂರು ಗ್ರಾಮಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರ ಹಾಗೂ ಐಬಿ ಕೊಠಡಿ ನಿರ್ಮಾಣಕ್ಕೆ ಜಾಗ ಗುರುತಿಸಿ ಸುಮಾರು 5 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡುವ ಭರವಸೆ ನೀಡಿದ್ದರು. ಅಲ್ಲದೇ, ಆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಂದಾಜು ಪಟ್ಟಿ ತಯಾರಿಸಿ ಕಳುಹಿಸುವಂತೆ ಸೂಚಿಸಿದ್ದರು. ಆದರೆ, ಅದು ಅಲ್ಲಿಗೆ ಮುಗಿಯಿತೇ ಹೊರತು ಕಾರ್ಯರೂಪಕ್ಕೆ ಬರಲಿಲ್ಲ ಎನ್ನುತ್ತಾರೆ ಸ್ಥಳೀಯರು.
ನಾಡಕಚೇರಿಯಲ್ಲಿ ಮೂಲಸೌಲಭ್ಯಗಳ ಕೊರತೆಯಿದ್ದು, ತಾಲೂಕು ಆಡಳಿತ ಈ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿದೆ. ಈ ಭಾಗದ ಶಾಸಕರು ಈ ಹಿಂದೆಯೇ ಉಸ್ತುವಾರಿ ಸಚಿವರಾಗಿದ್ದರು. ಅಲ್ಲದೇ, ನಾಲ್ಕು ಬಾರಿ ಗೆದ್ದ ಬಳಿಕ ವಿವಿಧ ಅಭಿವೃದ್ಧಿ ಕಾರ್ಯ ಮಾಡಿದರಾದರೂ ಮೂಗೂರಿನ ನಾಡಕಚೇರಿಯನ್ನು ಅಭಿವೃದ್ಧಿಪಡಿಸಿಲ್ಲ. ಈಗಲಾದರೂ ಈ ಬಗ್ಗೆ ಗಮನಹರಿಸಲಿ.
ಕುರುಬೂರ್ ಸಿದ್ದೇಶ್ ತಾಲೂಕು ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ
ತಾಲೂಕಿನ ವಿವಿಧ ಹೋಬಳಿಯಲ್ಲಿರುವ ನಾಡಕಚೇರಿಗಳಲ್ಲಿ ಈ ರೀತಿಯ ಸಮಸ್ಯೆಗಳಿದ್ದು, ಕಂದಾಯ ಇಲಾಖೆ ಅಧಿಕಾರಿಗಳ ಜತೆಗೂಡಿ ಎಲ್ಲಿ ಖಾಲಿ ನಿವೇಶನ ಇದೆ ಎಂಬುದನ್ನು ಪತ್ತೆ ಮಾಡಲಾಗುವುದು. ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ದೂರವಾಣಿ ಸಂಖ್ಯೆ, ಅವರು ಯಾವ ದಿನ ಕಚೇರಿಯಲ್ಲಿ ಇರುತ್ತಾರೆ, ಯಾವ ದಿನ ಹೊರಗೆ ಹೋಗುತ್ತಾರೆ ಎಂಬ ವಿವರವನ್ನು ನಾಮಫಲಕದಲ್ಲಿ ಹಾಕುವ ಕೆಲಸ ಮಾಡಲಾಗುವುದು. ಈ ಸಂಬಂಧ ಮೇಲಧಿಕಾರಿಗಳ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು. ನಾಡಕಚೇರಿಯಲ್ಲಿ ಒಬ್ಬ ಉಪತಹಸಿಲ್ದಾರ್, ಕೇಸ್ ವರ್ಕರ್, ಕಂಪ್ಯೂಟರ್ ಆಪರೇಟರ್ ಹಾಗೂ ಒಬ್ಬ ಡಿ ಗ್ರೂಪ್ ನೌಕರ ಕಾರ್ಯನಿರ್ವಹಿಸುತ್ತಾರೆ. ಉಳಿದಂತೆ ವಿಎ, ಆರ್‌ಐಗಳು ಕೆಲಸ ಇದ್ದಾಗ ಕಚೇರಿಗೆ ಆಗಮಿಸುತ್ತಾರೆ.
ಸುರೇಶ್ ಆಚಾರ್ಯ ತಹಸೀಲ್ದಾರ್, ತಿ.ನರಸೀಪುರ