ಭದ್ರಾವತಿ: ಮನುಷ್ಯನ ಬಳಿ ಸಿರಿವಂತಿಕೆ ಇರದಿದ್ದರೂ ಮನಸ್ಸು ಶ್ರೀಮಂತವಾಗಿರಬೇಕು. ಮನಸ್ಸೇ ಬಡವಾಗಿದ್ದರೆ ನಮ್ಮಲ್ಲಿ ಸಂಪತ್ತು ಇದ್ದರೂ ನಾವು ಬಡವರೇ. ಸಂತೃಪ್ತಿಗಿಂತ ಶ್ರೇಷ್ಠವಾದ ಸಂಪತ್ತಿಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ಸಹ್ಯಾದ್ರಿ ಬಡಾವಣೆಯಲ್ಲಿ ಸೋಮವಾರ ಜರುಗಿದ ಇಷ್ಟಲಿಂಗ ಮಹಾ ಪೂಜೆ ಹಾಗೂ ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಆಸೆ ಕಳೆದುಕೊಂಡು ಬದುಕಬಹುದು. ಆದರೆ ಆಸಕ್ತಿ ಕಳೆದುಕೊಳ್ಳಬಾರದು. ಆಡುವ ಮಾತುಗಳಿಗೆ ಕೊಲ್ಲುವ ಮತ್ತು ಕಾಪಾಡುವ ಸಾಮರ್ಥ್ಯ ಎರಡೂ ಇದೆ. ಮಾತುಗಳಲ್ಲಿ ಕರುಣೆೆ ಹಾಗೂ ನೈಜತೆಯಿದ್ದರೆ ಬದುಕು ಬಲವಾಗುತ್ತದೆ ಎಂದರು.
ಹಣವನ್ನು ಇವತ್ತಲ್ಲದಿದ್ದರೂ ನಾಳೆ ಸಂಪಾದಿಸಬಹುದು. ಆದರೆ ಜತೆಗಿರುವ ವ್ಯಕ್ತಿಯನ್ನು ಕಳೆದುಕೊಳ್ಳಬಾರದು. ಸಮಯ, ಸ್ನೇಹ, ಆರೋಗ್ಯ ಇವುಗಳಿಗೆ ಬೆಲೆ ಕಟ್ಟಲಾಗದು. ಜೀವನದ ಕೆಟ್ಟ ಘಟನೆಗಳನ್ನು ಮರೆತು ಬಿಡಬೇಕು. ಆದರೆ ಅದರಿಂದ ಕಲಿತ ಪಾಠಗಳನ್ನು ಯಾವಾಗಲೂ ಮರೆಯಬಾರದು. ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ಕಷ್ಟ ಬಿಟ್ಟಿದ್ದಲ್ಲ. ಸುಖ-ದುಃಖ ಸಮಾನವಾಗಿ ಸ್ವೀಕರಿಸಿ ಬಾಳುವುದೇ ಮನುಷ್ಯನ ಗುರಿಯಾಗಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ಮೌಲ್ಯಗಳನ್ನು ಬೋಧಿಸಿ ಉದ್ಧರಿಸಿದ್ದಾರೆ ಎಂದು ತಿಳಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ನೆರವೇರಿತು. ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಶ್ರೀ ನಾಗಭೂಷಣ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಚನ್ನಗಿರಿಯ ಶ್ರೀ ಕೇದಾರ ಶಿವಶಾಂತವೀರ ಸ್ವಾಮೀಜಿ, ತಾವರೆಕೆರೆ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಕೂಡ್ಲಿಗೆರೆ ಹಾಲೇಶ್, ಬಿ.ಕೆ.ಜಗನ್ನಾಥ ಹಾಗೂ ವೀರಗಾಸೆ ತಂಡದವರು ಪಾಲ್ಗೊಂಡಿದ್ದರು.