ನ್ಯೂಸ್

ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ಕೃಪಾಂಕ ಇಲ್ಲ

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಕ್ಕೆ ಕನಿಷ್ಠ ಅಂಕ 35 ಎಂದು 2023ಕ್ಕೂ ಪೂರ್ವದಲ್ಲಿ ನಿಗದಿಯಾಗಿತ್ತು. ಕಳೆದ ಬಾರಿ ನೀಡಿದ್ದ ಕೃಪಾಂಕವನ್ನು ಈ ಬಾರಿ ನೀಡುತ್ತಿಲ್ಲ. ಹೀಗಾಗಿ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟ ಪಡಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಶಾಲೆಗಳ ಒಕ್ಕೂಟದವರು ಉತ್ತೀರ್ಣದ ಕನಿಷ್ಠ ಅಂಕವನ್ನು 33ಕ್ಕೆ ನಿಗದಿಪಡಿಸಬೇಕೆಂದು ಮನವಿ ಮಾಡಿದ್ದಾರೆ. ಅವರಿಂದ ಅಧಿಕೃತ ಪತ್ರ ಬಂದಿಲ್ಲ. ಆದರೆ 2023ಕ್ಕೂ ಹಿಂದಿದ್ದ ಮಾರ್ಗಸೂಚಿಯನ್ನು ಪಾಲಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೊಠಡಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೆಲವು ಮುಸ್ಲಿಂ ಸಂಘಟನೆಗಳು ಒತ್ತಡ ಹೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು, ಈ ವಿಚಾರ ಕೋರ್ಟ್‌ನಲ್ಲಿದೆ. ಹೀಗಾಗಿ ಸರ್ಕಾರ ಇದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಚಿಕ್ಕಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಉತ್ಪಾದನೆ, ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿತ್ತು. ಗುಣಮಟ್ಟದ ಬಗ್ಗೆಯೂ ಅಪಸ್ವರವಿತ್ತು. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿತ್ತು. ಹೀಗಾಗಿ ಚಿಕ್ಕಿ ವಿತರಣೆ ನಿಲ್ಲಿಸುವಂತೆ ಸಿಎಂ ಕೂಡ ಸೂಚನೆ ನೀಡಿದ್ದರು. ಹೀಗಾಗಿ ಚಿಕ್ಕಿ ಬದಲು ಬಾಳೆಹಣ್ಣು ಹಾಗೂ ಮೊಟ್ಟೆ ವಿತರಣೆ ಮುಂದುವರಿಯಲಿದೆ ಎಂದರು.

ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಯ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರಲಾಗಿದೆ. ಕಲಿಕೆಗೆ ಒತ್ತು ನೀಡುವ ಹೊಸ ಕಾರ್ಯಕ್ರಮಗಳು, ಶಿಕ್ಷಕರ ನೇಮಕಾತಿ, ಮಕ್ಕಳ ಕೌಶಲ ಅಭಿವೃದ್ಧಿಪಡಿಸುವುದು, ಕೊಠಡಿಗಳ ನಿರ್ಮಾಣ, ಎಲ್‌ಕೆಜಿ ಆರಂಭಿಸುವುದಕ್ಕೆ ಮಹತ್ವ ನೀಡಲಾಗುತ್ತಿದೆ. ಅನುದಾನ ಕೊರತೆಯಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.80ರಷ್ಟು ಶಿಕ್ಷಕರ ನೇಮಕಾತಿ ಮುಗಿದಿದೆ. ಅಲ್ಲಿನ ಕೊರತೆಗಳನ್ನು ತಕ್ಕ ಮಟ್ಟಿಗೆ ಪೂರೈಸಲಾಗಿದೆ ಎಂದು ಹೇಳಿದರು.

ಅತಿಥಿ ಶಿಕ್ಷಕರು ಹಾಗೂ ಬಿಸಿಯೂಟ ತಯಾರಕರಿಗೆ ಗೌರವಧನ ಹೆಚ್ಚಳ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಇವರಿಗೆ ನೀಡಬೇಕಿದ್ದ ಗೌರವಧನ ಬಾಕಿ ಉಳಿಯಲು ಕೆಲವು ತಾಂತ್ರಿಕ ಸಮಸ್ಯೆಗಳು ಕಾರಣವಾಗಿದ್ದವು. ಅದೆಲ್ಲವನ್ನೂ ಈಗ ಸರಿಪಡಿಸಲಾಗಿದೆ. ಕೂಡಲೇ ಗೌರವಧನ ಬಿಡುಗಡೆಯಾಗಲಿದೆ ಎಂದರು.