ನ್ಯೂಸ್

ಸುರಂಗ ರಸ್ತೆಯಲ್ಲಿ ವಿಧಾನಸೌಧ ಸುತ್ತಮುತ್ತ ನಿರ್ಗಮನ ಇಲ್ಲ

ಬೆಂಗಳೂರು: ರಾಜಧಾನಿಯಲ್ಲಿ ಸಂಚಾರ ಸಿಕ್ಕು ತಪ್ಪಿಸಲು 2 ಹಂತದ ಸುರಂಗ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಮೊದಲ ಹಂತದ ಯೋಜನೆಗೆ ಟೆಂಡರ್ ಕರೆಯುವುದಾಗಿ ಸರ್ಕಾರ ಸಿದ್ಧತೆ ನಡೆಸಿದೆ. ಅದಕ್ಕೂ ಮುನ್ನ ಟನಲ್ ರಸ್ತೆ ಪ್ರವೇಶ ಮತ್ತು ನಿರ್ಗಮದ ಭಾಗದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಯಾವೆಲ್ಲ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್, ಅಧಿಕಾರಿಗಳ ಜೊತೆಗೆ ಶನಿವಾರ ವಿಧಾನಸೌಧದಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸುರಂಗ ರಸ್ತೆಯ ಪ್ರವೇಶ ಹಾಗೂ ನಿರ್ಗಮನದ ಭಾಗದಲ್ಲಿ ಸಂಚಾರ ಸಿಕ್ಕು ಆಗಬಾರದು ಎಂಬ ಉದ್ದೇಶದಿಂದ ಈ ಯೋಜನೆಗೆ ಟೆಂಡರ್ ಕರೆಯುವ ಮುನ್ನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು, ಪೊಲೀಸ್ ಇಲಾಖೆಯ ಡಿಜಿ- ಐಜಿಪಿ ಡಾ.ಎಂ.ಎ. ಸಲೀಂ ಮತ್ತು ಸಂಚಾರ ಪೊಲೀಸ್ ಅಧಿಕಾರಿಗಳ ಜತೆ ಮುಂಜಾಗೃತಾ ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ವಿಧಾನಸೌಧದ ಸುತ್ತಮುತ್ತ 1 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲೂ ನಿರ್ಗಮನಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಇಲ್ಲಿ ಸಂಚಾರ ಸಿಕ್ಕು ಆದರೆ ಎಲ್ಲ ಕಡೆ ಆಗುತ್ತದೆ. ಪರಿಶೀಲಿಸಲು ಪೊಲೀಸರಿಗೆ ತಿಳಿಸಿದ್ದೇನೆ. ನಾನು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಜಿಬಿಎ ಮುಖ್ಯ ಆಡಳಿತಾಧಿಕಾರಿಗಳು ಈ ಸಭೆ ಮಾಡಿದ್ದೇವೆ. ಬೆಂಗಳೂರಿನಲ್ಲಿ 114 ಕಿ.ಮೀ ಎಲಿವೆಟೆಡ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು, ಈ ಯೋಜನೆ ಸಂಬಂಧ ಸಂಚಾರ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ ಪಡೆಯಲಾಗಿದೆ ಎಂದರು.

ಪ್ರತಿ ಕಿ.ಮೀ.ಗೆ 19 ರೂ. ಟೋಲ್?:

ಟನಲ್ ರಸ್ತೆಯಲ್ಲಿ 4 ಚಕ್ರದ ವಾಹನಗಳಿಗೆ ಏಕಸಂಚಾರದ ಪೂರ್ಣ ಸುರಂಗ ಮಾರ್ಗ ಬಳಕೆಗೆ ಪ್ರತಿ ಕಿ.ಮೀ.ಗೆ ಕನಿಷ್ಠ 19 ರೂ. ಗಳೆಂದು ಅಂದಾಜಿಸಿದೆ. ಮುಂಬೈ ನಗರದ ಟ್ರಾನ್ಸ್ ಹಾರ್ಬರ್ ಮೇಲ್ಸೇತುವೆಯಲ್ಲಿ 22 ಕಿ.ಮೀ.ಗೆ 250 ರೂ. ವಿಧಿಸುತ್ತಿದ್ದು, ಉದ್ದೇಶಿತ ಸುರಂಗ ರಸ್ತೆಗೆ 2029ರಿಂದ 2030ರವರೆಗೆ ಅವಧಿಗೆ ಪ್ರತಿ ಕಿ.ಮೀ.ಗೆ 19 ರೂ. ಸಮಂಜಸವೆಂದು ಚರ್ಚಿಸಲಾಗಿದೆೆ. ಈ ವಿಚಾರದಲ್ಲಿ ಯಾವುದೇ ತೀರ್ಮಾನವಾಗಿಲ್ಲ ಎಂದು ಡಿಕೆಶಿ ತಿಳಿಸಿದರು.