ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಸಮೃದ್ಧವಾಗಿದ್ದು, ಸಿದ್ದರಾಮಯ್ಯ ಅವರೇ ಪೂರ್ಣಪ್ರಮಾಣದ ಸಿಎಂ ಆಗಿ ಮುಂದುವರಿಯುತ್ತಾರೆ. ಬದಲಾವಣೆ ಬಗ್ಗೆ ಸದ್ಯಕ್ಕೆ ಚರ್ಚೆ ನಡೆದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಗುರುಪೂರ್ಣಿಮೆ ಅಂಗವಾಗಿ ನಗರದ ಸಾಯಿಬಾಬಾ ಮಂದಿರದಲ್ಲಿ ಗುರುವಾರ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಒಬಿಸಿ ಸಲಹಾ ಮಂಡಳಿಯಲ್ಲಿ ಹಲವು ಮಂದಿ ಇದ್ದಾರೆ. ಸಿದ್ದರಾಮಯ್ಯ ಹಾಲಿ ಮುಖ್ಯಮಂತ್ರಿ ಆಗಿರುವ ಕಾರಣ ಕೆಲವರನ್ನು ಸೇರಿಸಿಕೊಂಡಿದ್ದಾರೆ ಎಂದರು.
ಕೋಮುಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕೋಮುಲ್ ಅಧ್ಯಕ್ಷರ ಚುನಾವಣೆ ಸಂಬಂಧ ನಾನೇನು ಚರ್ಚೆ ಮಾಡಿಲ್ಲ, ನಿಯೋಗವೂ ಹೋಗಿಲ್ಲ. ಭೇಟಿ ಮಾಡಲು ಬಂದವರ ಜತೆಗೆ ಮಾತನಾಡಿದ್ದೇನೆ ಅಷೆ್ಟೆ. ಅಧಿಕಾರ ಹಿಡಿದವರು ಚೆನ್ನಾಗಿ ಅಧಿಕಾರ ನಡೆಸಿಕೊಂಡು ಹೋಗಲಿ ಎಂದರು.
ಕೋಲಾರ ಜಿಲ್ಲೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದೇನೆ, ಒಟ್ಟು 9 ಜನ ಕಾಂಗ್ರೆಸ್ಸಿಗರು ಗೆದ್ದಿದ್ದು, ಒಳ್ಳೆಯ ಕೆಲಸ ಮಾಡಲಿ, ಹಾಲು ಉತ್ಪಾದಕರ ಹಿತರಕ್ಷಣೆ ಮಾಡಲಿ ಎಂದು ಆಶಿಸಿದರು.
ಬಣಕ್ಕೆ ಹಿನ್ನಡೆ ಆಗಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇನು ಚುನಾವಣೆಗೆ ನಿಂತಿದ್ದೆನೆಯೇ?, ನನಗೆ ಯಾವುದೇ ಬಣ ಇಲ್ಲ. ಎಲ್ಲರೂ ಕಾಂಗ್ರೆಸ್ನವರೇ ಎಂದು ತಿಳಿಸಿದರು.
ಶಾಸಕಿ ರೂಪಕಲಾ ಶಶಿಧರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯೇ ಎಂಬುದಕ್ಕೆ, ರೂಪಕಲಾ ಅವರನ್ನೇ ಕೇಳಿ ಎಂದು ಪ್ರತಿಕ್ರಿಯಿಸಿದರು.
* ಇಡಿ ದಾಳಿ ರಾಜಕೀಯ ದುರುದ್ದೇಶ
ಕಾಂಗ್ರೆಸ್ ಮುಖಂಡರ ಮೇಲೆ ಇಡಿ ದಾಳಿ ಕುರಿತು, ಇಡಿ ಅವರು ರಾಜಕೀಯ ದುರುದ್ದೇಶದಿಂದ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರು, ಮುಖಂಡರನ್ನೇ ಗುರಿ ಮಾಡಿಕೊಂಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಈ ರೀತಿ ಮಾಡಬೇಡಿ ಎಂದು ಹಲವು ಬಾರಿ ಮನವಿ ಮಾಡಿದ್ದೇನೆ ಎಂದರು.