ಮೈಸೂರು: ಲಕ್ಷ್ಮೀಯನ್ನು ಮನೆಗೆ ಬರಮಾಡಿಕೊಳ್ಳುವ, ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮೀ ಹಬ್ಬಕ್ಕೆ ಮೈಸೂರಿನಲ್ಲಿ ಸಿದ್ಧತೆ ಜೋರಾಗಿದ್ದು, ಬೆಲೆ ಏರಿಕೆ ನಡುವೆಯೂ ಸಾರ್ವಜನಿಕರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ಹೆಂಗಳೆಯರ ಪ್ರಮುಖ ಹಬ್ಬ ಎನಿಸಿರುವ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಬುಧವಾರವೇ ಸಿದ್ಧತೆ ನಡೆಸಿರುವ ಮಹಿಳೆಯರು ಗುರುವಾರ ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಧನ್ವಂತ್ರಿ ರಸ್ತೆ, ಜೆ.ಕೆ.ಮೈದಾನ, ನಂಜುಮಳಿಗೆ ವೃತ್ತ, ಅಗ್ರಹಾರ ಮತ್ತು ವಾಣಿವಿಲಾಸ ಮಾರುಕಟ್ಟೆಗೆ ಭೇಟಿ ನೀಡಿ ಹಬ್ಬಕ್ಕೆ ಬೇಕಾದ ಪದಾರ್ಥಗಳು, ಹೂವು-ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ಇದರಿಂದಾಗಿ ದೇವರಾಜ ಮಾರುಕಟ್ಟೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.
ಹೂವಿಗೆ ಹೆಚ್ಚು ಬೇಡಿಕೆ ಇತ್ತು. ಬೇರೆ ದಿನಗಳಿಗೆ ಹೋಲಿಸಿದರೆ ಬೆಲೆ ಹೆಚ್ಚಾಗಿತ್ತು. ಲಕ್ಷ್ಮೀ ಪೂಜೆಗೆ ಬಳಸುವ ಹೂವುಗಳ ಬೆಲೆ ದುಪ್ಪಟ್ಟಾಗಿದ್ದು, ಹಣ್ಣು, ತರಕಾರಿಗಳ ಬೆಲೆಯಲ್ಲೂ ಏರಿಕೆಯಾಗಿದೆ. ಜವಳಿ ಮಳಿಗೆಗಳಲ್ಲಿ ಹಬ್ಬದ ದಿನದಂದು ಮುತ್ತೈದೆಯರಿಗೆ ಅರಿಶಿಣ-ಕುಂಕುಮದೊಂದಿಗೆ ನೀಡುವ ರವಿಕೆ ಬಟ್ಟೆ ಕೊಳ್ಳುವುದರಲ್ಲಿ ಮಹಿಳೆಯರು ನಿರತರಾಗಿದ್ದರು. ಇದರಿಂದ ಒಲಂಪಿಯಾ, ಪ್ರಭಾ, ಉಮಾ ಚಿತ್ರಮಂದಿರ, ಕೆ.ಟಿ.ಸ್ಟ್ರೀಟ್ ಸುತ್ತಮುತ್ತಲ ಹೋಲ್‌ಸೇಲ್ ಅಂಗಡಿಗಳಲ್ಲಿ ಜನಜಂಗುಳಿ ಇತ್ತು. ಹೊಸ ಲಕ್ಷ್ಮೀ ಭಾವಚಿತ್ರ, ಮುಖವಾಡ ಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.