Rahul Gandhi: ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪವನ್ನು ಪುನರುಚ್ಚರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಜೊತೆ ಸೇರಿ ಆಯೋಗ ದುಷ್ಕೃತ್ಯದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮಲ್ಲಿ ಪುರಾವೆ ಇದೆ ಎಂದು ಶುಕ್ರವಾರ (ಆಗಸ್ಟ್ 1) ಹೇಳಿದ್ದಾರೆ.
ದೆಹಲಿಯಲ್ಲಿ ಸಂಸತ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, "ದೇಶದಲ್ಲಿ ಚುನಾವಣೆಗಳಲ್ಲಿ ಮತಗಳ್ಳತನ ನಡೆಯುತ್ತಿದೆ ಎಂದು ಹೇಳಿದ್ದೆವು. ಈಗ ಚುನಾವಣಾ ಆಯೋಗವು ಮತಗಳ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಮುಕ್ತ ಮತ್ತು ಮುಚ್ಚಿದ ಪುರಾವೆಗಳಿವೆ. ನಾನು ಇದನ್ನು ಹಗುರವಾಗಿ ಹೇಳುತ್ತಿಲ್ಲ, 100% ದಾಖಲೆಯ ಪುರಾವೆಯೊಂದಿಗೆ ಹೇಳುತ್ತಿದ್ದೇನೆ. ಅದನ್ನು ಬಿಡುಗಡೆ ಮಾಡಿದ ಬಳಿಕ ಆಯೋಗ ಬಿಜೆಪಿಗೆ ಸಹಾಯ ಮಾಡಲು ಹೇಗೆ ಕೆಲಸ ಮಾಡ್ತಿದೆ ಎಂದು ಇಡೀ ದೇಶಕ್ಕೆ ತಿಳಿಯುತ್ತದೆ" ಎಂದು ಹೇಳಿದರು.
"ಮತಗಳ್ಳತನದಲ್ಲಿ ತೊಡಗಿದ ಆಯೋಗದ ಈ ದುಷ್ಕೃತ್ಯವು ದೇಶದ್ರೋಹಕ್ಕೆ ಸಮ. ಕಾಂಗ್ರೆಸ್ ಈ ಕುರಿತು ತನಿಖೆ ನಡೆಸಿದ್ದು, "ಅಣುಬಾಂಬ್" ನಂತಹ ಪ್ರಮುಖ ಸಾಕ್ಷ್ಯವನ್ನು ಬಹಿರಂಗಪಡಿಸಲಿದೆ" ಎಂದು ತಿಳಿಸಿದರು.
"ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ, ಲೋಕಸಭಾ ಚುನಾವಣೆಗಳಲ್ಲಿ ನಮಗೆ ಕೇವಲ ಅನುಮಾನವಿತ್ತು. ಆದರೆ ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲಿ ನಮ್ಮ ಅನುಮಾನ ನಿಜವಾಯಿತು. ನಾವು 6 ತಿಂಗಳು ಕಾಲ ಸ್ವತಂತ್ರವಾಗಿ ತನಿಖೆ ನಡೆಸಿದ್ದು, ಅದರ ಫಲವಾಗಿ ನಮಗೆ 'ಅಣುಬಾಂಬ್' ಸಿಕ್ಕಿದೆ. ಈ ಅಣುಬಾಂಬ್ ಸಿಡಿದಾಗ ಚುನಾವಣಾ ಆಯೋಗ ಈ ದೇಶದಲ್ಲಿ ಕಾಣೆಯೇ ಆಗುತ್ತದೆ. ಈ ಅಕ್ರಮದಲ್ಲಿ ಚುನಾವಣಾ ಆಯೋಗದ ಮೇಲಿಂದ ಕೆಳಗಿನವರೆಗೆ ಯಾರು ಯಾರು ಭಾಗಿಯಾಗಿದ್ದಾರೋ, ಅವರನ್ನು ನಾವು ಬಿಡಲಾರೆವು. ಇದು ದೇಶದ್ರೋಹಕ್ಕಿಂತ ಕಡಿಮೆ ಏನೂ ಅಲ್ಲ" ಎಂದು ಹೇಳಿದರು.
ರಾಹುಲ್ ಚು.ಆಯೋಗದ ಆರೋಪಿಸಿದ್ದು ಇದೇ ಮೊದಲಲ್ಲ
ಜು. 23ರಂದು ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರೋಧಿ ಸಂಸತ್ ಮುಂಭಾಗ ವಿಪಕ್ಷಗಳು ಪ್ರತಿಭಟನೆ ನಡೆಸಿದಾಗ ಅಂದು ರಾಹುಲ್ ಗಾಂಧಿ, "ಭಾರತದ ಚುನಾವಣೆಗಳಲ್ಲಿ ಮತಗಳನ್ನು ಕದಿಯಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಟೀಂ ಅಧ್ಯಯನ ಮಾಡಿ ಕಂಡು ಹಿಡಿದಿದೆ. ಈ ಬಗ್ಗೆ ಬ್ಲಾಕ್ ಅಂಡ್ ವೈಟ್ನಲ್ಲಿ ಬರೆದು ಕೊಡುವೆ" ಎಂದು ರಾಹುಲ್ ಗಾಂಧಿ ಸವಾಲು ಹಾಕಿದ್ದರು.
ಇದಕ್ಕೂ ಮೊದಲು ಬಿಹಾರದಲ್ಲಿ ಪರಿಷ್ಕರಣೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, "ಚುನಾವಣಾ ಆಯೋಗ ಮತ್ತು ಬಿಜೆಪಿ ಬಿಹಾರ ವಿಧಾನಸಭಾ ಚುನಾವಣೆಯನ್ನು ಕದಿಯಲು ಪಿತೂರಿ ನಡೆಸುತ್ತಿವೆ. ಮಹಾರಾಷ್ಟ್ರದಲ್ಲಿ ಜನಾದೇಶವನ್ನು ಕದಿಯಲಾಗಿದೆ. ಈಗ ಬಿಹಾರದಲ್ಲಿ ಮತದಾರರ ಪರಿಷ್ಕರಣೆಯ ಹೊಸ ರೂಪದಲ್ಲಿ ಹಳೆಯ ಪಿತೂರಿಯನ್ನು ನಡೆಸುತ್ತಿದ್ದಾರೆ. ಈ ಸಾಂವಿಧಾನಿಕ ವಿರೋಧಿ ಶಕ್ತಿಗಳನ್ನು ನಾವು ಬಹಿರಂಗಪಡಿಸುವುದನ್ನು ಮುಂದುವರಿಸುತ್ತೇವೆ. ಜನರು ಮತ್ತು ಯುವಕರೊಂದಿಗೆ ಒಟ್ಟಾಗಿ ಸೂಕ್ತ ಉತ್ತರವನ್ನು ನೀಡುತ್ತೇವೆ" ಎಂದು" ಎಂದು ಪ್ರತಿಪಾದಿಸಿದ್ದರು.
ಜೂನ್ ತಿಂಗಳಲ್ಲಿ ಪತ್ರಿಕೆಯೊಂದಕ್ಕೆ "ಚುನಾವಣೆಯನ್ನು ಹೇಗೆ ಕದಿಯುವುದು?" ಎಂಬ ಲೇಖನ ಬರೆದು ಮಹಾರಾಷ್ಟ್ರ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ 5 ಹಂತಗಳ ಬಗ್ಗೆ ವಿವರಿಸಿದ್ದರು.(ಏಜೆನ್ಸೀಸ್)