ನ್ಯೂಸ್

ಶಾಸಕರ ಹಕ್ಕುಬಾಧ್ಯತೆ ಕುರಿತು ನೀತಿ ನಿರೂಪಣಾ ಸಮಿತಿ ರಚನೆ ಅವಶ್ಯ

ಬೆಂಗಳೂರು: ರಾಜ್ಯದಲ್ಲಿ ಶಾಸಕರ ಹಕ್ಕು ಬಾಧ್ಯತೆ ಕುರಿತು ನೀತಿ ನಿರೂಪಣೆ ಸಮಿತಿ ರಚನೆ ಆಗಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಪ್ರತಿಪಾದಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಮುನಿರತ್ನ ಪ್ರಕರಣದಿಂದ ಪ್ರಜಾಸತ್ತಾತ್ಮಕ ಮೌಲ್ಯ, ಸತ್ಸಂಪ್ರದಾಯಗಳಿಗೆ ತೀವ್ರವಾದ ಕೊಡಲಿ ಪೆಟ್ಟು ಬಿದ್ದಿದೆ. ಆದ್ದರಿಂದ ಅವರನ್ನು ಸದನದ ಸದಸ್ಯತ್ವದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದ ಪಾಟೀಲ, ರಾಜ್ಯದಲ್ಲಿ ಕೆಲವು ಶಾಸಕರ ವರ್ತನೆ ಬದಲಾಗಿದೆ. ಅವರ ಭಾಷೆ, ನಡವಳಿಕೆ ಬದಲಾಗಿದೆ. ಜನರ ಜೊತೆಗೆ ಶಾಸಕರ ನಡವಳಿಕೆ ಹದಗೆಟ್ಟಿದೆ. ಅಶ್ಲೀಲ ಭಾಷೆ, ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಶಾಸಕರ ಹಕ್ಕು ಬಾದ್ಯತೆ ಮರೆಯುತ್ತಿದೆ. ಇದು ಸರಿಯಲ್ಲ ಎಂಬ ಭಾವನೆ ಜನರಲ್ಲಿ ಬರುತ್ತಿದೆ. ಹಾಗಾಗಿ ಶಾಸಕರ ಹಕ್ಕು ಬಾಧ್ಯತೆ ಕುರಿತು ನೀತಿ ನಿರೂಪಣಾ ಸಮಿತಿ ರಚಿಸುವ ಅಗತ್ಯವಿದೆ ಎಂದರು.

ಶಾಸಕ ಮುನಿರತ್ನ ಗುತ್ತಿಗೆದಾರನನ್ನು ಉದ್ದೇಶಿಸಿ ಆಡಿದ ಮಾತು ಕ್ಷಮಾರ್ಹವಲ್ಲ. ಹೀಗಾಗಿ ನಾನು ಸ್ಪೀಕರ್‌ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪತ್ರ ಬರೆದಿದ್ದೇನೆ. 196 ನೇ ನಿಯಮದ ಅಡಿ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇದೆ. ಇದನ್ನು ಸ್ಪೀಕರ್ ಗಮನಕ್ಕೆ ತಂದಿದ್ದೇನೆ ಎಂದು ಪಾಟೀಲ ಹೇಳಿದರು.