ನ್ಯೂಸ್

ಗಸಗಸೆ ಬೇಸಾಯ… ಅಫ್ಘನ್ನರಿಗೆ ಆದಾಯ; ಜಗತ್ತಿಗೆ ಅಪಾಯ

ಪಾಶ್ಚಿಮಾತ್ಯ ದೇಶಗಳಲ್ಲಿ ಹೆರಾಯಿನ್ ಮತ್ತು ಇತರ ಒಪಿಯಾಡ್​ಗಳಿಗೆ ಭರ್ಜರಿ ಬೇಡಿಕೆ ಇದೆ. ಛಿದ್ರಗೊಂಡಿರುವ ಅಫ್ಘಾನಿಸ್ತಾನದಲ್ಲಿ ಉದ್ಯೋಗಾವಕಾಶ ಕಡಿಮೆಯಾಗಿದೆ. ಸರ್ಕಾರದ ಬಳಿಯೂ ಹಣ ಇಲ್ಲ. ಬದುಕು ಸಾಗಿಸಲು ಗಸಗಸೆ ಕೃಷಿ ಇಲ್ಲಿನ ರೈತರಿಗೆ ವರವಾಗಿ ಪರಿಣಮಿಸಿದೆ.

ಅಫ್ಘಾನಿಸ್ತಾನದಲ್ಲಿ ಗಸಗಸೆ (ಟಟಟಟಢ) ಪ್ರೀತಿ ಜಾಸ್ತಿಯಾಗುತ್ತಿದೆ. ವಿಶ್ವಸಂಸ್ಥೆ ವರದಿಯೊಂದರ ಪ್ರಕಾರ, 2021ರಲ್ಲಿ ಅಫ್ಘಾನಿಸ್ತಾನದಲ್ಲಿ ಗಸಗಸೆ ಬೆಳೆಯುವ ಜಮೀನು ಹಿಂದಿನ ವರ್ಷಕ್ಕಿಂತ ಶೇ. 32ರಷ್ಟು ಹೆಚ್ಚಾಗಿದೆ. ಅಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನಿಗಳು ಹಣಕ್ಕಾಗಿ ಪರದಾಡುತ್ತಿದ್ದು, ಗಸಗಸೆ ಕೃಷಿ ದೇಶದ ಆರ್ಥಿಕತೆಯ ಆಧಾರಸ್ತಂಭವಾಗಿ ಹೊರಹೊಮ್ಮಿದೆ. ಇದನ್ನು ಅತ್ಯುತ್ತಮ ನಗದು ವರ್ಗಾವಣೆ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ‘ಗಸಗಸೆ ಬೆಳೆಯಿರಿ, ಹಣ ಪಡೆಯಿರಿ’ ಎಂಬ ಮಾತು ಎಲ್ಲೆಡೆ ಮನೆ ಮಾಡಿದೆ.

ನಿಷೇಧ-ವಿನಾಯಿತಿ: ಅಫ್ಘಾನಿಸ್ತಾನದಲ್ಲಿ ಅಕ್ರಮ ಮಾದಕ ವಸ್ತು ಉದ್ಯಮವು ಈ ಹಿಂದಿನ ಕಟ್ಟರ್​ಪಂಥಿಯ ತಾಲಿಬಾನ್ ಆಡಳಿತದ ಅಡಿಯಲ್ಲಿ ಅಭಿವೃದ್ಧಿ ಹೊಂದಿತು. ಕೆಲಕಾಲ ಪ್ರಜಾಪ್ರಭುತ್ವ ಸರ್ಕಾರ ನೆಲೆಸಿದ ನಂತರ ಈಗ ಮತ್ತೆ ತಾಲಿಬಾನ್ ಆಡಳಿತ ಬಂದಿದೆ. ಈ ಮೊದಲು ಗಸಗಸೆ ಬೆಳೆಯುವುದಕ್ಕೆ ತಾಲಿಬಾನ್ ನಿಷೇಧ ಹೇರಿತ್ತಾದರೂ ಬೆಳೆದ ನಿಂತಿರುವ ಫಸಲು ಮತ್ತು ಕೊಯ್ಲಿಗೆ ವಿನಾಯಿತಿ ನೀಡಿತು. ಹೀಗಾಗಿ, ಅಫೀಮು ದರ ಗಗನಮುಖಿಯಾಯಿತು.

ಈಗ ಹೊಸ ಬಿತ್ತನೆ ಹಂಗಾಮು ಆರಂಭವಾಗಿದ್ದು, ಯಾವ ಪ್ರಮಾಣದಲ್ಲಿ ನಿಷೇಧಾಜ್ಞೆ ಜಾರಿಯಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ವರ್ಷ ಗಸಗಸೆಯನ್ನು 2,33,000 ಹೆಕ್ಟೇರ್​ಗಳಲ್ಲಿ ಬಿತ್ತಲಾಗಿತ್ತು. ಕೆಲವು ಸ್ಥಳಗಳಲ್ಲಿ ರೈತರು ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಗಸಗಸೆಯನ್ನೇ ಬಿತ್ತಿದರು.

ರೈತರ ಆದಾಯ ಹೆಚ್ಚಳ: 2021ರಲ್ಲಿ ಗಸಗಸೆ ಕೊಯ್ಲು 6,200 ಟನ್​ಗಳಷ್ಟಿದ್ದು, ಇದರಲ್ಲಿ 350-380 ಟನ್​ನಷ್ಟು ರಫ್ತು-ಗುಣಮಟ್ಟದ ಹೆರಾಯಿನ್ ಆಗಿ ಪರಿವರ್ತಿಸಲಾಗಿದೆ. ವಿಶ್ವದ ಶೇ. 80 ರಷ್ಟು ಓಪಿಯೇಟ್​ಗಳು ಅಫ್ಘಾನಿಸ್ತಾನದಿಂದಲೇ ಬರುತ್ತವೆ. ಅಫೀಮು ಮಾರಾಟದಿಂದ ರೈತರ ಆದಾಯ 2021ರಲ್ಲಿ 425 ಮಿಲಿಯನ್ ಡಾಲರ್​ನಷ್ಟಿದ್ದು (3485 ಕೋಟಿ ರೂಪಾಯಿ), 2022ರಲ್ಲಿ 1.4 ಶತಕೋಟಿ ಡಾಲರ್​ಗೆ (11,480 ಕೋಟಿ ರೂಪಾಯಿಗೆ) ತಲುಪಿದೆ. ಸರಿಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ಈಗ ಮತ್ತೆ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ 1990 ಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಅಂತಾರಾಷ್ಟ್ರೀಯ ಬಹಿಷ್ಕಾರಗಳು ಮುಂದುವರಿದಿವೆ. ಜಾಗತಿಕ ನಿಧಿಗೆ ಪ್ರವೇಶ ಇಲ್ಲ. ತೆರಿಗೆಗಳನ್ನು ವಿಧಿಸುವ ಮೂಲಕ ಹಣ ಸಂಗ್ರಹಿಸಲು ಅವರು ಹರಸಾಹಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಒಪಿಯಾಡ್​ಗಳು ಈಗ ಅಫ್ಘಾನಿಸ್ತಾನದ ಆರ್ಥಿಕತೆಯ ನಿರ್ಣಾಯಕ ಆಧಾರಸ್ತಂಭವಾಗಿದೆ. ಅಲ್ಲದೆ, ಅನೇಕ ಸಮುದಾಯಗಳು ಜೀವನೋಪಾಯಕ್ಕಾಗಿ ಅಫೀಮು ಆದಾಯದ ಮೇಲೆ ಅವಲಂಬಿತವಾಗಿವೆ ಎಂದು ವಿಶ್ವಸಂಸ್ಥೆ ವರದಿ ಹೇಳುತ್ತದೆ.

ಸ್ಥಳೀಯ ಬಳಕೆ ಮತ್ತು ರಫ್ತು ಸೇರಿದಂತೆ ಓಪಿಯೇಟ್ ಆರ್ಥಿಕತೆಯು ದೇಶದ ಜಿಡಿಪಿಯ (ಒಟ್ಟು ದೇಶಿಯ ಉತ್ಪನ್ನ) ಶೇ 9-14 ಮೌಲ್ಯದ್ದಾಗಿದೆ. 2022ರಲ್ಲಿ ಕುಗ್ಗುತ್ತಿರುವ ಜಿಡಿಪಿಯೊಂದಿಗೆ, ಈ ಪ್ರಮಾಣ ಇನ್ನೂ ಹೆಚ್ಚಬಹುದು ಎಂದು ವರದಿ ಹೇಳುತ್ತದೆ.

ಮಾದಕವಸ್ತು ತಯಾರಿಕೆಗೆ ಬಳಕೆ

ಗಸಗಸೆಯನ್ನು ಮಾದಕ ದ್ರವ್ಯ ಹಾಗೂ ನೋವು ಶಮನ ಔಷಧ ತಯಾರಿಸಲು ಬಳಸಲಾಗುತ್ತಿದೆ. ಮಾದಕದ್ರವ್ಯವಾದ ಅಫೀಮು, ಹೆರಾಯಿನ್, ಫೆಟಾನಿಲ್ ಹಾಗೂ ನೋವು ಶಮನ ಔಷಧಿಗಳಾದ ಆಕ್ಸಿಕೊಡೊನ್, ಹೈಡ್ರೊಕೊಡೊನ್, ಮಾರ್ಫಿನ್ ಮುಂತಾದವುಗಳನ್ನು ಇದರಿಂದ ತಯಾರಿಸಲಾಗುತ್ತದೆ. ಇವುಗಳಿಗೆ ‘ಒಪಿಯಾಡ್ ಎಂದು ಕರೆಯಲಾಗುತ್ತದೆ. 2020ರ ವರದಿಯ ಪ್ರಕಾರ, ತಾಲಿಬಾನ್ ಅಕ್ರಮ ಮಾದಕವಸ್ತು ವ್ಯಾಪಾರದಿಂದ ಗಳಿಸಿದ ಲಾಭ 1.6 ಶತಕೋಟಿ ಡಾಲರ್ (13120 ಕೋಟಿ ರೂಪಾಯಿ). ಇದರಲ್ಲಿ, 3411 ಕೋಟಿ ರೂಪಾಯಿ ಮಾತ್ರ ಔಷಧ ವ್ಯಾಪಾರದಿಂದ ಬಂದಿದೆ. ಇದರರ್ಥ, ಮಾದಕವಸ್ತು ತಯಾರಿಕೆಯಿಂದ ಹೆಚ್ಚಿನ ಆದಾಯ ಬಂದಿದೆ.

ತೋರಿಕೆಗಷ್ಟೇ ನಿಷೇಧ

ಕಳೆದ ಏಪ್ರಿಲ್​ನಲ್ಲಿ ಗಸಗಸೆ ಸಾಗುವಳಿಗೆ ತಾಲಿಬಾನ್ ಆಡಳಿತ ನಿಷೇಧ ವಿಧಿಸಿದತ್ತು. 1999ರಲ್ಲಿ ಇದೇ ರೀತಿಯ ನಿಷೇಧ ಹೇರಿತ್ತು. ಆದರೆ, ಇದು ತೋರಿಕೆಗೆ ಮಾತ್ರ. ಈ ವರ್ಷ ನಿಷೇಧದ ಪರಿಣಾಮವಾಗಿಯೇ ಅಫೀಮು ಬೆಲೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಕೃಷಿಯೂ ಹೆಚ್ಚಿದೆ.

ಭಾರತದ ಆತಂಕ

ಏಷ್ಯಾದ ನೆರೆಹೊರೆಯವರು ಮಾದಕ ದ್ರವ್ಯಗಳನ್ನು ಒಂದು ಆತಂಕವನ್ನಾಗಿ ಪರಿಗಣಿಸುತ್ತಾರೆ. ಬಹುಶಃ ಧಾರ್ವಿುಕ ಉಗ್ರವಾದ, ಮೂಲಭೂತವಾದ ಮತ್ತು ಭಯೋತ್ಪಾದನೆಯ ಬೆದರಿಕೆಗಿಂತ ಹೆಚ್ಚಿನ ಆತಂಕ ಇದಕ್ಕೆ ವ್ಯಕ್ತವಾಗುತ್ತದೆ. ಭಾರತ ಕೂಡ ಕಾಲಕಾಲಕ್ಕೆ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಫ್ಘಾನಿಸ್ತಾನದಿಂದ ಭಯೋತ್ಪಾದನೆೆ ಮತ್ತು ಮಾದಕವಸ್ತು ಕಳ್ಳಸಾಗಣೆಯು ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಬೆದರಿಕೆಯಾಗಿದೆ ಎಂದು ಶಾಂಘೖ ಸಹಕಾರ ಸಂಘಟನೆಯ ಭದ್ರತಾ ಸಭೆಗಳಲ್ಲಿ ಚರ್ಚೆ ಕೂಡ ನಡೆಸಲಾಗಿದೆ.

ಅಫೀಮು- ಆರ್ಥಿಕತೆ

ಇಸ್ಲಾಂ ಧರ್ಮವು ಮಾದಕ ವಸ್ತುಗಳ ವಿರುದ್ಧವಾಗಿದೆ. ಆದರೂ 1996ರಲ್ಲಿ ಅಧಿಕಾರಕ್ಕೆ ಬಂದ ತಾಲಿಬಾನ್ ಮೊದಲ ಬಾರಿಗೆ ಗಸಗಸೆಯ ಮೌಲ್ಯವನ್ನು ಅರಿತುಕೊಂಡಿತು. ಸಂಪೂರ್ಣ ಅಂತಾರಾಷ್ಟ್ರೀಯ ಬಹಿಷ್ಕಾರವನ್ನು ಎದುರಿಸಿದ ಸಮಯದಲ್ಲಿ ತಾಲಿಬಾನಿಗಳು ಆಡಳಿತ ನಡೆಸಲು ಗಸಗಸೆ ಕೃಷಿಯಿಂದ ಸಿಗುವ ಹಣದ ಹಿಂದೆ ಬಿದ್ದರು. ಹಿಂದೆ ಹಳ್ಳಿಯ ಮುಲ್ಲಾಗಳಿಗೆ ನೀಡಲಾಗುತ್ತಿದ್ದ ಅಫೀಮು ಮೇಲಿನ ಶೇ. 10 ಝುಕಾತ್ (ಮುಸ್ಲಿಮರಲ್ಲಿ ಕಡ್ಡಾಯವಾಗಿ ದಾನ ಕಾರ್ಯಗಳಿಗೆ ನೀಡುವ ವಂತಿಗೆ) ಅನ್ನು ತಾಲಿಬಾನ್ ಖಜಾನೆಗೆ ವರ್ಗಾಯಿಸಲಾಯಿತು. 1996-97 ರಲ್ಲಿ ದಕ್ಷಿಣ ಅಫ್ಘಾನಿಸ್ತಾನದಲ್ಲಿ ಉತ್ಪಾದನೆಯಾದ 1,500 ಟನ್ ಅಫೀಮಿನಿಂದ ಅಂದಾಜು 9 ಮಿಲಿಯನ್ ಡಾಲರ್ (73.8 ಕೋಟಿ ರೂಪಾಯಿ) ಖಜಾನೆ ಸೇರಿತು. ಕಳ್ಳಸಾಗಣೆದಾರರಿಗೆ ಕೂಡ ಶೇ. 10 ಝುಕಾತ್ ವಿಧಿಸಲಾಯಿತು. ನಂತರದ ವರ್ಷಗಳಲ್ಲಿ ಈ ತೆರಿಗೆಯನ್ನು ಶೇ. 20ಕ್ಕೆ ಹೆಚ್ಚಿಸಲಾಯಿತು.

ಇದರಿಂದಾಗಿ ಆರಂಭದಲ್ಲಿ ವರ್ಷಕ್ಕೆ 45 ಮಿಲಿಯನ್ ಡಾಲರ್ (369 ಕೋಟಿ ರೂಪಾಯಿ) ಇದ್ದ ಇದರ ಆದಾಯವು ಈಗ 200 ಮಿಲಿಯನ್ ಡಾಲರ್​ಗೆ (1640 ಕೋಟಿ ರೂಪಾಯಿ) ಏರಿಕೆಯಾಗಿದೆ. 1999ರಲ್ಲಿ ತಾಲಿಬಾನ್ ಆಡಳಿತವು ಹೆರಾಯಿನ್ ಪ್ರಯೋಗಾಲಯಗಳಿಗೆ ತೆರಿಗೆ ವಿಧಿಸಿತು. ಅಫೀಮು ಕೃಷಿಗೆ ಅಧಿಕೃತ ಸರ್ಕಾರಿ ಪರವಾನಗಿಗಳನ್ನು ಒದಗಿಸಲು, ಗಸಗಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬೆಳೆಯುವುದು ಹೇಗೆಂದು ರೈತರಿಗೆ ಕಲಿಸುವ ಮಾದರಿ ಫಾಮರ್್​ಗಳನ್ನು ಸ್ಥಾಪಿಸಲು ಮತ್ತು ರಸಗೊಬ್ಬರಗಳನ್ನು ವಿತರಿಸಲು ತಾಲಿಬಾನ್ ಕ್ರಮ ಕೈಗೊಂಡಿತು. ಈ ಮೂಲಕ ಮಾದಕದ್ರವ್ಯದ ಆರ್ಥಿಕತೆಯನ್ನು ವಿಸ್ತರಿಸಲು ಪ್ರಯತ್ನಿಸಿತು, ಕಾರ್ವಿುಕರ ಅಗತ್ಯವಿರುವ ಗಸಗಸೆ ಕೃಷಿ ಗ್ರಾಮೀಣ ಅಫ್ಘಾನಿಸ್ತಾನದಲ್ಲಿ ಉದ್ಯೋಗದ ಉತ್ತಮ ಮೂಲವಾಯಿತು.

ಅಮೆರಿಕದ ಅನಾದರ

ಅಫ್ಘಾನಿಸ್ತಾನದಲ್ಲಿನ ಅಫೀಮು ವ್ಯಾಪಾರದ ಕುರಿತಂತೆ ಅಮೆರಿಕವು ನಿರ್ಲಕ್ಷ್ಯ ಧೋರಣೆಯನ್ನೇ ಹೊಂದಿದೆ. ತಾಲಿಬಾನ್ ವಿರುದ್ಧದ ಹೋರಾಟದಲ್ಲಿ, ಅದು ಸ್ವತಃ ವ್ಯಾಪಾರದಲ್ಲಿದ್ದ ಸೇನಾಧಿಕಾರಿಗಳ ಬೆಂಬಲವನ್ನು ಪಡೆಯಿತು. ಈ ಶತಮಾನದ ಆರಂಭದ ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ಗಸಗಸೆ ಅರಮನೆಗಳಿಗೆ ಕಾಬೂಲ್​ನ ಶೆರ್ಪರ್ ಪ್ರದೇಶ ಹೆಸರುವಾಸಿಯಾಗಿತ್ತು. ಶೆರ್ಪರ್​ದಲ್ಲಿ ಅಫ್ಘನ್ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಗೆ ಸೇರಿದ ಮನೆಯಲ್ಲಿಯೇ ಅಲ್-ಖೈದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿ ಆಗಸ್ಟ್​ನಲ್ಲಿ ಕೊಲ್ಲಲ್ಪಟ್ಟ. ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಡಳಿತದೊಂದಿಗಿನ ಮಾತುಕತೆಯ ಸಮಯದಲ್ಲಿ ಮಾದಕವಸ್ತು ವ್ಯಾಪಾರ ವಿಷಯ ಚರ್ಚೆಗೆ ಬಂದಿರಲಿಲ್ಲ. ಅಲ್ಲದೆ, ಅಮೆರಿಕ ಮತ್ತು ತಾಲಿಬಾನ್ ಸಹಿ ಮಾಡಿದ 2020 ದೋಹಾ ಒಪ್ಪಂದದಲ್ಲಿಯೂ ಅಕ್ರಮ ಡ್ರಗ್ಸ್ ವ್ಯಾಪಾರದ ಬಗ್ಗೆ ಉಲ್ಲೇಖ ಮಾಡಿಲ್ಲ. ಪ್ರಸ್ತುತ ಅಮೆರಿಕದ ಜೋ ಬೈಡೆನ್ ಆಡಳಿತವು ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳ ವಾಪಸಾತಿ ಪೂರ್ಣಗೊಳಿಸುವ ಹೊತ್ತಿಗೆ, ತಾಲಿಬಾನ್​ನ ಬೊಕ್ಕಸವು ಈ ವರ್ಷದ ಅಫೀಮು ಹಣದಿಂದ ಭರ್ತಿಯಾಗಿತ್ತು.