ಶಿವಮೊಗ್ಗದಲ್ಲಿ ವೈದ್ಯ ಸಾಹಿತಿ ಡಾ. ಎಚ್.ಡಿ.ಚಂದ್ರಪ್ಪ ಗೌಡ ಅವರ ಸಂಸ್ಮರಣೆ ಮತ್ತು ಸಾಹಿತ್ಯ ಸಂಪುಟಗಳನ್ನು ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್.ಚಂದ್ರಶೇಖರ್ ಬಿಡುಗಡೆಗೊಳಿಸಿದರು. ಡಾ. ಕೆ.ಆರ್.ಶ್ರೀಧರ್, ಡಾ. ಡಿ.ವಿ.ಪರಮಶಿವಮೂರ್ತಿ, ಡಾ. ಗುರುದತ್, ರಮೇಶ್ ಉಡುಪ, ಡಾ. ಮಾಧವ ಪೆರಾಜೆ ಇದ್ದರು. 
ನ್ಯೂಸ್

ವೈದ್ಯ ಸಾಹಿತ್ಯಕ್ಕಿದೆ ಹೆಚ್ಚು ಬೇಡಿಕೆ: ಡಾ. ಸಿ.ಆರ್.ಚಂದ್ರಶೇಖರ್

ಶಿವಮೊಗ್ಗ: ವೈದ್ಯ ಸಾಹಿತಿ ಡಾ. ಎಚ್.ಡಿ.ಚಂದ್ರಪ್ಪ ಗೌಡ ಅವರು ಜನರಲ್ಲಿದ್ದ ಮೂಢನಂಬಿಕೆ, ಅಜ್ಞಾನವನ್ನು ನಿರ್ಮೂಲನೆ ಮಾಡಲು ಅಕ್ಷರ ರೂಪದಲ್ಲಿ ಶ್ರಮಿಸಿದ್ದರು ಎಂದು ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್.ಚಂದ್ರಶೇಖರ್ ಬಣ್ಣಿಸಿದರು.

ಕುವೆಂಪು ರಂಗಮಂದಿರದಲ್ಲಿ ಭಾನುವಾರ ವೈದ್ಯ ಸಾಹಿತಿ ಡಾ. ಎಚ್.ಡಿ.ಚಂದ್ರಪ್ಪ ಗೌಡ ಅವರ ಸಂಸ್ಮರಣೆ ಮತ್ತು ಸಾಹಿತ್ಯ ಸಂಪುಟಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಜ್ಜನರು, ವಿನಯವಂತಿಕೆ, ಪ್ರಾಮಾಣಿಕತೆ ಹೊಂದಿದ್ದ ಚಂದ್ರೇಗೌಡರು ಕನ್ನಡ ವೈದ್ಯ ಸಾಹಿತ್ಯಕ್ಕೆ ಕೊಟ್ಟ ಒಂದೊಂದು ಕೃತಿಗಳು ಅಮೂಲ್ಯ. ವೈದ್ಯ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅವಿಸ್ಮರಣೀಯ ಎಂದರು.
ರಾಜ್ಯದಲ್ಲಿ ಅಲೋಪಥಿ ಒಳಗೊಂಡಂತೆ ಸುಮಾರು ಎರಡು ಲಕ್ಷ ವೈದ್ಯರಿದ್ದಾರೆ. ಆದರೆ ಅದರಲ್ಲಿ ಕನ್ನಡ ವೈದ್ಯ ಸಾಹಿತ್ಯ ರಚನೆ ಮಾಡಿದವರ ಸಂಖ್ಯೆ 150. ಜನರು ಅನೇಕ ಕಾಯಿಲೆಗಳಿಗೆ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಲ್ಲ. ನಾಟಿ ವೈದ್ಯರು ಅಥವಾ ಮನೆ ಮದ್ದು ತೆಗೆದುಕೊಳ್ಳುತ್ತಾರೆ. ಮೌಢ್ಯಕ್ಕೆ ಒಳಗಾಗುತ್ತಾರೆ. ಇದನ್ನು ಮನಗಂಡ ಚಂದ್ರಪ್ಪಗೌಡರು ಸಮಗ್ರ ವೈದ್ಯ ಸಾಹಿತ್ಯ ಮತ್ತು ಸಮೃದ್ಧ ವೈದ್ಯ ಸಾಹಿತ್ಯ ಕೃತಿಗಳನ್ನು ಹೊರತಂದಿದ್ದು, ಅವುಗಳನ್ನು ಓದುವ ಮೂಲಕ ಆರೋಗ್ಯದ ಕಾಳಜಿ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪ್ರಗತಿಪರ ರೈತ ಮಹಿಳೆ ಎಚ್.ಸಿ.ಆಶಾ ಶೇಷಾದ್ರಿ ಮಾತನಾಡಿದರು. ಪ್ರಾಧ್ಯಾಪಕ ಡಾ. ಗುರುದತ್ ಅವರು ಸಾಹಿತ್ಯ ಸಂಪುಟಗಳ ಪರಿಚಯ ಮಾಡಿಕೊಟ್ಟರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ.ಪರಮಶಿವಮೂರ್ತಿ, ನವ ಕರ್ನಾಟಕ ಪಬ್ಲಿಕೇಷನ್‌ನ ರಮೇಶ್ ಉಡುಪ, ಹಂಪಿ ವಿವಿ ಪ್ರಸಾರಾಂಗ ನಿರ್ದೇಶಕ ಡಾ. ಮಾಧವ ಪೆರಾಜೆ ಉಪಸ್ಥಿತರಿದ್ದರು.

ಕನ್ನಡ ವೈದ್ಯ ಸಾಹಿತ್ಯದ ಪಿತಾಮಹ
ವೈದ್ಯ ಸಾಹಿತ್ಯ ಎಂಬುದು ಅನಾಥ ಕೂಸು. ತಮಿಳು, ಮರಾಠಿ ಸೇರಿ ಕೆಲ ಭಾಷೆಗಳಲ್ಲಿ ಅನೇಕ ವೈದ್ಯ ಪುಸ್ತಕಗಳಿವೆ. ಆದರೆ ಕನ್ನಡದಲ್ಲಿ ವೈದ್ಯ ಪುಸ್ತಕಗಳಿಲ್ಲ. ಕನ್ನಡದಲ್ಲಿ ಪುಸ್ತಕ ಬರೆಯುವವರೇ ಇಲ್ಲ. ಡಾ. ಎಚ್.ಡಿ.ಚಂದ್ರಪ್ಪ ಗೌಡ ಕನ್ನಡದಲ್ಲಿ ಪುಸಕ್ತ ಬರೆಯಲು ಆರಂಭಿಸಿದರು. ಹಾಗಾಗಿ ಅವರು ಕನ್ನಡ ವೈದ್ಯ ಸಾಹಿತ್ಯಕ್ಕೆ ಪಿತಾಮಹ ಆಗಿದ್ದಾರೆ ಎಂದು ಮನೋವೈದ್ಯ ಡಾ. ಕೆ.ಆರ್.ಶ್ರೀಧರ್ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಎಚ್.ಡಿ.ಚಂದ್ರಪ್ಪ ಗೌಡ ಮತ್ತು ಸಿ.ಆರ್.ಚಂದ್ರಶೇಖರ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ನನಗೆ ದಾರಿ ದೀಪವಾಗಿದ್ದಾರೆ ಎಂದರು.