ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಮಂಗಳೂರು ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಹಿತಿ ನೀಡಿದರು.
ಮಂಗಳೂರು: ಅಡ್ಡ ಮತದಾನವು ನನ್ನ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ನಡುವಿನ ವ್ಯವಹಾರಿಕ ಮತ್ತು ಆತ್ಮೀಯ ಸಂಬಂಧದ ಫಲ ಎಂಬ ಅಪಪ್ರಚಾರವನ್ನು ನಮ್ಮವರೇ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ಆಶೀರ್ವಾದದಿಂದ ನಾನು ಅಧ್ಯಕ್ಷನಾಗಿದ್ದೇನೆ. ಇಂತಹ ಕೀಳು ಮಟ್ಟದ ಯೋಚನೆಯನ್ನು ನಾನು ಎಂದಿಗೂ ಮಾಡುವುದಿಲ್ಲ. ಡಿ.ಕೆ. ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ರೀತಿಯ ವ್ಯವಹಾರಿಕ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಮಂಗಳೂರು ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದ ಅವರು ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದರು.
ಅಪಪ್ರಚಾರ ಮಾಡುವವರಿಗೂ ಭಗವಂತ ಒಳ್ಳೆಯದನ್ನು ಮಾಡಲಿ, ?ರೈತರು, ಬಡವರು ಮತ್ತು ಯುವಕರ ವಿರೋಧಿಯಾಗಿರುವ ಈ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯುವ ವಿಶ್ವಾಸವಿದೆ ಎಂದ ಅವರು, ಮೊನ್ನೆಯಷ್ಟೇ ರಾಜ್ಯದ ಸಾಕಷ್ಟು ಶಾಸಕರು ತಮಗೆ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲ ದೂರವಾಗಿ, ಸಮೃದ್ಧ ಮಳೆಯಾಗಲಿ ಮತ್ತು ರೈತರ ಬೆಳೆಗೆ ಯೋಗ್ಯ ಬೆಲೆ ಸಿಗಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿರುವುದಾಗಿ, ಕರ್ನಾಟಕದಲ್ಲಿ ಮತ್ತೊಮ್ಮೆ ಹಿಂದೂಗಳ ರಕ್ಷಣೆ ಮಾಡುವ ಹಾಗೂ ಜನಪರವಾದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎನ್ನುವುದು ತಮ್ಮ ಮುಖ್ಯ ಪ್ರಾರ್ಥನೆಯಾಗಿದೆ ಎಂದರು.
*ಅಡ್ಡ ಮತದಾನದಿಂದ ಕಾರ್ಯಕರ್ತರಿಗೆ ನೋವು
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಲಿಂಗರಾಜು ಪಾಟೀಲ್ ಮತ್ತು ರಘು ಕೌಟಿಲ್ಯ ಅವರು ಜಯಗಳಿಸಿದ್ದಾರೆ. ಆದರೆ, ಈ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಶಾಸಕರಿಂದ ನಡೆದ ಅಡ್ಡ ಮತದಾನ ತಮಗೆ ಹಾಗೂ ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ನೋವುಂಟು ಮಾಡಿದೆ. ನಾನು ಭಾವನಾತ್ಮಕ ವ್ಯಕ್ತಿ. ಅಡ್ಡ ಮತದಾನದ ಚರ್ಚೆಗಳು ಎದ್ದಾಗ ಶಾಸಕಾಂಗ ಪಕ್ಷದ ಸಭೆ ಮತ್ತು ಆಣೆ-ಪ್ರಮಾಣ ಧರ್ಮಸ್ಥಳದಲ್ಲೇ ಆಗಬೇಕು ಎಂದು ನನ್ನ ಮನಸ್ಸಿಗೆ ತೋಚಿದ್ದನ್ನು ಹೇಳಿದ್ದೆ. ಆದರೆ ಪಕ್ಷದ ಹಿರಿಯರು ಧರ್ಮಸ್ಥಳದ ತನಕ ಹೋಗುವುದು ಬೇಡ ಎಂದು ಸಲಹೆ ನೀಡಿದ್ದರು. ಇಂದು ನಾನು ದೇವರ ಪರಮ ಭಕ್ತನಾಗಿ ಈ ಕ್ಷೇತ್ರಕ್ಕೆ ಬಂದಿದ್ದೇನೆ ಎಂದರು.
ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ಟೀಕೆಗಳಿಗೆ ಉತ್ತರಿಸಿದ ವಿಜಯೇಂದ್ರ, 2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ 18 ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹೂಡಿ ಕುಗ್ಗಿಸುವ ಕೆಲಸ ನಡೆದಿತ್ತು. ಅಂತಹ ಸಂದರ್ಭದಲ್ಲಿ 17 ಶಾಸಕರು ರಾಜೀನಾಮೆ ನೀಡಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವವನ್ನು ನಂಬಿ ಬಂದಿದ್ದರಿಂದಲೇ ರಾಜ್ಯದಲ್ಲಿ ಉತ್ತಮ ಬಿಜೆಪಿ ಸರ್ಕಾರ ರಚನೆಯಾಗಲು ಸಾಧ್ಯವಾಯಿತು. ಅಂದು ಶಾಸಕರು ಕೈಜೋಡಿಸಿದ್ದರಿಂದಲೇ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕಾರ ಅನುಭವಿಸಿದರು. ಆದರೆ ಇಂದು ಅವರಿಗೆ ಎಲ್ಲವೂ ಮರೆತುಹೋಗಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿ ಶಾಸಕರ ಬೇರೆ ಬೇರೆ ಹೆಸರುಗಳನ್ನು ತೇಲಿಬಿಡುತ್ತಿರುವುದರಿಂದ ಸ್ವಕ್ಷೇತ್ರದ ಕಾರ್ಯಕರ್ತರು ಶಾಸಕರನ್ನು ಅನುಮಾನದಿಂದ ನೋಡುವಂತಾಗಿದೆ. ಆದರೆ ಸತ್ಯ ಇಂದಲ್ಲ ನಾಳೆ ಹೊರಬರಲಿದೆ ಎಂದರು.
ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ಅಡ್ಡ ಮತದಾನದ ಬಳಿಕ ಕರೆ ಮಾಡಿದ್ದರ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಅವರಿಗೆ ನನ್ನ ಫೋನ್ ಸಿಕ್ಕಿರಲಿಲ್ಲ. ಆದರೆ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಫೋನ್ ಮಾಡಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಪ್ರಧಾನ ಕಾರ್ಯದರ್ಶಿಯವರನ್ನು ವಿಚಾರಿಸಿದಾಗ, ಸದಾನಂದಗೌಡರು ಅಂತಹ ಯಾವುದೇ ಮಾಹಿತಿ ನೀಡಿಲ್ಲ ಎಂದರು.
ಇದೇ ವೇಳೆ ಬಿಡದಿ ಟೌನ್‌ಶಿಪ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ರೈತರ ಪರವಾಗಿ ಬಿಜೆಪಿ ಬೃಹತ್ ಹೋರಾಟ ರೂಪಿಸಲಿದ್ದು, ಈ ಕುರಿತು ಶನಿವಾರ ಬೆಂಗಳೂರಿನಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಸಂಸದ ಕ್ಯಾ.ಬೃಜೇಶ್ ಚೌಟ, ದ.ಕ ಹಾಗೂ ಉಡುಪಿಯ ಶಾಸಕರು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.