ನ್ಯೂಸ್

ಮೂತ್ರಕಲ್ಲು ಉಂಟಾಗಲು ಕಾರಣಗಳು ಹಲವು!

ಜಗತ್ತಿನಲ್ಲಿ ಮನುಷ್ಯರನ್ನು ರೋಗಿಷ್ಟರನ್ನಾಗಿಸುವ ಸಾವಿರಾರು ಕಾಯಿಲೆಗಳಿವೆ. ಅವುಗಳಲ್ಲಿ ಎಂಟು ರೋಗಗಳಿಗೆ ಆಯುರ್ವೆದದಲ್ಲಿ ಮಹಾಗದ ಎನ್ನಲಾಗಿದೆ. ಗದ ಅಂದರೆ ರೋಗ. ತೀವ್ರವಾಗಿ ಕಾಡುವ ಕಾಯಿಲೆ ಮಹಾಗದ. ಮೂತ್ರಪಿಂಡದ ಕಲ್ಲು ಅವುಗಳಲ್ಲೊಂದು. ಅತಿಯಾಗಿ ನರಳುವಿಕೆ ಇದ್ದಾಗ ಯಮಯಾತನೆ ಎದು ಬಳಸುವುದಿದೆ.

ಈ ಪದದ ಬಳಕೆಯನ್ನು ಮೂರುಸಾವಿರ ವರ್ಷಗಳ ಹಿಂದೆ ಆಯುರ್ವೆದದ ಮೂಲ ಗ್ರಂಥಗಳಲ್ಲಿ ಮೂತ್ರದ ಕಲ್ಲನ್ನು ವಿವರಿಸುವ ಸಂದರ್ಭದಲ್ಲಿ ಬಳಸಲಾಗಿದೆ. ಜಗತ್ತಿನಾದ್ಯಂತ ಎಲ್ಲೆಡೆಯೂ ಕಂಡುಬರುವ ಈ ವ್ಯಾಧಿ ಎಲ್ಲ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತದೆ. ಮೂವತ್ತರಿಂದ ಅರವತ್ತು ವರ್ಷ ಪ್ರಾಯದವರಲ್ಲಿ ಹೆಚ್ಚಾಗಿ ಉಂಟಾಗುತ್ತಿದ್ದು ಪುರುಷರಲ್ಲೇ ಅಧಿಕವಾಗಿದೆ. ಸರಿಸುಮಾರು ಹತ್ತರಲ್ಲಿ ಒಬ್ಬ ಪುರುಷನಲ್ಲಿ, ಹದಿನೈದರಲ್ಲಿ ಒಬ್ಬ ಮಹಿಳೆಯಲ್ಲಿ ಬದುಕಿನಲ್ಲಿ ಒಮ್ಮೆಯಾದರೂ ಈ ಮೂತ್ರಕಲ್ಲು ವಕ್ಕರಿಸುತ್ತದೆ!

ಆಧುನಿಕವಾಗಿ ಕಾಲ್ಸಿಯಂ ಆಕ್ಸಲೇಟ್ ಮತ್ತು ಫಾಸ್ಪೇಟ್, ಯೂರಿಕ್ ಕಲ್ಲು, ಸ್ಟ್ರೂವೈಟ್ ಕಲ್ಲು ಹಾಗೂ ಸಿಸ್ಟೈನ್ ಕಲ್ಲು ಎಂಬುದಾಗಿ ನಾಲ್ಕು ಮುಖ್ಯವಿಧಗಳಲ್ಲಿ ಮೂತ್ರದಕಲ್ಲನ್ನು ವಿವರಿಸಲಾಗಿದೆ. ಆಯುರ್ವೆದದಲ್ಲೂ ವಾತಜ, ಪಿತ್ತಜ, ಕಫಜ ಹಾಗೂ ಶುಕ್ರಜ ಎಂಬ ನಾಲ್ಕು ವಿಧದ ಮೂತ್ರದ ಕಲ್ಲುಗಳನ್ನು ವಿವರಿಸಲಾಗಿದೆ! ಮೂತ್ರದಕಲ್ಲಿಗೆ ಆಯುರ್ವೆದದಲ್ಲಿ ಅಶ್ಮರೀ ಎಂದು ಹೆಸರಿಸಲಾಗಿದೆ. ಕಳೆದೆರಡು ದಶಕಗಳಿಂದ ಮೂತ್ರಪಿಂಡ ಕಲ್ಲಿನಿಂದ ಬಳಲುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಗಮನಹರಿಸಲೇಬೇಕಾದ ವಿಚಾರ.

ಉಳಿದ ತ್ಯಾಜ್ಯಗಳ ಜೊತೆಗೆ ದೇಹದಲ್ಲಿ ಹೆಚ್ಚಾಗಿರುವ ಖನಿಜ ಹಾಗೂ ಆಮ್ಲೀಯ ಅಂಶಗಳು ಮೂತ್ರಪಿಂಡದ ಮೂಲಕ ಹೊರ ಹಾಕಲ್ಪಡುತ್ತವೆ. ಇವು ರಕ್ತದಲ್ಲಿ ಅಧಿಕವಾಗಿದ್ದಾಗ ಅವುಗಳ ಶೋಧನೆ ಪೂರ್ಣಮಟ್ಟದಲ್ಲಿ ಸಾಧ್ಯವಾಗದೆ ಹರಳುಗಳ ರೂಪ ತಾಳುತ್ತದೆ. ಈ ಸಣ್ಣ ಹರಳಿನ ಕಣಗಳು ಒಂದಕ್ಕೊಂದು ಅಂಟಿಕೊಂಡು ಕಲ್ಲಿನ ಆಕಾರ ಪಡೆಯುತ್ತವೆ.

ಮೂತ್ರಪಿಂಡ, ಮೂತ್ರನಾಳ, ಮೂತ್ರಾಶಯ ಹೀಗೆ ಮೂತ್ರವಹ ಸ್ರೋತಸ್​ನ ಎಲ್ಲಾ ಭಾಗಗಳಲ್ಲಿ ಇದ್ದುಕೊಂಡು ಮನುಷ್ಯರನ್ನು ಬಾಧಿಸುತ್ತದೆ. ವಾತದ ಒಣಗುಣ, ಕಫದ ಸ್ಥಿರಗುಣ, ಪಿತ್ತದ ಉಷ್ಣಗುಣ ಇವು ಮೂರೂ ಹೆಚ್ಚಾದಾಗ ಮೂತ್ರದ ಕಲ್ಲಿಗೆ ದಾರಿಮಾಡಿ ಕೊಡುತ್ತದೆ. ಹೆಚ್ಚುಗೊಂಡ ವಾತದಿಂದಾಗಿ ಮೂತ್ರದಲ್ಲಿರುವ ಕಫದ ಅಂಶ ಶುಷ್ಕವಾಗಿ ಮೂತ್ರಾಶ್ಮರೀ ಉಂಟಾಗುತ್ತದೆ. ಇದರಂತೆ ಪುರುಷರ ಮೂತ್ರನಾಳದಲ್ಲಿ ವೀರ್ಯವನ್ನು ಒಣಗಿಸಿ ಶುಕ್ರಾಶ್ಮರೀ, ಪಿತ್ತಕೋಶದಲ್ಲಿರುವ ಪಿತ್ತವನ್ನು ಒಣಗಿಸಿ ಪಿತ್ತಾಶ್ಮರೀ ಕಾಣಿಸಿಕೊಳ್ಳುತ್ತದೆ.

ಆಗಸದಲ್ಲಿನ ತಂಪಾದ ಗಾಳಿ, ಮಿಂಚಿನಿಂದ ಉಂಟಾಗುವ ಬಿಸಿ ಎರಡೂ ಸೇರಿಕೊಂಡು ಮಳೆಯ ಹನಿಗಳು ಘನೀಕರಿಸಿ ಆಲಿಕಲ್ಲು ಉಂಟಾಗುವಂತೆ ವಾತ ಹಾಗೂ ಪಿತ್ತಗಳು ಕಫದ ಮೇಲೆ ಪ್ರಭಾವ ಬೀರಿ ಮೂತ್ರದಕಲ್ಲು ಉತ್ಪತ್ತಿಯಾಗುತ್ತದೆ. ಮೂತ್ರದಕಲ್ಲು ಉತ್ಪತ್ತಿಯಾಗಲು ಹಲವಾರು ಕಾರಣಗಳಿವೆ. ಪ್ರತಿನಿತ್ಯ ಆರುಬಾರಿ ಸಂಪೂರ್ಣವಾಗಿ ಮೂತ್ರಮಾಡಲು ಅಗತ್ಯವಾದಷ್ಟು ನೀರನ್ನು ಕುಡಿಯಬೇಕು.

ಇದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದು, ಮೂತ್ರ ಮಾಡುವ ವಾಂಛೆಯಿದ್ದಾಗ ಅದನ್ನು ತಡೆಯುವುದು, ಕಾಲಕ್ಕೆ ಸರಿಯಾಗಿ ಮೂತ್ರ ವಿಸರ್ಜಿಸದಿರುವುದು, ಒಣ ಅಥವಾ ಜಿಡ್ಡಿನಿಂದ ಕೂಡಿದ, ಜೀರ್ಣಕ್ಕೆ ಕಷ್ಟಪ್ರದವಾದ, ಸಿಹಿ, ಶೀತಲ, ಪಿಷ್ಟ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದು, ದೇಹಕ್ಕೆ ಹಿತವಲ್ಲದ ಆಹಾರ ಸೇವನೆ, ಪದೇಪದೇ ಆಹಾರ ಸೇವಿಸುವುದು, ಖರ್ಜೂರ, ತಾವರೆಯ ಗಡ್ಡೆ, ದಂಟು, ಬೇಲದಹಣ್ಣು, ಜಂಬುನೇರಳೆಹಣ್ಣು ಸೇರಿದಂತೆ ಮೂತ್ರಪ್ರವಾಹವನ್ನು ಕಡಿಮೆಗೊಳಿಸುವ ಒಗರುರುಚಿಯ ಪದಾರ್ಥಗಳ ಅತಿಸೇವನೆ, ಆಹಾರ ಸೇವಿಸುವ ಕಾಲ ತಪ್ಪಿಸಿ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಮಾಡಿ ಊಟಮಾಡುವುದು, ಅತಿಯಾಗಿ ವ್ಯಾಯಾಮ ಹಾಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು, ಹೆಚ್ಚು ಹೊತ್ತು ಬಿಸಿಲಿನಲ್ಲಿ ಇರುವುದರಿಂದ ಬೆವರು ಹೆಚ್ಚಾಗಿ ಮೂತ್ರ ಪ್ರಮಾಣ ಕಡಿಮೆಯಾಗುವುದು, ಹಗಲು ಹೊತ್ತಿನಲ್ಲಿ ನಿದ್ರಿಸುವುದು.

ಹಸಿರು ಸೊಪ್ಪು, ಟೊಮ್ಯಾಟೋ, ಗೋಡಂಬಿ, ಚಾಕಲೆಟ್, ಸೋಯಾಬೀನ್ಸ್, ಬೀಟ್​ರೂಟ್, ಬೆಂಡೆಕಾಯಿ, ಸಿಹಿಗೆಣಸು, ಚಹಾ, ತರಕಾರಿ ಹಾಗೂ ಹಣ್ಣುಗಳ ಬೀಜಗಳು, ಎಳ್ಳು, ಉಪ್ಪು, ಸಕ್ಕರೆ, ಬೆಲ್ಲ, ಮೀನು, ಮಾಂಸ, ಪೋ›ಟೀನ್​ಯುುಕ್ತ ಪದಾರ್ಥಗಳ ಅತಿ ಸೇವನೆಯಿಂದ ಮೂತ್ರಕಲ್ಲು ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಕ್ಯಾಲ್ಸಿಯಂ ಭರಿತ ಪ್ರಾಕೃತಿಕ ಆಹಾರ ಸೇವನೆಯಿಂದ ಯಾವುದೇ ತೊಂದರೆಯುಂಟಾಗದೆ ರಾಸಾಯನಿಕ ಕ್ಯಾಲ್ಸಿಯಂ ಗುಳಿಗೆಗಳನ್ನು ಪೂರಕ ರೂಪದಲ್ಲಿ ತೆಗೆದುಕೊಂಡಾಗ ಹಾನಿಯಾಗುತ್ತದೆಂಬ ವೈಜ್ಞಾನಿಕ ಅಧ್ಯಯನ ವರದಿಗಳು ಇಲ್ಲಿ ಗಮನಾರ್ಹ.

ಮೂತ್ರದ ಕಲ್ಲಿನ ಉತ್ಪತ್ತಿ ಪ್ರಾರಂಭಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆಯುವುದು ಸುಲಭದ ಹಾದಿ. ಕೆಳಹೊಟ್ಟೆ ಉಬ್ಬರ, ಮೂತ್ರಕಲ್ಲು ಉಂಟಾಗುತ್ತಿರುವ ಸ್ಥಳದಲ್ಲಿ ನೋವು, ಆಡಿನ ಮೂತ್ರದಂತೆ ಮೂತ್ರದ ವಾಸನೆ, ಮೂತ್ರಾಂಗಗಳಲ್ಲಿ ವೇದನೆ, ಬಣ್ಣದಲ್ಲಿ ವ್ಯತ್ಯಾಸವಾಗಿ ಕಷ್ಟದಿಂದ ಮೂತ್ರ ಪ್ರವೃತ್ತಿಯಾಗುವುದು, ಜ್ವರ ಹಾಗೂ ಬಾಯಿರುಚಿ ಇಲ್ಲದಿರುವುದೂ ಆಯುರ್ವೆದದ ಪ್ರಕಾರ ಸಮಸ್ಯೆಯ ಆರಂಭಿಕ ಲಕ್ಷಣವಾಗಿದೆ. (ಪ್ರತಿಕ್ರಿಯಿಸಿ: vvsudina@gmail.com)