ಕಳಸ: ದಶಕಗಳ ಹಿಂದೆ 30 ಬೆಡ್ ಸಾಮರ್ಥ್ಯದ ಸುಮುದಾಯ ಆರೋಗ್ಯ ಕೇಂದ್ರ ಮಂಜೂರಾದಾಗ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ ದುಪ್ಪಟ್ಟು ಹಣ ತೆತ್ತು ಖಾಸಗಿ ಆಸ್ಪತ್ರೆಗೆ ಅಲೆದಾಡುವುದು ತಪ್ಪಲಿದೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ಇಲ್ಲಿ ಸಮರ್ಪಕ ಆರೋಗ್ಯ ಸೇವೆ ಸಿಗದೆ ಸಾಮಾನ್ಯರು ಪರದಾಡುವಂತಾಗಿದೆ.
ಇಲ್ಲಿ ನಾಲ್ಕಕ್ಕೆ ನಾಲ್ಕೂ ವೈದ್ಯರ ಹುದ್ದೆ, ಆರು ಶುಶ್ರೂಕಿಯರ ಪೈಕಿ ಮೂರು, ಎರಡು ಾರ್ಮಾಸಿಸ್ಟ್ ಪೈಕಿ ಎರಡೂ, ಒಂದು ಕಚೇರಿ ಅಧೀಕ್ಷಕರ ಹುದ್ದೆಯೂ, ವಾಹನ ಚಾಲಕ ಎರಡೂ ಹುದ್ದೆ, ಎಲ್ಲ 12 ಡಿ ಗ್ರೂಪ್ ನೌಕರರ ಹುದ್ದೆಯೂ ಖಾಲಿ ಇದೆ. ಹೀಗೆ ಒಟ್ಟು 47 ಹುದ್ದೆಗಳ ಪೈಕಿ 39 ಹುದ್ದೆಗಳು ಖಾಲಿ ಇದ್ದು, ಕೇವಲ 8 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗುತ್ತಿಗೆ ಆಧಾರದ ಮೇಲಿರುವ ಬೆರಳೆಣಿಕೆಯಷ್ಟು ಸಿಬ್ಬಂದಿ ಇಡೀ ಆಸ್ಪತ್ರೆಯನ್ನು ನೋಡಿಕೊಳ್ಳುವ ಪರಿಸ್ಥಿತಿ ಇದೆ. ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಇರುವಾಗ ಸಮರ್ಪಕ ಚಿಕಿತ್ಸೆ ದೊರೆಯುತ್ತಿತ್ತು. ಆದರೆ ಈಗ ರೋಗಿಗಳಿಲ್ಲದೆ ಬಿಕೋ ಅನ್ನುತ್ತಿದೆ. ಬೆಡ್‌ಗಳು ಖಾಲಿ ಬಿದ್ದಿವೆ. ಈ ಆಸ್ಪತ್ರೆ ಮೇಲೆ ರೋಗಿಗಳಿಗೆ ನಂಬಿಕೆಯೇ ಇಲ್ಲದಂತಾಗಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗಳ ಮೊರೆಹೋಗುತ್ತಿದ್ದಾರೆ. ಅವಘಡದಲ್ಲಿ ಮೃತರಾದವರ ಮರಣೋತ್ತರ ಪರೀಕ್ಷೆಗಾಗಿ ದಿನವಿಡೀ ಕಾಯುವಂತಹ ಪರಿಸ್ಥಿತಿ ಇದೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಸೂಕ್ತ ವೈದ್ಯರ ನೇಮಕ ಮಾಡದಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಸಂದರ್ಭ ಕಳಸಕ್ಕೆ ಸುಸಜ್ಜಿತ ಆಸ್ಪತ್ರೆ ತಂದುಕೊಟ್ಟವರು ನಾವು ಎಂದು ಭಾಷಣ ಮಾಡಿದ ಅಭ್ಯರ್ಥಿಗಳು ಚುನಾಯಿತರಾದ ಮೇಲೆ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಗಮನಹರಿಸದಿರುವುದು ವಿಪರ್ಯಾಸವೇ ಸರಿ.
ಕಳಸ ಸಮುದಾಯ ಆಸ್ಪತ್ರೆಯಲ್ಲಿ ಕಾರ್ಯ ವೈದ್ಯರಿಲ್ಲದೆ ರೋಗಿಗಳಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳು, ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತಂದರೂ ಯಾವ ಪ್ರಯೋಜನವೂ ಆಗಿಲ್ಲ. ಕಾಯಂ ವೈದ್ಯರ ನೇಮಕ ಆಗುವವರೆಗೂ ಆಸ್ಪತ್ರೆ ಎದುರು ನಿರಂತರವಾಗಿ ಧರಣಿ ಮಾಡುತ್ತೇವೆ ಎನ್ನುತ್ತಾರೆ ಸಿಪಿಐ ಮುಖಂಡ ಲಕ್ಷ್ಮಣಾಚಾರ್.