ನವದೆಹಲಿ: ಆಯಸ್ಸು ಗಟ್ಟಿಯಾಗಿದ್ದರೆ ಏನೇ ಬಂದರೂ ಸುಲಭದಲ್ಲಿ ಸಾಯುವುದಿಲ್ಲ, ಎಷ್ಟು ವರ್ಷ ಬದುಕಬೇಕು ಎಂದು ಹಣೆಯಲ್ಲಿ ಬರೆದಿರುತ್ತದೆಯೋ ಅದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎನ್ನುವ ಮಾತಿದೆ.
ಅಂಥದ್ದೇ ಒಂದು ಮಾತಿಗೆ ಜೀವಂತ ಸಾಕ್ಷಿ ದೆಹಲಿಯ 106 ವರ್ಷದ ಅಜ್ಜ. ಕರೊನಾ ಸೋಂಕಿನಿಂದ ಬಳಲುತ್ತಿದ್ದ ಈ ಅಜ್ಜ ಇದೀಗ ಬಹುಬೇಗನೇ ಚೇತರಿಸಿಕೊಂಡು ವೈದ್ಯರಿಗೇ ಅಚ್ಚರಿ ಉಂಟುಮಾಡಿದ್ದಾರೆ. ಬಹುಶಃ ಇಷ್ಟೇ ಆಗಿದ್ದರೆ ಈ ವೃದ್ಧ ಇಷ್ಟೆಲ್ಲಾ ಪ್ರಚಾರಕ್ಕೇ ಬರುತ್ತಿರಲಿಲ್ಲವೇನೋ.
ಇದನ್ನೂ ಓದಿ: 100 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮುಚ್ಚಿದ ಗಡಿ!
ಇವರ ಜೀವನ ಕಥೆಯೇ ರೋಚಕವಾಗಿದೆ. 1918ರಲ್ಲಿ ಈ ಅಜ್ಜನಿಗೆ ಇನ್ನೂ ನಾಲ್ಕರ ಹರೆಯ. ಇಡೀ ವಿಶರ್ವವನ್ನೇ ಸ್ಪ್ಯಾನಿಶ್ ಫ್ಲ್ಯೂ ಬಾಧಿಸಿತ್ತು. ಜನಸಂಖ್ಯೆಯ ಮೂರನೇ ಒಂದರಷ್ಟು ಜನರಿಗೆ ಈ ರೋಗ ತಗುಲಿತ್ತು. ಇದು ಬಂದದ್ದು ಎಚ್1ಎನ್1 ವೈರಸ್‌ನಿಂದ. ಆಗ ಜಗತ್ತಿನಾದ್ಯಂತ ಸುಮಾರು ನಾಲ್ಕು ಕೋಟಿ ಮಂದಿ ಬಲಿಯಾಗಿದ್ದರು. ಈ ಪೈಕಿ ಐದನೇ ಒಂದು ಭಾಗದಷ್ಟು ಸಾವು ಸಂಭವಿಸಿದ್ದು ಭಾರತದಲ್ಲಿ.
ಆಗ ನಾಲ್ಕು ವರ್ಷದ ಪುಟಾಣಿಗೂ ಸೋಂಕು ಕಾಣಿಸಿಕೊಂಡಿತ್ತು. ಆದರೆ ಆತ ಬಹುಬೇಗನೆ ಸೋಂಕಿನಿಂದ ಗುಣಮುಖನಾಗಿದ್ದ. ಆತನ ಅನೇಕ ಮಂದಿ ಸಂಬಂಧಿಕರು ಸೋಂಕಿಗೆ ಬಲಿಯಾಗಿದ್ದರೂ ನಾಲ್ಕು ವರ್ಷದ ಮಗು ಮಾತ್ರ ಚೇತರಿಸಿಕೊಂಡಿತ್ತು.
ಅದೇ ಬಾಲಕ ಈಗ 106 ವರ್ಷದ ಅಜ್ಜ. ಇವರ ಸೇರಿದಂತೆ 70 ವರ್ಷದ ಇವರ ಮಗ ಹಾಗೂ ಕುಟುಂಬದ ಅನೇಕ ಮಂದಿಗೆ ಕರೊನಾ ಸೋಂಕು ಬಾಧಿಸಿದೆ. ಆದರೆ ಉಳಿದವರು ಇನ್ನೂ ಸೋಂಕಿನಿಂದ ಹೊರಕ್ಕೆ ಬಾರದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಈ ಅಜ್ಜ ಮಾತ್ರ ಗುಣಮುಖರಾಗಿ ಹೊರಬಂದಿದ್ದಾರೆ! (ಏಜೆನ್ಸೀಸ್)