ನ್ಯೂಸ್

ರಾಮಮಂದಿರದಿಂದ 1.25 ಲಕ್ಷ ರೂಪಾಯಿ ಮೌಲ್ಯದ ನಗ,ನಗದು ಕಳವು: ಸಿಸಿಟಿವಿ ಕ್ಯಾಮೆರಾವನ್ನೂ ಬಿಟ್ಟಿಲ್ಲ ಕಳ್ಳರು!

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ಎಂಬ ಪಟ್ಟಣ ಸಮೀಪದ ಕೋನ್​ಗಾಂವ್ ಎಂಬಲ್ಲಿನ ರಾಮಮಂದಿರಕ್ಕೆ ನುಗ್ಗಿದ ಕಳ್ಳರು ಒಂದೂಕಾಲು ಲಕ್ಷ ರೂಪಾಯಿ ಮೌಲ್ಯದ ನಗ,ನಗದನ್ನು ಕಳವುಮಾಡಿದ್ದಾರೆ.

ಸೋಮವಾರ ನಸುಕಿನಲ್ಲಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಸಿಸಿಟಿವಿ ಕ್ಯಾಮೆರಾ ಮತ್ತು ಅದರ ರೆಕಾರ್ಡರನ್ನು ಮೊದಲು ಚೀಲಕ್ಕೆ ತುಂಬಿಸಿದ್ದು, ನಂತರ ಕಚೇರಿಗೆ ನುಗ್ಗಿ ಕ್ಯಾಶ್ ಬಾಕ್ಸ್​ ಓಪನ್ ಮಾಡಿದ್ದಾರೆ. ಅಲ್ಲಿದ್ದ ನಗದನ್ನು ಬಾಚಿಕೊಂಡು ನಂತರ ದೇವರಿಗೆ ಸೇರಿದ ಚಿನ್ನಾಭರಣವನ್ನೂ ಹೊತ್ತುಕೊಂಡು ಹೋಗಿದ್ದಾರೆ.

ದೇವಸ್ಥಾನದ ಅರ್ಚಕರು ಸೋಮವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದ ವೇಳೆ ಕಳ್ಳತನ ನಡೆದಿರುವ ಕುರುಹು ಕಂಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು. ಸ್ತಳಕ್ಕೆ ಆಗಮಿಸಿದ ಪೊಲೀಸರು ಮಹಜರು ನಡೆಸಿ, ಐಪಿಸಿ ಸೆಕ್ಷನ್ 380ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಅಪರಾಧಿಗಳ ಪತ್ತೆಗೆ ಶೋಧಕಾರ್ಯ ಆರಂಭವಾಗಿದೆ. (ಏಜೆನ್ಸೀಸ್​)