ನ್ಯೂಸ್

ಐತಿಹಾಸಿಕ ಶ್ರೀ ಕಲ್ಲೇಶ್ವರ ದೇವಾಲಯದ ಬೀಗ ಒಡೆದು ಕಳ್ಳತನ

ವಿಜಯನಗರ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಮೂರು ಬಾಗಿಲುಗಳನ್ನು ಒಡೆದು ಒಳಗಡೆ ನುಗ್ಗಿರುವ ದುಷ್ಕರ್ಮಿಗಳು ಕಾಣಿಕೆ ಹುಂಡಿಯಲ್ಲಿದ್ದ ಹಣ ಕದ್ದು, ಪೂಜಾ ಸಾಮಗ್ರಿಗಳನ್ನು, ದಾಖಲಾತಿಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದಾರೆ.

ದೇವಾಲಯದ ಅರ್ಚಕ ಕಲ್ಲೇಶ್​ ಅವರು ಇಂದು ಬೆಳಿಗ್ಗೆ ಪೂಜೆ ಮಾಡಲು ಬಂದಾಗ ಈ ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಕಲ್ಲೇಶ್ವರ ದೇವಸ್ಥಾನದ ಮುಖ್ಯ ಬಾಗಿಲು ಮತ್ತು ಸೂರ್ಯನಾರಾಯಣ ದೇವರ ಬಾಗಿಲುಗಳ ಬೀಗಗಳನ್ನು ಒಡೆದಿದ್ದರು. ಇತ್ತೀಚೆಗೆ ನಿರ್ಮಾಣವಾಗಿದ್ದ ಶೌಚಾಲಯದ ಬಾಗಿಲು ಒಡೆದು ಗಾಜುಗಳನ್ನು ದ್ವಂಸಗೊಳಿಸಿದ್ದರು. ಪುರಾತತ್ವ ಇಲಾಖೆಗೆ ಸೇರಿದ ಈ ದೇವಾಲಯದ ಹುಂಡಿ ಎಣಿಕೆ ಕಳೆದ ಎರಡು ವರ್ಷಗಳಿಂದ ನಡೆದಿರಲ್ಲಿಲ್ಲ. ಲಾಕ್​ಡೌನ್​ನಿಂದಾಗಿ ಜನರು ಹೆಚ್ಚು ಬರುತ್ತಿರಲಿಲ್ಲ. ಲಾಕ್​ಡೌನ್​ ಸಡಿಲಿಕೆ ನಂತರ ಭಕ್ತರು ದೇವಾಲಯಕ್ಕೆ ಬರುತ್ತಿದ್ದರು ಎಂದು ಅರ್ಚಕರು ತಿಳಿಸಿದ್ದಾರೆ.

ದೇವಾಲಯಕ್ಕೆ ಭದ್ರತೆ ಇಲ್ಲದ್ದು, ಬೆಳಕಿನ ವ್ಯವಸ್ಥೆ ಇಲ್ಲದ್ದು ಕಳ್ಳರಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಈ ಹಿನ್ನೆಲೆಯಲ್ಲಿ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.