ಸಾಗರ ಸಮೀಪದ ಕುಗ್ವೆ ಅಂಬಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅ.ರಾ.ಶ್ರೀನಿವಾಸ ಅವರ ‘ಅವಲೋಕನ’ ಕೃತಿಯನ್ನು ಚಿಂತಕ ಬಿ.ಆರ್.ವಿಜಯವಾಮನ್ ಬಿಡುಗಡೆಗೊಳಿಸಿದರು. ವಿ.ಟಿ.ಸ್ವಾಮಿ, ನಾರಾಯಣಪ್ಪ, ಉಮೇಶ್, ಡಾ. ಎಂ.ಗಣೇಶ್ ಇತರರಿದ್ದರು. 
ನ್ಯೂಸ್

ರಂಗಭೂಮಿ ಸಮಾಜದ ಕನ್ನಡಿ

ಪುಸ್ತಕ ಬಿಡುಗಡೆ, ಅಭಿನಂದನೆ ಕಾರ್ಯಕ್ರಮ

ಸಾಗರ: ಜನರ ನೋವಿಗೆ ಸ್ಪಂದಿಸುವುದು, ಯಾವುದೇ ಸಮುದಾಯದ ನೋವು, ಸಂಕಷ್ಟಗಳನ್ನು ಪ್ರಾಮಾಣಿಕವಾಗಿ ರಂಗಭೂಮಿ ಮೂಲಕ ಅಭಿವ್ಯಕ್ತಿಸುವುದು ನನ್ನ ಉದ್ದೇಶ ಎಂದು ರಂಗಕರ್ಮಿ, ಹೆಗ್ಗೋಡು ನೀನಾಸಂನ ಡಾ. ಎಂ.ಗಣೇಶ್ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಂತರಂಗ ಪ್ರಕಾಶನದಿಂದ ಕುಗ್ವೆ ಅಂಬಾಪುರದ ಬಹುಮುಖಿ ಆವರಣದಲ್ಲಿ ಆಯೋಜಿಸಿದ್ದ ರಂಗಸಂವಾದ, ಪುಸ್ತಕ ಬಿಡುಗಡೆ, ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಗರ, ಹೆಗ್ಗೋಡು ಸೇರಿ ವಿವಿಧೆಡೆ ನನ್ನ ರಂಗಭೂಮಿ ಕೆಲಸಗಳಿಗೆ ಅನೇಕರು ಬೆನ್ನೆಲುಬಾಗಿ ನಿಂತಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡಲು ಸ್ಪಂದನ ತಂಡ ಅವಕಾಶ ನೀಡಿತು. ನಂತರ ಜನಮನದಾಟ ನಾಟಕ ತಂಡದ ಮೂಲಕವೂ ಕೆಲಸ ಮುಂದುವರಿಸಲು ಸಾಧ್ಯವಾಯಿತು. ಹಾಗೆಯೇ ಕುಟುಂಬದ ಬೆಂಬಲದಿಂದ ಬಿಡುವಿನ ದಿನಗಳಲ್ಲಿ ಹಲವು ನಾಟಕಗಳನ್ನು ನಿರ್ದೇಶಿಸಲು ಅನುವಾಗಿದೆ ಎಂದರು.

ವಿದ್ಯಾರ್ಥಿ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ದಿನಗಳಲ್ಲಿ ಬಿ.ಕೃಷ್ಣಪ್ಪ, ಸಿದ್ದಲಿಂಗಯ್ಯ ಮತ್ತು ಡಿ.ಆರ್.ನಾಗರಾಜ್ ಅವರ ಚಿಂತನೆಗಳು ನನ್ನ ಬದುಕಿನ ಮೇಲೆ ಪ್ರಭಾವ ಬೀರಿವೆ. ಜಿಲ್ಲೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಗಳು ನನ್ನನ್ನು ಈ ನೆಲದೊಂದಿಗೆ ಬೆಸೆದಿವೆ. ಕಾಗೋಡು ಚಳವಳಿ, ಸಮಾಜವಾದಿ ಚಿಂತನೆ, ದಲಿತ ಸಂಘರ್ಷ ಸಮಿತಿ ಹಾಗೂ ರೈತ ಚಳವಳಿಗಳು ರಂಗಭೂಮಿ ಮೂಲಕ ಸಮಾಜವನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ ಎಂದು ತಿಳಿಸಿದರು.

ರಂಗಕರ್ಮಿ ಗಣೇಶ ಮೇಷ್ಟ್ರು ಅವರ ರಂಗಭೂಮಿ ಪಯಣವನ್ನು ವಿಶ್ಲೇಷಿಸಿದ ಪತ್ರಕರ್ತ ಎಂ.ರಾಘವೇಂದ್ರ, ವಿಭಿನ್ನ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ಪರಿಸರದಿಂದ ಬಂದು ಹೆಗ್ಗೋಡಿನಂತಹ ಪ್ರದೇಶದಲ್ಲಿ ರಂಗಭೂಮಿಯನ್ನೇ ಬದುಕನ್ನಾಗಿ ಮಾಡಿಕೊಂಡಿರುವುದು ವಿಶೇಷ. ಕಥೆ, ಆತ್ಮಕಥೆ ಮತ್ತು ಸಮಕಾಲೀನ ಸಾಮಾಜಿಕ ವಿಚಾರಗಳನ್ನು ರಂಗಕ್ಕೆ ತರುವ ಮೂಲಕ ಗಣೇಶ ಮೇಷ್ಟ್ರು ಹೊಸ ಪ್ರಯೋಗಗಳಿಗೆ ತೆರೆದುಕೊಂಡಿದ್ದಾರೆ. ಅವರ ಬಹುಮುಖ್ಯ ಚಿಂತನೆ ಮಾದರಿ ಎಂದು ಬಣ್ಣಿಸಿದರು.

ಸಾಹಿತಿ ಅ.ರಾ.ಶ್ರೀನಿವಾಸ ಅವರ ‘ಅವಲೋಕನ’ ಅವರ ಕೃತಿಯನ್ನು ರಂಗಕರ್ಮಿ ವಿಜಯವಾಮನ್ ಬಿಡುಗಡೆಗೊಳಿಸಿದರು. ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ನಾರಾಯಣಪ್ಪ ಕುಗ್ವೆ, ಉಮೇಶ್ ಹಿರೇನೆಲ್ಲೂರು ಇತರರಿದ್ದರು.