ಮಹೇಂದ್ರ ಪೂರೀಗಾಲಿ ತಿ.ನರಸೀಪುರ
ತಾಲೂಕು ಕೇಂದ್ರ ತಿ.ನರಸೀಪುರ ಪಟ್ಟಣದಲ್ಲಿ ಸರ್ಕಾರಿ ಅನುದಾನದಲ್ಲಿ ಕೋಟ್ಯಂತರ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಉಪ್ಪಾರ ಸಮುದಾಯ ಭವನದ ಕಾಮಗಾರಿ ಆರೇಳು ವರ್ಷಗಳಿಂದಲೂ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ.
ಪಟ್ಟಣದ ಹೆಳವರಹುಂಡಿ ಬಳಿ ನಂಜನಗೂಡು ರಸ್ತೆಯಲ್ಲಿರುವ ಮಿಣಿಮಿಂಚಿ ಕಟ್ಟೆ(ಕೆರೆ)ಯಲ್ಲಿ ಕಂದಾಯ ಇಲಾಖೆ ಶ್ರೀ ಭಗೀರಥ ಉಪ್ಪಾರ ಜನ ಕಲ್ಯಾಣ ಟ್ರಸ್ಟ್‌ಗೆ ವಾರ್ಷಿಕ ವಂತಿಕೆ ಆಧಾರದ ಮೇಲೆ ಮಂಜೂರು ಮಾಡಿದ 0.15 ಗುಂಟೆ ಜಮೀನಿನಲ್ಲಿ 100*80 ಅಳತೆಯಲ್ಲಿ ನಿರ್ಮಾಣವಾಗಬೇಕಿದ್ದ ಉಪ್ಪಾರ ಸಮುದಾಯ ಭವನ ಕಾಮಗಾರಿ ಹಲವು ವರ್ಷಗಳಿಂದ ಹಳ್ಳ ಹಿಡಿದಿದೆ. ಸಾಮಾಜಿಕವಾಗಿ ಹಿಂದುಳಿದ ಉಪ್ಪಾರ ಸಮುದಾಯಕ್ಕೆ ಭವನವನ್ನು ನಿರ್ಮಿಸಿಕೊಡಬೇಕೆಂಬ ಜನಪ್ರತಿನಿಧಿಗಳ ಭರವಸೆ ಈಗ ಕಣ್ಮರೆಯಾಗಿದೆ.
2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದ ಸಂದರ್ಭ ಸ್ವಕ್ಷೇತ್ರ ವರುಣ ವಿಧಾನಸಭಾ ವ್ಯಾಪ್ತಿಗೆ ಬರುವ ಹೆಳವರಹುಂಡಿ ಬಳಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರು ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 1 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದರು. ಅಲ್ಲದೆ, ಅಂದಿನ ಸಂಸದ ದಿ.ಆರ್.ಧ್ರುವನಾರಾಯಣ ಕೂಡ 20 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿಸಿದ್ದರು.
2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ಕಾರ ಬದಲಾಗಿದ್ದರಿಂದ ಹಿಂದುಳಿದ ವರ್ಗಗಳ ಇಲಾಖೆಗೆ ನೀಡಿದ್ದ 1 ಕೋಟಿ ರೂ. ಅನುದಾನ ಸರ್ಕಾರಕ್ಕೆ ವಾಪಸ್ಸಾಯಿತು. ಸಂಸದರು ನೀಡಿದ್ದ 20 ಲಕ್ಷ ರೂ.ಗಳ ಅನುದಾನಕ್ಕೆ ಕಾಮಗಾರಿ ನಿರ್ವಹಣೆ ಪಡೆದಿದ್ದ ಜಿ.ಪಂ. ತಾಂತ್ರಿಕ ಉಪ ವಿಭಾಗದ ಅಧಿಕಾರಿಗಳು ನಂಜನಗೂಡು ಮೂಲದ ಗುತ್ತಿಗೆದಾರನಿಗೆ ಗುತ್ತಿಗೆ ಕೊಟ್ಟು ಅಡಿಪಾಯ ಸೇರಿದಂತೆ ಕಟ್ಟಡದ ಆಧಾರ ಸ್ತಂಭ(ಪಿಲ್ಲರ್)ಗಳ ಕಾಮಗಾರಿಯನ್ನಷ್ಟೇ ಮುಗಿಸಿದೆ. ಈಗ ಉಪ್ಪಾರ ಸಮುದಾಯ ಭವನ ಆರೇಳು ವರ್ಷಗಳಿಂದಲೂ ಅಭಿವೃದ್ಧಿ ಇಲ್ಲದೆ ಪಾಳು ಬಿದ್ದಿದೆ. ಸಿಮೆಂಟ್ ಕಂಬಗಳು ಬಿಸಿಲು ಮಳೆಗೆ ಕಲೆಗಟ್ಟುತ್ತಿದ್ದರೆ, ಕಬ್ಬಿಣದ ರಾಡುಗಳು ತುಕ್ಕು ಹಿಡಿಯಲು ಆರಂಭಿಸಿವೆ. ಕಟ್ಟಡದ ಒಳಾವರಣದಲ್ಲಿ ಗಿಡಗಂಟಿ, ಮರಗಳು ಬೆಳೆಯುತ್ತಿವೆ. ಸಮುದಾಯ ಭವನದ ಕನಸು ಕಾಣುತ್ತಿದ್ದ ಹಿಂದುಳಿದ ಜನಸಮುದಾಯದ ಆಸೆಯೇ ಕಮರಿ ಹೋಗಿದೆ.
ನನೆಗುದಿಗೆ ಬಿದ್ದಿರುವ ಉಪ್ಪಾರ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ವಾಪಸ್ಸಾದ 1 ಕೋಟಿ ರೂ. ಅನುದಾನವನ್ನು ಮತ್ತೆ ಬಿಡುಗಡೆ ಮಾಡಬೇಕಿದೆ. ನಿರ್ಮಾಣ ಕಾರ್ಯ ಪುನರಾರಂಭಿಸಲು ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೆಆರ್‌ಐಡಿಎಲ್‌ಗೆ 50 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದಾರೆ ಎಂದು ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೇತಹಳ್ಳಿ ಸಿದ್ದಶೆಟ್ಟಿ ಹಾಗೂ ಟ್ರಸ್ಟ್ ನ ಈಗಿನ ಅಧ್ಯಕ್ಷ ಸಿದ್ಧಪ್ಪಸ್ವಾಮಿ ಹೇಳುತ್ತಾರೆ. ಆದರೆ, ಉಪ್ಪಾರ ಸಮುದಾಯ ಭವನ ಸಂಬಂಧ ಯಾವುದೇ ಅನುದಾನ ಕೆಆರ್‌ಐಡಿಎಲ್‌ಗೆ ಬಂದಿಲ್ಲವೆಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ. ಹಾಗಾಗಿ ಈಗಿನ ಆಡಳಿತರೂಢ ಸರ್ಕಾರವೇ ನನೆಗುದಿಗೆ ಬಿದ್ದಿರುವ ಉಪ್ಪಾರ ಸಮುದಾಯ ಭವನಕ್ಕೆ ಕಾಯಕಲ್ಪ ನೀಡಬೇಕೆಂದು ಸಮುದಾಯದವರು ಒತ್ತಾಯಿಸಿದ್ದಾರೆ.