ನ್ಯೂಸ್

ಆಂಟಿ ಎಂದಿದಕ್ಕೆ ಎಟಿಎಂ ಭದ್ರತಾ ಸಿಬ್ಬಂದಿಗೆ ಥಳಿಸಿದ ಮಹಿಳೆ

ಬೆಂಗಳೂರು: ಎಟಿಎಂಗೆ ಹಣ ತುಂಬಿಸುವ ಸಂದರ್ಭದಲ್ಲಿ ಬಂದ ಮಹಿಳೆಗೆ ಭದ್ರತಾ ಸಿಬ್ಬಂದಿ ಆಂಟಿ ಪಕ್ಕಕ್ಕೆ ಸರಿಯಿರಿ ಎಂದು ಹೇಳಿದ್ದು, ಇಷ್ಟಕ್ಕೆ ಸಿಟ್ಟಿಗೆದ್ದ ಮಹಿಳೆ ಆತನನ್ನು ಅವಾಚ್ಯ ಶಬ್ಧದಿಂದ ನಿಂದಿಸಿ, ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಪ್ರಕರಣ ನಡೆದಿದೆ.
ಈ ಘಟನೆ ಸೆ.೧೯ ರಂದು ಮಲ್ಲೇಶ್ವರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
೬೪ ವರ್ಷ ವಯಸ್ಸಿನ ಖಾಸಗಿ ಸೆಕ್ಯುರಿಟಿ ಏಜೆನ್ಸಿಯ ಭದ್ರತಾ ಸಿಬ್ಬಂದಿ ನೀಡಿರುವ ದೂರಿನನ್ವಯ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ಸಂಜೆ ಮಲ್ಲೇಶ್ವರದ ಗಣೇಶ ದೇವಸ್ಥಾನದ ಎದುರಿಗಿರುವ ಐಸಿಐಸಿಐ ಬ್ಯಾಂಕ್ ಎಟಿಎಂ ಒಂದಕ್ಕೆ ಹಣ ತುಂಬಿಸಲಾಗುತ್ತಿತ್ತು. ಈ ವೇಳೆ ಎಟಿಎಂ ಬಾಗಿಲ ಬಳಿ ಬಂದ ಮಹಿಳೆಗೆ ಆಂಟಿ ಸ್ವಲ್ಪ ಪಕ್ಕಕ್ಕೆ ಬನ್ನಿ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದರು. ಆದರೆ ಇದರಿಂದ ಸಿಟ್ಟಿಗೆದ್ದ ಮಹಿಳೆ ’ನನ್ನನ್ನೇ ಆಂಟಿ ಎನ್ನುತ್ತೀಯಾ? ಎಂದು ಅವಾಚ್ಯವಾಗಿ ನಿಂದಿಸುತ್ತಾ ತನ್ನ ಕಾಲಿನಲ್ಲಿದ್ದ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದು ಜೀವ ಬೆದರಿಕೆ ಹಾಕಿದ್ದಾಳೆ. ಈ ವೇಳೆ ಸಾರ್ವಜನಿಕರು ಆರೋಪಿ ಮಹಿಳೆಯಿಂದ ತನ್ನನ್ನ ಬಿಡಿಸಿದ್ದಾರೆ ಎಂದು ಭದ್ರತಾ ಸಿಬ್ಬಂದಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನೊಂದ ಭದ್ರತಾ ಸಿಬ್ಬಂದಿ ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.