ನ್ಯೂಸ್

ಹೆಂಡ್ತಿ ಓಡಿ ಹೋಗ್ತಾಳೆ...!

ಬಾಬುಪ್ರಸಾದ್​ ಮೋಡಿಸ್​

ನವದೆಹಲಿ: ವೈಯಕ್ತಿಕ ಬದುಕು ಮತ್ತು ಉದ್ಯೋಗದ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವ ಬಗ್ಗೆ ಕೆಲವು ದಿನಗಳಿಂದ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, ‘ಕುಟುಂಬದ ಜತೆ ದಿನಕ್ಕೆ ನಾಲ್ಕು ಗಂಟೆ ಕಳೆಯುವುದು ಉತ್ತಮ. ಎಂಟು ಗಂಟೆ ಕಳೆದರೆ ಹೆಂಡತಿ ಓಡಿ ಹೋಗುತ್ತಾಳೆ...’ ಎಂದು ಲಘುಧಾಟಿಯಲ್ಲಿ ಹೇಳಿ ನಗೆಯುಕ್ಕಿಸಿದ್ದಾರೆ.

‘ಕುಟುಂಬ ಮತ್ತು ಕೆಲಸದ ಸಮತೋಲನ ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ. ನಿಮ್ಮ ವಾದವನ್ನು ನನ್ನ ಮೇಲೆ ಹೇರಬಾರದು, ನನ್ನ ವಾದವನ್ನು ನಿಮ್ಮ ಮೇಲೆ ಹೇರಬಾರದು. ಇಷ್ಟಪಟ್ಟು ಕೆಲಸ ಮಾಡುತ್ತಿದ್ದರೆ ಸಮತೋಲನ ಸಾಧ್ಯ. ಕೆಲಸ ಮತ್ತು ಕುಟುಂಬ ಬಿಟ್ಟರೆ ನಮಗೆ ಬೇರೆ ಜಗತ್ತೇನಿದೆ? ನಮ್ಮ ಮಕ್ಕಳೂ ಇದನ್ನು ಗಮನಿಸುತ್ತಿರುತ್ತಾರೆ. ಅದನ್ನೇ ಅನುಸರಿಸುತ್ತಾರೆ. ಯಾರೂ ಇಲ್ಲಿ ಶಾಶ್ವತವಾಗಿ ಇರಲು ಬಂದಿಲ್ಲ. ಇದನ್ನು ಅರ್ಥ ಮಾಡಿಕೊಂಡರೆ ಬದುಕು ಸರಳವಾಗುತ್ತದೆ. ಕೆಲಸ ಮಾಡುವ ವ್ಯಕ್ತಿ ಹಾಗೂ ಕುಟುಂಬ ಇಬ್ಬರೂ ಸಂತೋಷವಾಗಿದ್ದರೆ ಅದೇ ಸಮತೋಲನ’ ಎಂದೂ ಐಎಎನ್​ಎಸ್ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅದಾನಿ ಹೇಳಿದ್ದಾರೆ. ಇನ್​ಫೋಸಿಸ್ ಸಂಸ್ಥಾಪಕ ಎನ್​ಆರ್ ನಾರಾಯಣಮೂರ್ತಿ ಇತ್ತೀಚೆಗೆ ‘ಯುವಸಮುದಾಯ ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಭಾರತ ಸ್ಪರ್ಧಿಸಲು ಸಾಧ್ಯ’ ಎಂದು ಹೇಳಿದ್ದರ ಹಿನ್ನೆಲೆಯಲ್ಲಿ ಅದಾನಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.