ನ್ಯೂಸ್

ರಷ್ಯಾ-ಯುಕ್ರೇನ್ ಯುದ್ದ ಕೊನೆಗೊಳಿಸಲು ಭಾರತದ ಮೇಲೆ ಸುಂಕ ವಿಧಿಸಿದ್ದೇವೆ ಎಂದ ಶ್ವೇತಭವನ​| America

America:ರಷ್ಯಾ-ಯುಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, ರಷ್ಯಾ-ಯುಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್​ ಭಾರಿ ಒತ್ತಡ ಹೇರಿದ್ದಾರೆ. ನೀವು ನೋಡಿದಂತೆ, ಭಾರತದ ಮೇಲೆ ನಿರ್ಬಂಧಗಳು ಮತ್ತು ಇತರ ಕ್ರಮಗಳನ್ನು ಅವರು ತೆಗೆದುಕೊಂಡಿದ್ದಾರೆ. ಈ ಯುದ್ಧವನ್ನು ಕೊನೆಗೊಳಿಸಲು ಅವರು ಬಯಸುತ್ತಾರೆ ಎಂದು ಸ್ವತಃ ಟ್ರಂಪ್​ ಸ್ಪಷ್ಟಪಡಿಸಿದ್ದಾರೆ. ಯಾವುದೇ ಸಭೆ ನಡೆಯುವ ಮೊದಲು ನಾವು ಇನ್ನೊಂದು ತಿಂಗಳು ಕಾಯಬೇಕು ಎಂಬ ಇತರರ ವಿಚಾರಗಳನ್ನು ಟ್ರಂಪ್​ ಅಪಹಾಸ್ಯ ಮಾಡಿದ್ದಾರೆ ಎಂದು ಲೀವಿಟ್​ ಹೇಳಿದ್ದಾರೆ.

ಇದೇ ಆಗಸ್ಟ್ 27 ರಿಂದ ಜಾರಿಗೆ ಬರಲಿರುವ ರಷ್ಯಾದ ತೈಲ ಖರೀದಿ ಮಾಡುತ್ತಿರುವ ಭಾರತದ ಮೇಲೆ ಶೇ.25 ಪ್ರತಿಶತ ಸೇರಿದಂತೆ ಭಾರತದ ಮೇಲೆ ಒಟ್ಟು 50 ಪ್ರತಿಶತದಷ್ಟು ಸುಂಕವನ್ನು ಟ್ರಂಪ್ ವಿಧಿಸಿದ್ದಾರೆ.

ಟ್ರಂಪ್ ಅವರು ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಶ್ವೇತಭವನದಲ್ಲಿ ಆತಿಥ್ಯ ವಹಿಸಿದ ಕೆಲವೇ ದಿನಗಳಲ್ಲಿ ಈ ಪ್ರಕಟನೆ ಬಂದಿದೆ. ಉಭಯ ನಾಯಕರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಂಭಾವ್ಯ ತ್ರಿಪಕ್ಷೀಯ ಸಂವಾದದತ್ತ ಪ್ರಗತಿಯನ್ನು ಸೂಚಿಸಿದ್ದಾರೆ. ಟ್ರಂಪ್ ಈ ಮಾತುಕತೆಗಳನ್ನು ಅತ್ಯಂತ ಯಶಸ್ವಿ ದಿನ ಎಂದು ಬಣ್ಣಿಸಿದರೆ, ಝೆಲೆನ್ಸ್ಕಿ ಇದು ಅಮೆರಿಕ ಅಧ್ಯಕ್ಷರೊಂದಿಗೆ ಅವರು ನಡೆಸಿದ ಅತ್ಯುತ್ತಮ ಸಂಭಾಷಣೆಯಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ-ಪಾಕಿಸ್ತಾನ ಸಂಘರ್ಷ ಕೊನೆಯಾಗಲು ಟ್ರಂಪ್ ಕಾರಣ- ಶ್ವೇತಭವನ

ಭಾರತ ಮತ್ತು ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಮಾತನಾಡಿದ ಲೀವಿಟ್​, ಟ್ರಂಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷವನ್ನು ಕೊನೆಗೊಳಿಸಿದ್ದಾರೆ ಎಂದು ಮತ್ತೊಮ್ಮೆ ಹೇಳಿದ್ದಾರೆ. ಭಾರತ ಮತ್ತು ಪಾಕ್​ ನಡುವಿನ ಸಂಘರ್ಷದ ಅಂತ್ಯದೊಂದಿಗೆ ನಾವು ಕದನ ವಿರಾಮವನ್ನು ನೋಡಿದ್ದೇವೆ. ಅಲ್ಲದೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಅಧ್ಯಕ್ಷರಾಗುವ ಕೆಲಸದೊಂದಿಗೆ ಬರುವ ಶಕ್ತಿ ಮತ್ತು ಹತೋಟಿಯಲ್ಲಿ ನಂಬಿಕೆಯಿರುವ ಅಧ್ಯಕ್ಷರು ನಮ್ಮಲ್ಲಿ ಇಲ್ಲದಿದ್ದರೆ ಪರಮಾಣು ಯುದ್ಧಕ್ಕೆ ಕಾರಣವಾಗಬಹುದಿತ್ತು ಎಂದು ಆಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕದನ ವಿರಾಮ ಒಪ್ಪಂದವು ಎರಡೂ ಸೇನಾಪಡೆಗಳ ಮಹಾನಿರ್ದೇಶಕರ (DGMOs) ನಡುವಿನ ನೇರ ಚರ್ಚೆಯ ಫಲಿತಾಂಶವಾಗಿದೆ ಎಂದು ಭಾರತ ನಿರಂತರವಾಗಿ ಸ್ಪಷ್ಟಪಡಿಸಿದೆ. ಯಾವುದೇ ವಿದೇಶಿ ನಾಯಕರು ಭಾರತವನ್ನು ಆಪರೇಷನ್ ಸಿಂಧೂರ ನಿಲ್ಲಿಸುವಂತೆ ಹೇಳಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿದ್ದಾರೆ.(ಏಜೆನ್ಸೀಸ್​​)