ನವದೆಹಲಿ: ಕ್ಯಾಲೆಂಡರ್ ವರ್ಷ 2021 ಉರುಳಿಹೋಗಿದೆ. ಇದು ಜಗತ್ತಿನ ಬಹುತೇಕ ಅತಿಶ್ರೀಮಂತರ ಪಾಲಿಗೆ ಉತ್ತಮ ವರ್ಷವಾಗಿತ್ತು. ಭಾರತದಲ್ಲಿ ಮುಕೇಶ್ ಅಂಬಾನಿಗಿಂತ ಅದಾನಿ ಮತ್ತು ಅಜೀಂ ಪ್ರೇಮ್ ಸಂಪತ್ತು ಹೆಚ್ಚು ವೃದ್ಧಿಯಾಗಿದೆ. ಜಾಗತಿಕವಾಗಿ ಗಮನಿಸಿದರೆ ಟಾಪ್ 10 ಅತಿಶ್ರೀಮಂತರು ಒಟ್ಟು 402 ಶತಕೋಟಿ ಡಾಲರ್ ಸಂಪತ್ತು ಹೆಚ್ಚಿಸಿಕೊಂಡರು.
ಗೌತಮ್ ಅದಾನಿ ಪಾಲಿಗೆ 2021 ಅದೃಷ್ಟದ ವರ್ಷ. ಒಂದೇ ವರ್ಷ 41.5 ಶತಕೋಟಿ ಡಾಲರ್ ಸಂಪತ್ತು ಹೆಚ್ಚಿಸಿಕೊಂಡು ಒಟ್ಟು 75.3 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ. ಅಜೀಂ ಪ್ರೇಮ್ ಅವರ ಸಂಪತ್ತು 15.8 ಶತಕೋಟಿ ಡಾಲರ್ ಹೆಚ್ಚಳವಾಗಿದ್ದು ಒಟ್ಟು 41.2 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ. ಇವರಿಬ್ಬರಿಗೆ ಹೋಲಿಸಿದರೆ ದೇಶದ ಮುಂಚೂಣಿ ಉದ್ಯಮಿ ಮುಕೇಶ್ ಅಂಬಾನಿ ಸಂಪತ್ತು ಕಳೆದ ವರ್ಷ 13 ಶತಕೋಟಿ ಡಾಲರ್ ಮಾತ್ರ ಹೆಚ್ಚಾಗಿದ್ದು, ಒಟ್ಟು 89.7 ಶತಕೋಟಿ ಡಾಲರ್ ಸಂಪತ್ತು ಹೊಂದಿ ಅಗ್ರಸ್ಥಾನದಲ್ಲೇ ಮುಂದುವರಿದ್ದಾರೆ.
ಭಾರತದ ಅತಿಶ್ರೀಮಂತರ ಪಟ್ಟಿಯಲ್ಲಿ ಉಳಿದವರ ಸಾಧನೆ ಹೀಗಿದೆ- ಡಿಮಾರ್ಟ್ನ ಪ್ರೊಮೋಟರ್ ರಾಧಾಕೃಷ್ಣನ್ ದಮಾನಿ ಸಂಪತ್ತು 9.51 ಶತಕೋಟಿ ಡಾಲರ್ ಏರಿದ್ದು ಒಟ್ಟು ಸಂಪತ್ತು 24.4 ಶತಕೋಟಿ ಡಾಲರ್ ಆಗಿದೆ. ಎಚ್ಸಿಎಲ್ ಟೆಕ್ನ ಶಿವ ನಾಡಾರ್ ಸಂಪತ್ತು 8.4 ಶತಕೋಟಿ ಡಾಲರ್ ಏರಿದ್ದು, 32.5 ಶತಕೋಟಿ ಡಾಲರ್ ಆಗಿದೆ. ಸಾವಿತ್ರಿ ಜಿಂದಾಲ್ ಸಂಪತ್ತು 5.82 ಶತಕೋಟಿ ಡಾಲರ್, ಕುಮಾರ ಮಂಗಲಂ ಬಿರ್ಲಾ ಸಂಪತ್ತು 5.02 ಶತಕೋಟಿ ಡಾಲರ್, ಸನ್ ಫಾರ್ವದ ದಿಲೀಪ್ ಶಾಂಘ್ವಿ ಸಂಪತ್ತು 4.28 ಶತಕೋಟಿ ಡಾಲರ್, ಡಿಎಲ್ಎಫ್ನ ಕೆ.ಪಿ.ಸಿಂಗ್ ಸಂಪತ್ತು 3.61 ಶತಕೋಟಿ ಡಾಲರ್, ನೈಕಾದ ಫಲ್ಗುಣಿ ನಾಯರ್ ಸಂಪತ್ತು 3 ಶತಕೋಟಿ ಡಾಲರ್ ಏರಿಕೆಯಾಗಿದೆ.
ಅತಿ ಶ್ರೀಮಂತೆ ಫಲ್ಗುಣಿ
ಭಾರತದ ಮಹಿಳಾ ಅತಿಶ್ರೀಮಂತರ ಪಟ್ಟಿಯಲ್ಲಿ ಸಾವಿತ್ರಿ ಜಿಂದಾಲ್ 13.1 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಅಗ್ರಸ್ಥಾನಿ ಯಾಗಿದ್ದಾರೆ. 2021ರಲ್ಲಿ ಈ ಪಟ್ಟಿಗೆ ಮಿಂಚಿನ ಎಂಟ್ರಿ ಕೊಟ್ಟವರು ಫಲ್ಗುಣಿ ನಾಯರ್. ಷೇರುಪೇಟೆಯಲ್ಲಿ ನೈಕಾ ಕಂಪನಿಯ ಐಪಿಒ ಭಾರಿ ಲಾಭಾಂಶದೊಡನೆ ಎಂಟ್ರಿ ಪಡೆದುಕೊಂಡದ್ದೇ ಇದಕ್ಕೆ ಕಾರಣ.