ಬೆಂಗಳೂರು: ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣಾ ಕಾಯ್ದೆ 2007ರ ಸೆಕ್ಷನ್ 9ರ ಅನ್ವಯ ಹಾಲಿ ಇರುವ 10 ಸಾವಿರ ರೂ. ನಿರ್ವಹಣಾ ಶುಲ್ಕದ ಮಿತಿಯನ್ನು ಹೆಚ್ಚಳ ಮಾಡುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಅಲ್ಲದೆ, ರಾಷ್ಟ್ರದ ಸಂಪತ್ತನ್ನು ಮಕ್ಕಳ ಕಲ್ಯಾಣ ಮತ್ತು ಹಿರಿಯರ ಆರೈಕೆಯನ್ನು ಎಷ್ಟರ ಮಟ್ಟಿಗೆ ಮಾಡಲಾಗುತ್ತದೆ ಎಂಬುದನ್ನು ಆಧರಿಸಿ ಅಳೆಯಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಬೆಂಗಳೂರಿನ ಸುನಿಲ್ ಎಚ್.ಬೋಹ್ರಾ ಹಾಗೂ ಸಹೋದರರು ತಮ್ಮ ತಂದೆ ಹೀರಾಲಾಲ್ ಬೋಹ್ರಾ ಮತ್ತು ತಾಯಿ ನಿರ್ಮಲಾ ಬೋಹ್ರಾ ವಿರುದ್ಧ ಹೂಡಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಅದೇಶ ಮಾಡಿದೆ.
ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಾಲಯ, 5 ಲಕ್ಷ ಪರಿಹಾರ ನೀಡುವಂತೆ ಬೆಂಗಳೂರಿನ ಉಪವಿಭಾಗಾಧಿಕಾರಿ ಮಾಡಿದ್ದ ಆದೇಶವನ್ನು ರದ್ದುಗೊಳಿಸಿದೆ. ಜತೆಗೆ ಈ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿರಿಸಿಕೊಂಡು ಹೊಸದಾಗಿ ವಿಚಾರಣೆ ನಡೆಸಿ ನಿರ್ವಹಣಾ ಶುಲ್ಕವನ್ನು ನಿಗದಿ ಮಾಡಬೇಕು ಎಂದು ಆದೇಶಿಸಿದೆ.