ಅಪ್ಘಾನಿಸ್ತಾನದ ಬೆಳವಣಿಗೆಗಳು ನಿಜಕ್ಕೂ ಕಳವಳಕಾರಿ. ತಾಲಿಬಾನ್ ಆ ದೇಶದ ಮೇಲೆ ಹಿಡಿತ ಸಾಧಿಸಿದ ಬಳಿಕ ಹಿಂಸೆ, ಕ್ರೌರ್ಯ ಮರುಕಳಿಸುತ್ತಿದೆ. ಈಗಾಗಲೇ ಮಹಿಳೆಯರ ಮೇಲೆ ಹಲವು ನಿರ್ಬಂಧ ಹೇರಲಾಗಿದೆ. ವಿರೋಧಿಗಳ ಮೇಲೆ ಗುಂಡಿನ ದಾಳಿ ದಿನನಿತ್ಯದ ಘಟನೆ ಎಂಬಂತೆ ನಡೆಯುತ್ತಿವೆ. ತಾಲಿಬಾನ್ ಆಚರಿಸಿದ ವಿಜಯೋತ್ಸವದಲ್ಲಿ ಹಲವು ಅಮಾಯಕರು ಪ್ರಾಣ ಕಳೆದುಕೊಂಡ ಘಟನೆ ಬೆಚ್ಚಿಬೀಳಿಸುವಂಥದ್ದು. ದಿನಕ್ಕೊಂದು ಹೊಸ ನಿಯಮ, ನಿರ್ಬಂಧಗಳನ್ನು ಹೇರುತ್ತಿರುವ ತಾಲಿಬಾನ್ ಮೂಲಭೂತವಾದವನ್ನು ಹೆಚ್ಚಿಸುತ್ತಿದೆ ಎಂಬುದು ತೀವ್ರ ಆತಂಕದ ವಿಚಾರ. ಭಯೋತ್ಪಾದನೆಯನ್ನು ಪೋಷಿಸಿಕೊಂಡೇ ಬಂದಿರುವ ಪಾಕಿಸ್ತಾನ ತಾಲಿಬಾನ್ ಬೆನ್ನಿಗೆ ನಿಂತಿದೆ. ಚೀನಾವಂತೂ ಅಪಾರ ಪ್ರಮಾಣದ ಧನಸಹಾಯವನ್ನೂ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಭಯೋತ್ಪಾದನೆ ನಿಗ್ರಹ ಕಠಿಣ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಂತೂ ದಟ್ಟವಾಗಿ ಗೋಚರಿಸುತ್ತಿವೆ.
ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕ ದಾಳಿ ನಡೆದು ಸೆ.11ಕ್ಕೆ ಇಪ್ಪತ್ತು ವರ್ಷ. ಆ ಘಟನೆಯಿಂದ ರೊಚ್ಚಿಗೆದ್ದ ಅಮೆರಿಕ ಎರಡು ದಶಕದ ಹಿಂದೆ ಏಕಾಏಕಿ ‘ಭಯೋತ್ಪಾದನೆ ವಿರುದ್ಧ ಸಮರ’ವನ್ನು ಸಾರಿತು. ಇದರ ಭಾಗವಾಗಿ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ನನ್ನು ಹೊಡೆದುರುಳಿಸಿತಾದರೂ, ಭಯೋತ್ಪಾದನೆ ವಿರುದ್ಧದ ಸಮರ ರ್ತಾಕ ಅಂತ್ಯ ಕಾಣುವ ಮೊದಲೇ ಅಪ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂಪಡೆದಿದೆ. ಅಮೆರಿಕದ ಮೇಲೆ ಮತ್ತೆ ಭಯೋತ್ಪಾದಕ ಶಕ್ತಿಗಳು ಎರಗಿ, ದಾಳಿ ನಡೆಸಬಹುದು ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ. ಅಂದರೆ, ಉಗ್ರವಾದದ ಕಾಮೋಡಗಳು ಮತ್ತೆ ಅಮೆರಿಕವನ್ನು ಆವರಿಸಿಕೊಳ್ಳುತ್ತಿವೆ.
ಭಯೋತ್ಪಾದನೆ ವಿರುದ್ಧ ಭಾರತ ಮೊದಲಿನಿಂದಲೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗಟ್ಟಿ ದನಿಯಲ್ಲಿ ಮಾತನಾಡಿದೆ. ಅಲ್ಲದೆ, ಇದು ಜಾಗತಿಕ ಸಮಸ್ಯೆಯಾಗಿದ್ದು, ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ಉಗ್ರವಾದವನ್ನು ಬೇರು ಸಮೇತ ಕಿತ್ತೊಗೆಯಲು ಸಾಧ್ಯ ಎಂದು ಪ್ರತಿಪಾದಿಸಿದೆ. ಆದರೆ, ಮೊದಲೆಲ್ಲ ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳು ಈ ಬಗ್ಗೆ ಜಾಣಕಿವುಡು ತೋರಿದವು. ಭಾರತದಲ್ಲಿ ಭೀಕರ ಭಯೋತ್ಪಾದಕ ದಾಳಿಗಳಾದಾಗಲೂ, ಅದು ಆ ದೇಶದ ಸಮಸ್ಯೆ ಎಂಬಂತೆ ವರ್ತಿಸಿದವು. ಆದರೆ, ಯಾವಾಗ 9/11ರ ಘಟನೆ ಸಂಭವಿಸಿತೋ, ಆಗಲೇ ಅಮೆರಿಕ ಎಚ್ಚೆತ್ತುಕೊಂಡಿದ್ದು. ಕಳೆದ ಇಪ್ಪತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆಯಾದರೂ, ಭಯೋತ್ಪಾದನೆಯ ಅಪಾಯ ಮತ್ತಷ್ಟು ಹೆಚ್ಚಿದೆ. ಅದರಲ್ಲೂ, ಅಪ್ಘನ್ನಂಥ ಒಂದು ದೇಶವೇ ಉಗ್ರರ ಕೈಗೆ ಸಿಕ್ಕಿದ್ದು, ಭಯೋತ್ಪಾದಕ ಸಂಘಟನೆಗಳಿಗೆ ವ್ಯಾಪ್ತಿ ಹೆಚ್ಚಿಸಲು ದಾರಿ ಸಿಕ್ಕಂತಾಗಿದೆ. ಆದರೂ, ಅಂತಾರಾಷ್ಟ್ರೀಯ ವಲಯ ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಳ್ಳುತ್ತಿಲ್ಲ. ಅಮೆರಿಕ ತನ್ನನ್ನು ರಕ್ಷಿಸಿಕೊಂಡರೆ ಸಾಕು ಎಂಬ ನೀತಿ ಅನುಸರಿಸುತ್ತಿದ್ದರೆ, ಚೀನಾ ವಿರೋಧಿಗಳನ್ನು ಮಣಿಸುವ ಭರದಲ್ಲಿ ಭಯೋತ್ಪಾದಕ ಶಕ್ತಿಗಳಿಗೆ ಸಹಕರಿಸುತ್ತಿದೆ. ಇಂಥ ಧೋರಣೆಗಳು ಜಾಗತಿಕ ಶಾಂತಿಗೆ ಕಂಟಕವಾಗಿ ಪರಿಣಮಿಸಬಲ್ಲವು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸ್ವಾರ್ಥ ರಾಜಕಾರಣ, ವಿಸ್ತರಣಾವಾದ ನೀತಿಗೆ ತಿಲಾಂಜಲಿ ನೀಡಿ, ಭಯೋತ್ಪಾದನೆ ವಿರುದ್ಧ ಸಾಮೂಹಿಕ ಹೋರಾಟ ಕೈಗೊಳ್ಳಲು ಇದು ಸಕಾಲ.