ಶಿವಮೊಗ್ಗ: ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ, ಅದರೊಳಗಿನ ಮೌಲ್ಯದ ವಿಚಾರಗಳು ಇಂದಿಗೂ ಪ್ರಸ್ತುತ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಹುಣ್ಣಿಮೆ, ಮಹರ್ಷಿ ವಾಲ್ಮೀಕಿ ಜಯಂತಿ, ಭೂಮಿ ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಶರಥ ತನ್ನ ರಾಜ್ಯದ ಮುಂದಿನ ವಾರಸುದಾರ ಯಾರು ಎಂದು ನಿರ್ಣಯಿಸಲು ಸಾಮಂತರು, ಮಂತ್ರಿಗಳ ಜಂಟಿಸಭೆ ಕರೆದು ಚರ್ಚೆಮಾಡಿ ಎಲ್ಲರ ಅಭಿಪ್ರಾಯವನ್ನೂ ಪಡೆದಿದ್ದ ಎಂಬುದು ರಾಮಾಯಣದಲ್ಲಿ ಉಲ್ಲೇಖವಾಗಿದೆ ಎಂದರು.
ನಾವಿಂದು ರಾಮರಾಜ್ಯ ಕುರಿತು ಮಾತನಾಡುತ್ತೇವೆ. ಆದರೆ ಪ್ರಜಾಪ್ರಭುತ್ವ ಅಧಿಕಾರ ಹಿಡಿದವರ ಸ್ವತ್ತಾಗುತ್ತಿದೆ. ಜಾತಿ, ಹಣದ ಆಮಿಷಕ್ಕೆ ಜನರು ಬಲಿಯಾಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಮತದಾರನ ಜವಾಬ್ದಾರಿ ಬಗ್ಗೆ ಚರ್ಚೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ವಾರ್ತಾ ಇಲಾಖೆ ಹಿರಿಯ ನಿರ್ದೇಶಕ ಆರ್.ಮಾರುತಿ ಮಾತನಾಡಿ, ಜಗತ್ತಿನ ಜನರ ಹಸಿವನ್ನು ನೀಗಿಸುವ ಭೂತಾಯಿಯನ್ನು ಪೂಜಿಸಿ ಸಂಭ್ರಮಿಸುವುದು ಕೃಷಿ ಕುಟುಂಬದ ಹಿರಿಮೆ. ಹೊಲದಲ್ಲಿ ದುಡಿವ ರೈತ, ದೇಶಕಾಯುವ ಸೈನಿಕರನ್ನು ಸದಾ ನೆನಪು ಮಾಡಿಕೊಳ್ಳಬೇಕು. ಅವರ ಪರಿಶ್ರಮದಿಂದ ಎಲ್ಲರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗಿದೆ ಎಂದರು.
ಭೂಮಿ ಹುಣ್ಣಿಮೆ ಬಹು ಸಂಸ್ಕೃತಿಯ ಪ್ರತೀಕ. ಭೂಮಿ ಪೂಜೆ ಎಂದರೆ ಅದು ನಿಸರ್ಗದ ಬದುಕಿನಲ್ಲಿ ಮಿಳಿತವಾದ ಸಂಕೇತ ಎಂದು ಪತ್ರಕರ್ತ ನಾಗರಾಜ್ ನೇರಿಗೆ ಹೇಳಿದರು.
ಉದ್ಯಮಿ ಟಿ.ಎನ್.ಸಿದ್ದೇಶ್ ಮಾತನಾಡಿದರು. ಧರ್ಮೋಜಿ ರಾವ್, ಬಿ.ಸಿ.ನೇತ್ರಾವತಿ, ಬಿ.ಜಿ.ಗೀತಾ, ಅನಿತಾ ಸೂರ್ಯ ಕವನ ವಾಚಿಸಿದರು. ಡಾ. ಹಸೀನಾ ಗಝಲ್ ಹಾಡಿದರು. ಡಾ. ನಾಗೇಂದ್ರ ಆಚಾರ್ಯ ಕಥೆ ಹೇಳಿದರು.