ಜಗತ್ತಿನಲ್ಲೇ ಅತಿ ದೊಡ್ಡ ಮತ್ತು ಅತ್ಯಂತ ದೀರ್ಘ ಧಾರ್ವಿುಕ ಮೇಳವಾದ ಮಹಾಕುಂಭ ಸಮಾಪನಗೊಂಡಿದೆ. ಬುಧವಾರ ಮಹಾಶಿವರಾತ್ರಿಯ ಪವಿತ್ರ ದಿನದಂದು ಸುಮಾರು ಒಂದೂವರೆ ಕೋಟಿ ಭಕ್ತರು ಗಂಗಾ, ಯುಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಒಟ್ಟು 45 ದಿನಗಳ ಈ ಮೇಳದಲ್ಲಿ 65 ಕೋಟಿಗಿಂತ ಹೆಚ್ಚು ಜನರು ಭಾಗಿಯಾಗಿದ್ದು ಒಂದು ದಾಖಲೆಯೇ ಸರಿ. ಭಕ್ತಿ, ಶ್ರದ್ಧೆ, ನಂಬಿಕೆಯ ಜತೆಗೆ ಆಧುನಿಕ ತಂತ್ರಜ್ಞಾನವೂ ಮೇಳೈಸಿದ್ದು ಈ ಬಾರಿಯ ಕುಂಭಮೇಳದ ವಿಶೇಷವಾಗಿದೆ. ಇದರ ಜೊತೆಗೆ, ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟಿದ್ದು, ದೆಹಲಿ ರೈಲು ನಿಲ್ದಾಣದಲ್ಲಿ ಮೇಳಕ್ಕೆ ಹೋಗುತ್ತಿದ್ದ ಜನರ ಮಧ್ಯೆ ಕಾಲ್ತುಳಿತವಾಗಿ 18 ಜನರು ಸಾವಿಗೀಡಾಗಿದ್ದು ಮುಂತಾದ ಅಹಿತಕರ ಘಟನೆಗಳೂ ಸಂಭವಿಸಿ ಜನಸಂದಣಿಯ ನಿರ್ವಹಣೆಯ ವಿಷಯದಲ್ಲಿ ಆಡಳಿತಗಾರರಿಗೆ ಹಲವು ಪಾಠಗಳನ್ನು ಕಲಿಸಿವೆ. ಈ ಘಟನೆಗಳನ್ನೇ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ. ಕೆಲವು ರಾಜಕಾರಣಿಗಳಂತೂ ಹಿಂದುಗಳ ಧಾರ್ವಿುಕ ಶ್ರದ್ಧೆಯನ್ನೇ ಪ್ರಶ್ನಿಸುವಂಥ ಹೇಳಿಕೆಗಳನ್ನೂ ನೀಡಿದ್ದಾರೆ. ಇದೊಂದು ‘ಮೃತ್ಯುಕುಂಭ’ ಎಂದು ಜರಿದವರೂ ಇದ್ದಾರೆ. ಪಾಲ್ಗೊಂಡ ಭಕ್ತರ ನಿಖರ ಸಂಖ್ಯೆಯ ಬಗ್ಗೆ ಸಂಶಯ, ನದಿ ನೀರಿನ ಸ್ವಚ್ಛತೆಯ ಕುರಿತ ಶಂಕೆ, ಭಕ್ತರ ಊಟ-ವಸತಿಗೆ ಮಾಡಿದ ವ್ಯವಸ್ಥೆಯ ಬಗೆಗಿನ ಅನುಮಾನ... ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪುಂಖಾನುಪುಂಖವಾಗಿ ಟೀಕೆಗಳು ಕೇಳಿಬಂದಿವೆ. ಆದರೆ ಇದ್ಯಾವುದ ರಿಂದಲೂ ಭಕ್ತರ ನಂಬಿಕೆ-ಶ್ರದ್ಧೆಯನ್ನು ಅಲ್ಲಾಡಿಸಲು ಸಾಧ್ಯವಾಗಿಲ್ಲ. ಇದು ಎಂತಹ ದಿವ್ಯಕುಂಭ, ಭವ್ಯಕುಂಭ ಎಂಬುದನ್ನು ಜನರೇ ಸಾಬೀತು ಮಾಡಿದ್ದಾರೆ. ಟೀಕಾಕಾರರಿಗೆ ತಮ್ಮದೇ ಆದ ರೀತಿಯಲ್ಲಿ ಭಕ್ತರು ಉತ್ತರ ನೀಡಿದ್ದಾರೆ. ದೇಶದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರು ಕುಂಭಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ಧರ್ಮ- ಸಂಸ್ಕೃತಿ- ನಂಬಿಕೆಯೆಡೆಗಿನ ತಮ್ಮ ಬದ್ಧತೆಯನ್ನು ಬಲು ಗಟ್ಟಿ ಧ್ವನಿಯಲ್ಲಿ ಪುನರುಚ್ಚರಿಸಿದ್ದಾರೆ. ಇಡೀ ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶವಿದು ಎಂದು ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ, ಅದರಲ್ಲೂ ವಿಶೇಷವಾಗಿ ಮನೆಯ ಹಿರಿಜೀವಗಳೊಂದಿಗೆ ಬಂದು ಭಾಗವಹಿಸಿದ್ದಾರೆ. ಇಷ್ಟು ದಟ್ಟಣೆ ಇದ್ದರೂ ಪಾಲ್ಗೊಂಡ ಶತಾಯುಷಿಗಳಿಗೇನೂ ಕೊರತೆ ಇಲ್ಲ. ತಮ್ಮ ಆರೋಗ್ಯ, ಅನುಕೂಲ, ಹಣಕಾಸಿನ ತೊಂದರೆ ಮುಂತಾಗಿ ಯಾವುದನ್ನೂ ಲೆಕ್ಕಿಸದೇ ಸಾರ್ವಜನಿಕ ಸಾರಿಗೆಯಲ್ಲಿ, ಖಾಸಗಿ ವಾಹನಗಳಲ್ಲಿ ಜನರು ಕುಂಭಮೇಳಕ್ಕೆ ದಾಂಗುಡಿ ಇಟ್ಟಿದ್ದು ಸನಾತನ ಸಂಸ್ಕೃತಿಯೆಡೆಗಿನ ಅವರ ನಂಬಿಕೆಗೆ ಮತ್ತು ಭಾವಪರವಶತೆಗೆ ಸಾಕ್ಷಿಯಾಗಿದೆ.
ಮಹಾಕುಂಭಮೇಳಕ್ಕಾಗಿಯೇ ಉತ್ತರಪ್ರದೇಶ ಸರ್ಕಾರ ಸುಮಾರು 40 ಹೆಕ್ಟೇರ್ ಪ್ರದೇಶದಲ್ಲಿ ತಾತ್ಕಾಲಿಕ 76ನೇ ಜಿಲ್ಲೆಯನ್ನೇ ರೂಪಿಸಿತ್ತು. ಆರೇಳು ವಾರಗಳ ಕಾಲ ದಿನದ ಇಪ್ಪತ್ನಾಲ್ಕು ಗಂಟೆಯೂ ಅದು ಜನರಿಂದ ಗಿಜಿಗುಡುತ್ತಿತ್ತು. ಅಲ್ಲಿ ಹೆಜ್ಜೆಹೆಜ್ಜೆಗೂ ಕೃತಕ ಬುದ್ಧಿಮತ್ತೆ ಆಧರಿತ ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮರಾಗಳು, ಜಲಾಂತರ್ಗತ ಡ್ರೋನ್ ಭದ್ರತಾ ಕ್ಯಾಮರಾಗಳು, ಹಿಂದೆಂದೂ ಕಂಡುಕೇಳರಿಯಂಥ ಅತ್ಯಾಧುನಿಕ ಸುರಕ್ಷತಾ ಕ್ರಮಗಳು ಜನರ ಗಮನ ಸೆಳೆದಿವೆ. ದೇಶದ ಮೂಲೆಮೂಲೆಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸಿದ್ದರಿಂದ ಸ್ಥಳೀಯರ ವ್ಯಾಪಾರ- ವಹಿವಾಟುಗಳಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯವಾಗಿದೆ. ಆರ್ಥಿಕತೆಗೆ ಬಲ ಬಂದಿದೆ. ಎಷ್ಟೇ ಅಭಿಪ್ರಾಯಭೇದಗಳಿದ್ದರೂ ಭಾರತದಲ್ಲಿ ಕೊನೆಗೂ ಗೆಲ್ಲುವುದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶ್ರೀಮಂತಿಕೆಯೇ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಈ ಬಾರಿ ನಡೆದ ಕೆಲವು ಘಟನೆಗಳು ಮುಂದಿನ ಮೇಳಗಳಿಗೆ ಜನಸಂದಣಿಯ ನಿರ್ವಹಣೆ, ಸಾರ್ವಜನಿಕ ಸುರಕ್ಷತೆಯ ವಿಷಯದಲ್ಲಿ ಮಾರ್ಗದರ್ಶಿಯಾಗಲಿವೆ.