ಬಹುಮುಖಿ ಆಯೋಜಿಸಿದ್ದ ಮೈ-ಸೊರ್-ಸ್ಟೋರಿ ಕೃತಿ ಕುರಿತ ಚರ್ಚೆ ಹಾಗೂ ಸಂವಾದದಲ್ಲಿ ಸಿ.ಚಂದ್ರಶೇಖರ್ ಮಾತನಾಡಿದರು. ರವಿಕಾಂತೇಶಗೌಡ, ಶಿವಕುಮಾರ್, ಜಿ.ರಾಘವೇಂದ್ರ ಸ್ವಾಮಿ, ಜಿ.ಕೆ.ಮಿಥುನ್‌ಕುಮಾರ್ ಇದ್ದರು.  
ನ್ಯೂಸ್

ಮೈ-ಸೊರ್-ಸ್ಟೋರಿಯಲ್ಲಿ ಯಾತನೆಯ ಅನಾವರಣ

ಶಿವಮೊಗ್ಗ: ನಾನು ಮೈಸೂರು ಪೊಲೀಸ್ ಆಯುಕ್ತನಾಗಿದ್ದ ಸಂದರ್ಭ ಮೂವರು ನ್ಯಾಯಮೂರ್ತಿಗಳ ಮೇಲಿನ ಲೈಂಗಿಕ ಹಗರಣದ ಆರೋಪದಲ್ಲಿ ನನ್ನನ್ನು ಸಿಲುಕಿಸಿ 15 ವರ್ಷ ತೀವ್ರ ನೋವು ಅನುಭವಿಸುವಂತೆ ಮಾಡಲಾಯಿತು ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಸಿ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ಬಹುಮುಖಿ ಸಂಘಟನೆ ಏರ್ಪಡಿಸಿದ್ದ ಮೈ-ಸೊರ್-ಸ್ಟೋರಿ ಕೃತಿ ಕುರಿತ ಚರ್ಚೆ ಹಾಗೂ ಸಂವಾದದಲ್ಲಿ ಭಾಗವಹಿಸಿ ತಮ್ಮ ಮೈ-ಸೊರ್-ಸ್ಟೋರಿ ಕೃತಿ ರೂಪುಗೊಳ್ಳಲು ಕಾರಣ ವಿವರಿಸಿದ ಅವರು, 2017ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಖುಲಾಸೆಯಾದ ಬಳಿಕ ನನ್ನ ನೋವು ಲೇಖನಿ ಮೂಲಕ ಕೃತಿಯ ರೂಪ ಪಡೆಯಿತು ಎಂದರು.

ನಡೆಯದ ಘಟನೆಯಲ್ಲಿ ನನ್ನನ್ನು ಸಿಲುಕಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳವರೆಗೆ ಹೋಗುವಂತೆ ಮಾಡಲಾಯಿತು. ಸಮಾಜದ ನಡುವೆಯಿದ್ದು ಮಾಡದ ತಪ್ಪಿಗೆ ಯಾತನೆಯ ಸಜೆ ಅನುಭವಿಸಿದ ನಾನು ಮಾನಸಿಕವಾಗಿ ತೀವ್ರ ಕುಗ್ಗುವಂತೆ ಈ ಘಟನೆ ಮಾಡಿತು ಎಂದರು.

2002ರ ನವೆಂಬರ್‌ನಲ್ಲಿ ಮೈಸೂರಿನ ಒಂದು ಐಷಾರಾಮಿ ಹೋಟೆಲ್‌ನಲ್ಲಿ ಅವರು ನಡೆಸಿದ ದಾಳಿ ಬಗ್ಗೆ ಪ್ರಕಟವಾದ ಪತ್ರಿಕಾ ವರದಿಗಳ ನಂತರ ನಡೆದ ಘಟನೆಗಳ ಬೆಳವಣಿಗೆಗಳನ್ನು ಹಂತ ಹಂತವಾಗಿ ವಿಶ್ಲೇಷಿಸಿದರು. ಪತ್ರಿಕೆಗಳಲ್ಲಿ ಆರೋಪಿಸಿದಂತೆ, ಪ್ರಕರಣ ದಿನನಿತ್ಯ ವಿಭಿನ್ನ ತಿರುವುಗಳನ್ನು ತೆಗೆದುಕೊಂಡಿತು. ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್-ಜನರಲ್‌ನ ಮಧ್ಯಪ್ರವೇಶ ಅಗತ್ಯವಾಯಿತು. ನನ್ನ ಸ್ಥಾನದಿಂದ ಅನೌಪಚಾರಿಕವಾಗಿ ವರ್ಗಾಯಿಸಲ್ಪಟ್ಟೆ. 100 ದಿನ ಹೊಸದಾಗಿ ಹುದ್ದೆ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂದಿನ ಘಟನೆಗಳಲ್ಲಿ ಭಾಗವಹಿಸಿರುವವರಿಗೆ ರಕ್ಷಣೆ ನೀಡಿದ ಗಂಭೀರ ಆರೋಪವನ್ನು ನನ್ನ ಮೇಲೆ ಹೊರಿಸಲಾಗಿತ್ತು. ಇದು ಯಾವ ಹಂತದಲ್ಲಿಯೂ ಸಾಬೀತಾಗಲಿಲ್ಲ. ಆದರೂ ನಾನು ನೋವು ಅನುಭವಿಸಬೇಕಾಯಿತು. ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿ ಆರೋಪಿಗಳೆಂದು ಹೆಸರು ಹೇಳಲ್ಪಟ್ಟ ವ್ಯಕ್ತಿಗಳನ್ನು ನಿರಪರಾಧಿಗಳೆಂದು ಘೋಷಿಸಿತು ಎಂದು ವಿವರಿಸಿದರು.

ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಮಾತನಾಡಿ, ಕೃತಿಕಾರ ಚಂದ್ರಶೇಖರ್ ಅವರಿಗೆ ಅಂದು ನಡೆದ ಬೆಳವಣಿಗೆಗಳು ಅವರ ಜೀವನದಲ್ಲಿ ಶಾಶ್ವತ ಗಾಯವನ್ನು ಉಂಟುಮಾಡಿದೆ. ತೀವ್ರ ಭಾವಾಭಿವ್ಯಕ್ತಿಯೊಂದಿಗೆ ಒಟ್ಟಾರೆ ಮೊತ್ತವಾಗಿ ಈ ಪುಸ್ತಕ ಹೊರಬಂದಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ರಾಘವೇಂದ್ರ ಸ್ವಾಮಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಇದ್ದರು.