ನ್ಯೂಸ್

ಅಂತೂ ಮಧ್ಯಸ್ಥಿಕೆಗೆ ಮುಂದಾದ ವಿಶ್ವಸಂಸ್ಥೆ; ರಷ್ಯಾ-ಯೂಕ್ರೇನ್ ಅಧ್ಯಕ್ಷರ ಭೇಟಿಗೆ ಆಂಟನಿಯೋ ಗುಟೆರೆಸ್

ಮಾಸ್ಕೊ/ಕಿಯೆವ್: ನಾಗರಿಕರನ್ನು ಸುರಕ್ಷಿತವಾಗಿ ಯುದ್ಧಭೂಮಿಯಿಂದ ಹೊರ ಕರೆತರಬೇಕಾಗಿದೆ. ಇದಕ್ಕಾಗಿ ಕದನವಿರಾಮ ಘೋಷಣೆ ಅಗತ್ಯ. ಆದ್ದರಿಂದ ರಷ್ಯಾ ಮತ್ತು ಯೂಕ್ರೇನ್ ಅಧ್ಯಕ್ಷರ ಭೇಟಿಗೆ ವಿಶ್ವಸಂಸ್ಥೆ ಮುಖ್ಯಸ್ಥ ಆಂಟನಿಯೋ ಗುಟೆರೆಸ್ ಮುಂದಾಗಿದ್ದಾರೆ. ಏ.26ಕ್ಕೆ ಮಾಸ್ಕೊಗೆ ಭೇಟಿ ನೀಡಲಿದ್ದು, ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ವಿದೇಶಾಂಗ ಸಚಿವ ಸರ್ಗೆ ಲಾವೋವ್ ಜತೆಗೆ ಮಾತುಕತೆ ನಡೆಸುವರು. ಯೂಕ್ರೇನ್ ಮೇಲೆ ರಷ್ಯಾದ ಆಲ್ ಔಟ್ ಸಮರವನ್ನು ಕೊನೆಗೊಳಿಸುವುದಕ್ಕೆ ಈ ಪ್ರಯತ್ನ ಒಂದು ಮೆಟ್ಟಿಲಾದೀತು ಎಂಬ ಆಶಾವಾದವನ್ನು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ. ಏ.28ರಂದು ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಮತ್ತು ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಜತೆಗೆ ಮಾತುಕತೆ ನಡೆಸುವರು. ಇಲ್ಲಿ, ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳ ಪ್ರತಿನಿಧಿಗಳಿಗೆ ಮಾನವೀಯ ನೆರವು ವಿಸ್ತರಿಸುವುದಕ್ಕೆ ಸೂಚನೆ ನೀಡಲಿದ್ದಾರೆ.

ಪೂರ್ವದಲ್ಲಿ ರಷ್ಯಾಕ್ಕೆ ಪ್ರತಿರೋಧ: ಪೂರ್ವ ಯೂಕ್ರೇನ್ ಮೇಲೆ ದಾಳಿ ತೀವ್ರಗೊಳಿಸಿದ ರಷ್ಯಾ ಪಡೆಗೆ ಅಲ್ಲಿಂದ ಪ್ರತಿರೋಧ ಹೆಚ್ಚಾಗಿದೆ. ಹೀಗಾಗಿ ಡೊನ್​ಬಾಸ್ ಪ್ರಾಂತ್ಯ ವಶಪಡಿಸುವ ಅದರ ಇರಾದೆ ವಿಳಂಬವಾಗಿದೆ. ಶನಿವಾರ ಈ ದಾಳಿ ತೀವ್ರಗೊಂಡಿದೆ ಎಂದು ಯೂಕ್ರೇನ್ ಮಾಧ್ಯಮಗಳು ವರದಿ ಮಾಡಿವೆ.

ಯೂಕ್ರೇನ್ ಬಳಿಕ ರಷ್ಯಾ ಇನ್ನಷ್ಟು ನೆರೆಯ ರಾಷ್ಟ್ರಗಳ ಮೇಲೆ ದಾಳಿ ನಡೆಸಲಿದೆ. ಈ ಬಗ್ಗೆ ಮಿತ್ರ ರಾಷ್ಟ್ರಗಳು ಎಚ್ಚರಿಕೆ ವಹಿಸುವುದು ಒಳಿತು. | ವೊಲೊದಿಮಿರ್ ಝೆಲೆನ್​ಸ್ಕಿ ಯೂಕ್ರೇನ್ ಅಧ್ಯಕ್ಷ

ಒಡೆಸಾ ದಾಳಿಗೆ 5 ಸಾವು: ಒಡೆಸಾದ ಮೇಲೆ ರಷ್ಯಾ ಸೇನೆ ನಡೆಸಿದ ಕ್ಷಿಪಣಿ ದಾಳಿಗೆ 5 ಜನ ಮೃತಪಟ್ಟಿದ್ದು, ಕನಿಷ್ಠ 18 ಜನ ಗಾಯಗೊಂಡಿದ್ದಾರೆ. ಪೂರ್ವ ಯೂಕ್ರೇನ್​ನಲ್ಲಿ ಮೂರು ಡಜನ್​ಗೂ ಹೆಚ್ಚು ಪುಟ್ಟ ಪಟ್ಟಣಗಳನ್ನು ರಷ್ಯಾ ಸೇನೆ ವಶಪಡಿಸಿಕೊಂಡು ಮುನ್ನ ಡೆದಿದೆ ಎಂದು ಯೂಕ್ರೇನ್ ಹೇಳಿದೆ.

ಭಾರತದ ನಿಲುವು ಸ್ಪಷ್ಟ: ರಷ್ಯಾ-ಯೂಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿ ಭಾರತ ನಿಲುವು ಬಹಳ ಸ್ಪಷ್ಟವಾಗಿದೆ. ರಷ್ಯಾಕ್ಕೆ ಅದರ ನೆರೆಯಲ್ಲಿ ಉಂಟಾಗಿರುವ ಭದ್ರತಾ ಬೆದರಿಕೆ ಎಂದಷ್ಟೆ ಈ ಬಿಕ್ಕಟ್ಟನ್ನು ಪರಿಗಣಿಸಬೇಕು. ಎರಡೂ ರಾಷ್ಟ್ರಗಳ ನಾಯಕರು ಪರಸ್ಪರ ಮಾತುಕತೆ, ರಾಜತಾಂತ್ರಿಕ ದಾರಿಯಲ್ಲಿ ಇದನ್ನು ಬಗೆಹರಿಸಬೇಕು. ಸ್ನೇಹಿತ ದುರ್ಬಲನಾಗಿರಬಾರದು ಮತ್ತು ಸ್ನೇಹಿತ ದುರ್ಬಲನಾಗುವುದಕ್ಕೆ ಬಿಡಬಾರದು. ಇದನ್ನು ಅಮೆರಿಕ ಅರ್ಥಮಾಡಿಕೊಳ್ಳಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾಷಿಂಗ್ಟನ್​ನಲ್ಲಿ ಹೇಳಿದ್ದಾರೆ. ಇತರೆ ದೇಶಗಳ ಜತೆಗೆ ಹೇಗೆ ಸ್ಪಷ್ಟ ವ್ಯವಹಾರವನ್ನು ಇಟ್ಟುಕೊಂಡಿದ್ದೇವೆಯೋ ಅದೇ ರೀತಿ ಭಾರತದ ಜತೆಗೂ ವ್ಯವಹರಿಸುತ್ತೇವೆ. ರಕ್ಷಣಾ ಅಗತ್ಯಗಳಿಗಾಗಿ ಭಾರತವು ರಷ್ಯಾವನ್ನು ಅವಲಂಬಿಸಬಾರದು. ಅದರಿಂದ ನಮಗೇನೂ ಆಗಬೇಕಾಗಿಲ್ಲ. ಆದರೆ ಅಂತಹ ಪ್ರಯತ್ನವನ್ನು ನಾವು ಉತ್ತೇಜಿಸುವುದಿಲ್ಲ ಎಂದು ಪೆಂಟಗಾನ್ ಪ್ರೆಸ್ ಸೆಕ್ರಟರಿ ಜಾನ್ ರ್ಕಿಬಿ ಹೇಳಿದ್ದಾರೆ.