ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಮಕ್ಕಳು ಕಡಿಮೆ ಅಂಕಗಳನ್ನು ಪಡೆದರೆ ಹತ್ತನೆಯ ಅಥವಾ ಹದಿನೈದನೆಯ ಮಹಡಿಗೆ ಹೋಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಇದು ವಿವೇಚನೆಯ, ವಿವೇಕದ ಅಭಾವ. ಕೆಲವು ಅಂಕಗಳನ್ನು, ಗ್ರೇಡ್ಗಳನ್ನು ಪಡೆಯುವುದರ ಮೇಲೆ ಜೀವನವು ಅವಲಂಬಿಸಿಲ್ಲ. ಸಣ್ಣ ಪುಟ್ಟ ವಿಷಯಗಳಿಂದ ಗೊಂದಲಕ್ಕೊಳಗಾಗಿ ತಳಮಳಗೊಳ್ಳುತ್ತೇವೆ. ಉದಾಹರಣೆಗೆ, ಸೊಸೆ ತನ್ನ ಅತ್ತೆಯೊಡನೆ ಜಗಳವಾಡಿಕೊಂಡು ಮಕ್ಕಳನ್ನು ತವರಿಗೆ ಕರೆದು ಕೊಂಡು ಹೋಗಿಬಿಡುತ್ತಾಳೆ.
ಆದರೆ ಹಿಂದೆ ತನ್ನ ತಾಯಿಯೊಡನೆಯೂ ಜಗಳವಾಡಿರುತ್ತಾಳಲ್ಲ? ವಿವೇಕ ಎಂದರೆ ಶಾಶ್ವತವಾದುದರ ಮತ್ತು ಅಶಾಶ್ವತವಾದುದರ ನಡುವಿನ ವ್ಯತ್ಯಾಸವನ್ನು ತಿಳಿಯುವುದು. ದಿನನಿತ್ಯದ ಜೀವನದಲ್ಲಿ ಎಲ್ಲರೂ ಸಮಸ್ಯೆಗಳನ್ನು ಎದುರಿಸುತ್ತೇವೆ. ಆದರೆ ನಿಮ್ಮ ಸಮಸ್ಯೆ ನಿಮ್ಮ ಜೀವನಕ್ಕಿಂತಲೂ ದೊಡ್ಡದು ಎಂದು ನೀವಂದುಕೊಂಡರೆ, ಅದು ಅವಿವೇಕ. ಜೀವನವು ಈ ಎಲ್ಲಾ ಸಮಸ್ಯೆಗಳಿಗಿಂತಲೂ ಬಲು ದೊಡ್ಡದು. ಈ ದೃಷ್ಟಿಕೋನದಿಂದ ಜೀವನವನ್ನು ನೋಡಿದಾಗ ಆಗ ಜೀವನವು ಹೊರೆಯೆಂದು ನಿಮಗನಿಸುವುದಿಲ್ಲ. ಸತ್ಯಾಸತ್ಯದ ನಡುವಿನ, ಶಾಶ್ವತ ಮತ್ತು ಅಶಾಶ್ವತದ ನಡುವಿನ ವ್ಯತ್ಯಾಸವನ್ನು ತಿಳಿಯುವುದೇ ವಿವೇಕ.
ನಮ್ಮ ದೇಹವು ಶಾಶ್ವತವಾದುದಲ್ಲ, ಸದಾ ಬದಲಿಸುತ್ತಿರುತ್ತದೆ. ನಮ್ಮ ದೇಹದ ಪ್ರತಿಯೊಂದು ಕೋಶವೂ ಬದಲಿಸುತ್ತಿರುತ್ತದೆ. ಆದರೂ ಬದಲಿಸದಿರುವ ಏನೋ ಒಂದು ನಮ್ಮೊಳಗಿದೆ. ಬದಲಿಸದಿರುವುದರ ಸಹಾಯದಿಂದ ಬದಲಿಸುತ್ತಿರುವುದನ್ನು ತಿಳಿಯಬಹುದು. ಅಲ್ಪಕಾಲೀನ ಲಾಭ ಮತ್ತು ದೀರ್ಘಕಾಲೀನ ಲಾಭದ ಬಗ್ಗೆ ಗೊಂದಲವನ್ನು ತಾಳಿ, ದೊಡ್ಡ ಸಮಸ್ಯೆಯನ್ನು ನಮ್ಮ ಮೇಲೆ ತಂದುಕೊಳ್ಳುತ್ತೇವೆ. ನಮಗೆಂದು ಸಮಸ್ಯೆಗಳನ್ನು ಸೃಷ್ಟಿಸಿಕೊಂಡಾಗ, ನಮ್ಮ ಸುತ್ತಲೂ ಇರುವವರಿಗೂ ಸಮಸ್ಯೆಗಳನ್ನು ಉಂಟು ಮಾಡುತ್ತೇವೆ. ಈ ಪ್ರವೃತ್ತಿ ಅವಿವೇಕ. ನಮ್ಮ ಜೀವನದಲ್ಲಿ ವಿವೇಕದ ಕಿಡಿಯನ್ನು ಉರಿಸುವುದೇ ಜ್ಞಾನದ ಮೊದಲನೆಯ ಸ್ತಂಭ.
ಕೆಲವೊಮ್ಮೆ ವಿಷಯಗಳು ಕಾಣುವ ರೀತಿಯಲ್ಲಿ ಇರುವುದಿಲ್ಲ. ಕಾಣುತ್ತಿರುವುದು ಸತ್ಯವಾಗಿರಬೇಕಿಲ್ಲ. ಉದಾಹರಣೆಗೆ ನೀವು ಯಾರ ಮನೆಗೋ ಹೋಗುತ್ತೀರಿ. ಆ ಮನೆಯಾಕೆ ಒಲೆಯ ಮೇಲೆ ಹಾಲನ್ನಿಟ್ಟಿರುತ್ತಾರೆ. ಗಂಟೆಯ ಶಬ್ದ ಕೇಳಿ ನಿಮ್ಮನ್ನು ಸ್ವಾಗತಿಸಲು ಬರುತ್ತಾರೆ. ಬಾಗಿಲ ಬಳಿ ಬಂದಾಗ ಒಲೆಯ ಮೇಲಿಟ್ಟ ಹಾಲು ನೆನಪಿಗೆ ಬಂದು, ಅದನ್ನಿಳಿಸಬೇಕೆಂಬ ಅವಸರದಲ್ಲಿ ಓಡುವಾಗ ಅಕಸ್ಮಾತ್ತಾಗಿ ಬಾಗಿಲು ಮುಚ್ಚಿಕೊಳ್ಳುತ್ತದೆ. ಹಾಲು ಸೀದು ಹೋಗುತ್ತದೆಂದು ಅವರು ಆಲೋಚಿಸುತ್ತಿರುತ್ತಾರೆ ಆದರೆ ನೀವು, ‘ಓ ಎಂತಹ ಅಪಮಾನ! ನಾನು ಈಕೆಯನ್ನು ನೋಡಲು ಬಂದರೆ ಬಾಗಿಲನ್ನು ನನ್ನ ಮುಖಕ್ಕೆ ಬಡಿದಳು’ ಎಂದುಕೊಳ್ಳುತ್ತೀರಿ. ಆದರೆ ಆಕೆ ಬೇಕೆಂದೇ ಹಾಗೆ ಮಾಡಲಿಲ್ಲವಾದರೂ ನೀವು ತಪ್ಪು ಭಾವಿಸಿದ್ದೀರಿ. ಇದು ಅವಿವೇಕ.
ವೈರಾಗ್ಯ: ವೈರಾಗ್ಯವು ಜ್ಞಾನದ ಎರಡನೆಯ ಸ್ತಂಭ. ವೈರಾಗ್ಯ ವೆಂದರೇನು? ನನಗೇನೂ ಬೇಡ ಎಂದುಕೊಳ್ಳುವುದು ವೈರಾಗ್ಯವಲ್ಲ. ವೈರಾಗ್ಯವೆಂದರೆ ಜೀವನವನ್ನು ವಿಶಾಲ ದೃಷ್ಟಿಕೋನದಿಂದ ನೋಡು ವುದು. ವೈರಾಗ್ಯವೆಂದರೆ ಜೀವನದ ಜ್ವರದಿಂದ ದೂರವಿರುವುದು. ಬಯಕೆಗಳ ಜ್ವರತೆಯಿಂದ ಬಿಡುಗಡೆಯನ್ನು ಅನುಭವಿಸುವುದೇ ವೈರಾಗ್ಯ. ವಿವೇಕ ಮತ್ತು ವೈರಾಗ್ಯಗಳೆರಡೂ ಮುಖ್ಯ.
ಹಾಗೆಯೇ ಅನುರಕ್ತಿ ಮತ್ತು ವೈರಾಗ್ಯಗಳೆರಡೂ ಮುಖ್ಯ. ನಿಮಗೆ ಕೇವಲ ಅನುರಕ್ತಿಯಿದ್ದರೆ ಖಿನ್ನತೆಗೊಳಗಾಗುತ್ತೀರಿ. ಪ್ರತಿಯೊಂದು ಬಯಕೆ ತಕ್ಷಣವೇ ಪೂರ್ಣಗೊಳ್ಳುತ್ತದೆಂದಲ್ಲ. ನಿಮ್ಮ ಬಯಕೆಯನ್ನು ಪೂರ್ಣಗೊಳಿಸಲು ಸಹನೆಯಿಂದ ಕಾರ್ಯವನ್ನು ನಿರ್ವಹಿಸಬೇಕು. ವೈರಾಗ್ಯವಿದ್ದಾಗ ಮಾತ್ರ ಹೀಗಾಗಲು ಸಾಧ್ಯ. ವೈರಾಗ್ಯವಿಲ್ಲದಿದ್ದರೆ ನೆಮ್ಮದಿ
ಯಾಗಿ ನಿದ್ದೆಯನ್ನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಜೀವನದಲ್ಲಿ ಎಷ್ಟರಮಟ್ಟಿಗೆ ವೈರಾಗ್ಯವಿದೆಯೊ, ಅಷ್ಟರಮಟ್ಟಿಗೆ ನಿಮಗೆ ನೆಮ್ಮದಿಯ ನಿದ್ದೆ ಬರುತ್ತದೆ. ಎಲ್ಲವನ್ನೂ ಹಿಡಿದಿಟ್ಟುಕೊಂಡು ನಮ್ಮಲ್ಲೇ ಇಟ್ಟು
ಕೊಳ್ಳುವ ಪ್ರವೃತ್ತಿ ಬಾಲ್ಯದಿಂದಲೇ ಆರಂಭವಾಗುತ್ತದೆ. ಆದರೆ ಬಿಟ್ಟು ಬಿಡುವುದೂ ಜೀವನದಲ್ಲಿ ಬರಬೇಕು. ಬಿಟ್ಟುಬಿಡದಿದ್ದರೆ ವಿಶ್ರಮಿಸಲು ಸಾಧ್ಯವಿಲ್ಲ. ಬಿಟ್ಟುಬಿಡದಿದ್ದರೆ ಕಾಯಿಲೆ ಬೀಳುತ್ತೀರಿ. ನಿದ್ದೆ ಮಾಡುವಾಗ ಎಲ್ಲವನ್ನೂ ಬಿಡುತ್ತೀರಿ. ಮಲಗುವ ಮುನ್ನ ನಿಮ್ಮ ಮನಸ್ಸನ್ನು ಖಾಲಿ ಮಾಡಿಬಿಟ್ಟು ಮಲಗಬೇಕು. ಒಂದು ಆಲೋಚನೆಯನ್ನು ಹಿಡಿದಿಟ್ಟುಕೊಂಡರೂ ಸಾಕು, ನಿಮ್ಮ ನಿದ್ದೆಗೆಡುತ್ತದೆ. ಇದು ವೈರಾಗ್ಯದ ಅಭಾವವನ್ನು ಸೂಚಿಸುತ್ತದೆ. ವೈರಾಗ್ಯವಿದ್ದರೆ ಸುಖವಾದ ನಿದ್ದೆ ಬರುತ್ತದೆ, ನಿಮ್ಮ ಮುಖದ ಮೇಲೆ ಮುಗುಳ್ನಗೆ ಇರುತ್ತದೆ ಮತ್ತು ಸಂತೋಷವು ರಾರಾಜಿಸುತ್ತಿರುತ್ತದೆ, ಜೀವನದಲ್ಲಿ ಉತ್ಸಾಹವಿರುತ್ತದೆ.
ವೈರಾಗ್ಯವನ್ನು ತಪ್ಪಾಗಿ ತಿಳಿದಿದ್ದೇವೆ. ದುಃಖವಾದ ಮುಖವನ್ನಿಟ್ಟು ಕೊಂಡು ಕುಳಿತಿದ್ದರೆ ಅವರು ವಿರಾಗಿಗಳು ಎಂದುಕೊಳ್ಳುತ್ತೇವೆ. ಖಿನ್ನತೆ ವೈರಾಗ್ಯಕ್ಕೆ ತದ್ವಿರುದ್ಧವಾದದ್ದು ಮತ್ತು ವೈರಾಗ್ಯದ ಅಭಾವವನ್ನು ಸೂಚಿಸುತ್ತದೆ. ಖಿನ್ನತೆಯಿದ್ದವರಲ್ಲಿ ಶೂನ್ಯ ವೈರಾಗ್ಯವಿದೆ ಎಂದರ್ಥ. ವೈರಾಗ್ಯದ ಚಿಹ್ನೆ ಮಂಕುತನವಲ್ಲ. ವೈರಾಗ್ಯದ ಚಿಹ್ನೆ ಉತ್ಸಾಹ. ವೈರಾಗ್ಯ
ವಿದ್ದಾಗ ನೀವು ಶಾಂತಿಯುತರಾಗಿರುತ್ತೀರಿ, ಶಕ್ತಿಯುತ ರಾಗಿರುತ್ತೀರಿ, ಸಂತೋಷದಿಂದಿರುತ್ತೀರಿ. ವಿರಾಗಿಗಳೆಂದು ಕರೆಸಿ ಕೊಳ್ಳುವ ಕೆಲವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವಂತೆ ತೋರುತ್ತದೆ. ಅಷ್ಟು ಕೊಳಕಾಗಿರುತ್ತಾರೆ, ಉಗುರುಗಳನ್ನು ಕತ್ತರಿಸುವುದಿಲ್ಲ. ಸ್ವಚ್ಛತೆ, ಶುದ್ಧತೆ ವೈರಾಗ್ಯಕ್ಕೆ ವಿರುದ್ಧವಲ್ಲ. ಆದಿ ಶಂಕರಾಚಾರ್ಯರು, ‘ಕಸ್ಯ ಸುಖಂನ ಕರೋತಿ ವಿರಾಗಃ?’, ವೈರಾಗ್ಯದಿಂದ ನಿಮಗೆ ಯಾವ ಸುಖತಾನೆ ಸಿಗುವುದಿಲ್ಲ? ಎಂದು ಕೇಳುತ್ತಾರೆ. (ಪ್ರತಿಕ್ರಿಯಿಸಿ: instagram@gurudev.kannada )