ನ್ಯೂಸ್

ಮಧ್ಯ ಪ್ರದೇಶ ರಾಜಕೀಯಕ್ಕೆ ತಿರುವು

ಭೋಪಾಲ್: ಮಧ್ಯಪ್ರದೇಶದ ರಾಜಕೀಯ ಹೈಡ್ರಾಮಾಕ್ಕೆ ಹೊಸ ತಿರುವು ಸಿಕ್ಕಿದೆ. ಕೆಲ ಕಾಂಗ್ರೆಸ್ ಶಾಸಕರು ರೆಸಾರ್ಟ್ ರಾಜಕೀಯ ನಡೆಸುತ್ತಿರುವ ಬೆನ್ನಲ್ಲೇ, ಬಿಜೆಪಿಯ ಇಬ್ಬರು ಶಾಸಕರು ಸಿಎಂ ಕಮಲ್​ನಾಥ್ ನಿವಾಸಕ್ಕೆ ಗುರುವಾರ ಮಧ್ಯರಾತ್ರಿ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ಶಾಸಕರಾದ ನಾರಾಯಣ್ ತ್ರಿಪಾಠಿ ಹಾಗೂ ಸಂಜಯ್ ಪಾಠಕ್ ಕಮಲ್​ನಾಥ್​ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ಶಾಸಕ ಹರ್ದಿಪ್ ಸಿಂಗ್ ರಾಜೀನಾಮೆ ಬಳಿಕ ಪರಿಸ್ಥಿತಿ ನಿಯಂತ್ರಿಸಲು ಸ್ವತಃ ಕಮಲ್​ನಾಥ್ ಹಾಗೂ ಕಾಂಗ್ರೆಸ್​ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಖಾಡಕ್ಕಿಳಿದಿದ್ದಾರೆ. ಜತೆಗೆ ಅಹ್ಮದ್ ಪಟೇಲ್, ಗುಲಾಂ ನಬೀ ಆಜಾದ್ ಹಾಗೂ ಕಪಿಲ್ ಸಿಬಲ್ ಸರ್ಕಾರ ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಮೂವರು ಶಾಸಕರು ನಾಪತ್ತೆಯಾಗಿದ್ದರೂ ಕೂಡ ಸರ್ಕಾರದ ಬಳಿ ಬಹುಮತಕ್ಕೆ ಬೇಕಾದಷ್ಟು ಸಂಖ್ಯೆ ಇದೆ. ಆದರೆ ಯಾವುದೇ ಕಾರಣಕ್ಕೂ 8ಕ್ಕಿಂತ ಹೆಚ್ಚು ಶಾಸಕರು ರಾಜೀನಾಮೆ ನೀಡದಂತೆ ತಡೆಯಲು ಕಾಂಗ್ರೆಸ್ ನಾಯಕರು ರಣನೀತಿ ಹೆಣೆಯುತ್ತಿದ್ದಾರೆ. ನಾಪತ್ತೆಯಾಗಿರುವ ಮೂವರು ಶಾಸಕರಾದ ರಘುರಾಜ್ ಕನ್ಸಾನ, ಬಿಸಾಹುಲಾಲ್ ಹಾಗೂ ಶೇರಾ ಭಯ್ಯಾ ಕರ್ನಾಟಕದಲ್ಲಿದ್ದಾರೆ ಎನ್ನಲಾಗಿದೆ.

ಸರ್ಕಾರ ಉಳಿವಿಗೆ ತಂತ್ರ

8 ಶಾಸಕರು ರಾಜೀನಾಮೆ ನೀಡದಂತೆ ತಡೆಯುವುದು.

ಶಾಸಕರು ಖುದ್ದಾಗಿ ರಾಜೀನಾಮೆ ನೀಡದ ಹೊರತು ಸ್ವೀಕರಿಸದಿರುವುದು.

ಎಲ್ಲ ಶಾಸಕರಿಗೂ ಭವಿಷ್ಯದಲ್ಲಿ ಸಿಗುವ ಅವಕಾಶಗಳ ಬಗ್ಗೆ ಮಾತು ಕೊಡುವುದು.

ಕೆಲ ಸಚಿವರನ್ನು ಕೆಳಗಿಳಿಸಿ ಅತೃಪ್ತರಿಗೆ ಅವಕಾಶ ನೀಡುವುದು.

ಖಾಲಿ ಉಳಿದಿರುವ 5 ಸಚಿವ ಸ್ಥಾನಗಳ ಹಾಗೂ ನಿಗಮ ಮಂಡಳಿಗಳ ಭರ್ತಿ.

ದೆಹಲಿಗೆ ಬಿಜೆಪಿ ನಾಯಕರು

ರಾಜ್ಯದ ಎಲ್ಲ ರಾಜಕೀಯ ಬೆಳವಣಿಗೆಗಳ ಕುರಿತು ಪಕ್ಷದ ವರಿಷ್ಠರ ಬಳಿ ರ್ಚಚಿಸಲು ಬಿಜೆಪಿ ನಾಯಕರ ತಂಡ ದೆಹಲಿಗೆ ತೆರಳಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ.