ಎನ್.ಆರ್.ಪುರ: ವಿಜ್ಞಾನ ಸತ್ಯವಾಗಿದ್ದು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾಗಿದೆ ಎಂದು ಬಿಇಒ ಕೆ.ಆರ್.ಪುಷ್ಪಾ ತಿಳಿಸಿದರು.
ಪಟ್ಟಣದ ದೀಪ್ತಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜ್ಞಾನಿಗಳು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ದೇಶದ ವಿಜ್ಞಾನಿಗಳು ಚಂದ್ರನ ಮೇಲೆ ಉಪಗ್ರಹ ಇಳಿಸಿದ್ದಾರೆ. ಈಗ ಪ್ರಪಂಚವೇ ಭಾರತದ ಕಡೆಗೆ ತಿರುಗಿ ನೋಡುತ್ತಿದೆ. ಪ್ರತಿ ವಿದ್ಯಾರ್ಥಿಯೂ ವಿಜ್ಞಾನಿಯಾಗಿದ್ದು, ಹಿಂಜರಿಕೆ ಇಲ್ಲದೆ ಪ್ರಯೋಗಗಳನ್ನು ಮಾಡಬೇಕು ಎಂದು ತಿಳಿಸಿದರು.
ದೀಪ್ತಿ ಪ್ರೌಢಶಾಲೆ ಕಾರ್ಯದರ್ಶಿ ಇ.ಸಿ.ಜೋಯಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡ ಹಲವಾರು ವಿದ್ಯಾರ್ಥಿಗಳು ವಿಜ್ಞಾನಿಗಳು, ಇಂಜಿನಿಯರ್, ಡಾಕ್ಟರ್ ಆಗಿದ್ದಾರೆ. ಇದರ ಹಿಂದೆ ಶಿಕ್ಷಕರ ಶ್ರಮವೂ ಇದೆ ಎಂದರು.
ದೀಪ್ತಿ ಪ್ರೌಢಶಾಲೆ ಉಪಾಧ್ಯಕ್ಷ ಪಿ.ಜೆ.ಆಂಟೋನಿ ಮಾತನಾಡಿ, ವಿಜ್ಞಾನಿಗಳಿಂದ ತಂತ್ರಜ್ಞಾನ ಬೆಳೆದಿದೆ. ತಂತ್ರಜ್ಞಾನದಿಂದ ಆಧುನಿಕತೆಯ ಹಲವಾರು ವಸ್ತುಗಳು ನಮ್ಮ ಮುಂದಿವೆ. ವೈಚಾರಿಕತೆ ಬೆಳೆದಂತೆ ಮೂಢನಂಬಿಕೆ ಕಡಿಮೆಯಾಗುತ್ತಿದೆ. ಆದರೆ ಸಕಾರಾತ್ಮಕವಾಗಿರುವ ನಮ್ಮ ಧರ್ಮ, ಸಂಪ್ರದಾಯ, ಆಚಾರ, ವಿಚಾರಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ವಿವಿಧ ಪ್ರೌಢಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಯಾರಿಸಿದ್ದ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿದರು.
ಶಿಕ್ಷಣ ಸಂಯೋಜಕ ರಂಗಪ್ಪ, ಸಂಗೀತಾ, ಪ್ರಭಾರ ಮುಖ್ಯಶಿಕ್ಷಕ ಲೀಲಾವತಿ, ಮಿಥುನ್, ಜೋಜೋ ಜೇಮ್ಸ್, ದೇವರಾಜ, ತೀರ್ಪುಗಾರರು ಇದ್ದರು.