ನ್ಯೂಸ್

ಮತ್ತೆ ಮೊಳಗಿದ ಪ್ರತ್ಯೇಕ ಲಿಂಗಾಯತ ಧರ್ಮದ ಕಹಳೆ

ಬೆಂಗಳೂರುL ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂಲಕ ಧರ್ಮ, ಜಾತಿಯನ್ನು ರಾಜ್ಯ ಸರ್ಕಾರ ಒಡೆಯುತ್ತಿದೆ ಎಂಬ ಆರೋಪ ಪ್ರತ್ಯಾರೋಪಗಳ ನಡೆವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮಖದಲ್ಲಿಯೇ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮದ ಕಹಳೆ ಮೊಳಗಿದೆ.

ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಜನ್ಮತಾಳಿದ ಧರ್ಮಯುದ್ಧ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ತೆರೆಮರೆಯಲ್ಲಿ ತಣ್ಣಗಾದಂತೆ ಕಂಡರೂ ಭಾನುವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ’ಬಸವ ಸಂಸ್ಕೃತಿ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಪ್ರತ್ಯೇಕ ಧರ್ಮದ ಕೂಗು ಢಾಳಾಗಿ ಪ್ರಜ್ವಲಿಸಿತು.

ಬಸವಾದಿ ಶರಣರು ಸ್ಥಾಪಿಸಿದ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ. ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ ಆಗಿದ್ದೇವೆ. ಬೌದ್ಧ, ಜೈನ, ಶಿಖ್ ಧರ್ಮಗಳಂತೆ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆ ಅಗತ್ಯವಾಗಿದೆ ಎಂದು ಸಮಾವೇಶದಲ್ಲಿದ್ದ ರಾಜಯಕೀಯ ಪ್ರತಿನಿಧಿಗಳು, ವಿವಿಧ ಮಠಗಳ ಸ್ವಾಮೀಜಿಗಳು ಪ್ರಖರವಾಗಿ ಮಂಡನೆ ಮಾಡಿದರು.

ರಾಜಾಶ್ರಯ ಸಿಕ್ಕರೆ ವಿಶ್ವಧರ್ಮ

ಈ ವೇಳೆ ಮಾತನಾಡಿದ ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮ ಸ್ವಾಮೀಜಿ, ಇಂದು ಜಾಗತಿಕವಾಗಿ ಬೆಳೆದಿರುವ ಬೌದ್ಧ ಧರ್ಮ, ಕ್ರೈಸ್ತ ಧರ್ಮ ಮತ್ತು ಯಹೂದಿ ಧರ್ಮಗಳಿಗೆ ರಾಜಾಶ್ರಯ ಸಿಕ್ಕಿದ್ದರಿಂದ ರಾಜ್ಯವನ್ನು ಮೀರಿ ಜಗತ್ತಿನಾದ್ಯಂತ ಬೆಳೆದಿವೆ. ಬಸವಣ್ಣನವರಿಗೆ ಸಿದ್ದರಾಮಯ್ಯವರೇ ರಾಜಾಶ್ರಯವಾಗಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಕ್ರಾಂತಿ ಮಾಡುವ ವೇಳೆ ಬಿಜ್ಜಳನ ಜಾಗದಲ್ಲಿ ಸಿದ್ದರಾಮಯ್ಯ ರಾಜನಾಗಿದ್ದರೆ, ಇಂದು ಬಸವ ಧರ್ಮ ವಿಶ್ವಧರ್ಮವಾಗುತ್ತಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಬಸವ ಧರ್ಮದಲ್ಲಿ ಇರುತ್ತಿದ್ದರು ಎಂದು ಬಣ್ಣಿಸಿದರು.

ಧರ್ಮ ಮಾನ್ಯತೆ ಸಿಕ್ಕೇ ಸಿಗುತ್ತದೆ: ಭಾಲ್ಕಿ ಶ್ರೀ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಾಸೆಯಿಂದಾಗಿ ರಾಜ್ಯದಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯ ಮುದ್ರೆ ಸಿಕ್ಕಿದೆ. ಈಗ ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ಕೆಲಸ ಆಗಬೇಕಾಗಿದೆ. ಅಲ್ಲಿಂದಲೂ ಸಹ ಲಿಂಗಾಯತ ಧರ್ಮಕ್ಕೆ ಈ ಒಪ್ಪಿಗೆಯ ಮುದ್ರೆ ಒಂದಿಲ್ಲೊಂದು ದಿನ ಬಿದ್ದೇಬೀಳುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹನುಮಂತನ ಎದೆಯಲ್ಲಿ ರಾಮನಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದೆಯಲ್ಲಿ ಬಸವಣ್ಣನಿದ್ದಾನೆ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರೂ ಆಗಿರುವ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಭವಿಷ್ಯ ನುಡಿದರು.

5 ನಿರ್ಣಯಗಳು

- ಲಿಂಗಾಯತರೆಲ್ಲರೂ ಮೊದಲು ಭಾರತೀಯರು. ಲಿಂಗಾಯತ ಧರ್ಮ ಕನ್ನಡದ ಧರ್ಮ. ಧರ್ಮಕ್ಕಿಂತ ದೇಶ ಮೊದಲು. ರಾಷ್ಟ್ರಪ್ರಜ್ಞೆಯೊಂದಿಗೆ ದೇಶದ ಐಕ್ಯತೆಗೆ ಸದಾ ಶ್ರಮಿಸುವುದು.

- 12 ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರು ಹಾಗೂ ಬಸವಾದಿ ಶರಣರು ಸೇರಿ ಸ್ಥಾಪಿಸಿದ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ. ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ. ಬೌದ್ಧ, ಜೈನ, ಶಿಖ್ ಧರ್ಮಗಳಂತೆ ಲಿಂಗಾಯತರಿಗೆ ಸರ್ಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದು.

- ಸಮಾನತೆ, ಸಹೋದರತೆ, ಮಾನವೀಯ ಮೌಲ್ಯಗಳ ನಿಜಧರ್ಮ ಲಿಂಗಾಯತ ಧರ್ಮ. ಲಿಂಗಾಯತರಲ್ಲಿನ ಸಣ್ಣ, ಹಿಂದುಳಿದ ಉಪಪಂಗಡಗಳನ್ನು ನಾವೆಲ್ಲರೂ ಅಪ್ಪಿಕೊಂಡು, ಅವರ ಅಭ್ಯುದಯಕ್ಕಾಗಿ ಶ್ರಮಿಸುತ್ತಾ, ಎಲ್ಲ ಒಳಪಂಗಡಗಳ ಭೇದ ತೊರೆದು, ಉಪಜಾತಿಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಬೇಕು.

- ಲಿಂಗಾಯತರೆಲ್ಲರೂ ನಮ್ಮ ಅರಿವಿನ ಕುರುಹು, ಅಸ್ಮಿತೆ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧಾರಣೆ ಮಾಡುವುದು.

- ಲಿಂಗಾಯತ ಧರ್ಮೀಯರು ತಮ್ಮ ಮನೆಗಳಲ್ಲಿ ಜನನದಿಂದ-ಮರಣದವರೆಗೆ ಶರಣ ಸಂಸ್ಕೃತಿ ಆಚರಣೆಗಳನ್ನು ಸದಾ ಅನುಸರಿಸಬೇಕು.