ಬಾಗ್ದಾದ್/ವಾಷಿಂಗ್ಟನ್: ರೆವಲೂಷನರಿ ಗಾರ್ಡ್ಸ್ ಪಡೆಯ ಜನರಲ್ ಖಾಸಿಂ ಸುಲೇಮಾನಿಯನ್ನು ಹತ್ಯೆಗೈದ ಅಮೆರಿಕ ವಿರುದ್ಧ ಮೊದಲ ಪ್ರತೀಕಾರ ತೀರಿಸಿಕೊಂಡಿರುವ ಇರಾನ್ ಮಂಗಳವಾರ ತಡರಾತ್ರಿ ಇರಾಕ್ನ ಅಲ್ -ಅಸಾದ್ ಮತ್ತು ಎರ್ಬಿಲ್ನಲ್ಲಿರುವ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಅಮೆರಿಕ ನೇತೃತ್ವದ ಮಿತ್ರಪಡೆಗಳು ಬಳಸುವ ಈ ವಾಯುನೆಲೆಗಳಲ್ಲಿದ್ದ ಕನಿಷ್ಠ 80 ಜನ ಮೃತಪಟ್ಟಿದ್ದಾರೆಂದು ಇರಾನ್ ಮಾಧ್ಯಮಗಳು ಹೇಳುತ್ತಿವೆಯಾದರೂ ಅದು ಖಚಿತವಾಗಿಲ್ಲ. ಈ ದಿಢೀರ್ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಕವಿದಿದ್ದ ಯುದ್ಧ ಕಾಮೋಡ ಮತ್ತಷ್ಟು ದಟ್ಟೈಸಿದ್ದು, ಇಸ್ರೇಲ್, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿ ಟ್ರಂಪ್ ಸರ್ಕಾರಕ್ಕೆ ಬೆಂಬಲ ಘೋಷಿಸಿವೆ.
ಇರಾಕ್ನ ಎರಡು ವಾಯುನೆಲೆಯನ್ನು ಗುರಿಯಾಗಿರಿಸಿಕೊಂಡು ಇರಾನ್ ತನ್ನ ಗಡಿಯಿಂದ 22 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ರಾತ್ರಿ 1.30ರ ಸುಮಾರಿಗೆ (ಸ್ಥಳೀಯ ಕಾಲಮಾನ) ಉಡಾಯಿಸಿದೆ. ಅಮೆರಿಕ ಸೇನೆ ಈ ದಾಳಿಯನ್ನು ಖಾತರಿಪಡಿಸಿದೆ ಯಾದರೂ ಸಾವುನೋವಿನ ಬಗ್ಗೆ ಪೆಂಟಗನ್ (ಅಮೆರಿಕ ರಕ್ಷಣಾ ಇಲಾಖೆ) ಯಾವುದೇ ಮಾಹಿತಿ ನೀಡಿಲ್ಲ.
ಅಮೆರಿಕದ ಡ್ರೋನ್ ವಿಮಾನ ಬಾಗ್ದಾದ್ನಲ್ಲಿ ಕಳೆದ ಗುರುವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಇರಾನ್ ಸೇನಾ ನಾಯಕ ಖಾಸಿಂ ಸುಲೇಮಾನಿ ಮತ್ತು ಹಿರಿಯ ಸೇನಾಧಿಕಾರಿ ಅಬು ಮಹ್ದಿ ಅಲ್- ಮುಹಂದಿಸ್ ಸೇರಿ 10 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಇರಾಕ್ನ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ. ಮತ್ತಷ್ಟು ದಾಳಿ ನಡೆಯುವುದನ್ನು ತಡೆಯಲು ಮಧ್ಯಪ್ರಾಚ್ಯದಲ್ಲಿರುವ ತನ್ನ ಸೇನೆಯನ್ನು ಅಮೆರಿಕ ಕೂಡಲೇ ಹಿಂಪಡೆಯಬೇಕು ಎಂದು ವಾಹಿನಿ ಒತ್ತಾಯಿಸಿದೆ. ಅಮೆರಿಕದ ಪಡೆಗಳು ಹಿಂದಿರುಗಬೇಕು ಎಂಬ ನಿಲುವಳಿಯನ್ನು ಇರಾಕ್ ಸಂಸತ್ ಭಾನುವಾರ ಅಂಗೀಕರಿಸಿದೆ. ಅಮೆರಿಕ ಮತ್ತು ಅದರ ಮಿತ್ರಪಡೆಯ ಐದು ಸಾವಿರ ಯೋಧರು ಇರಾಕ್ನಲ್ಲಿ ಇದ್ದಾರೆ. ಈ ಪಡೆಗಳು ಐಸಿಸ್ ನಿಗ್ರಹ ಕಾರ್ಯಾಚರಣೆ ಮತ್ತು ಇರಾಕ್ ಸೇನೆಗೆ ತರಬೇತಿ ನೀಡುತ್ತಿವೆ.
ಇರಾನ್ ದಾಳಿಗೆ ಕೂದಲೂ ಕೊಂಕಿಲ್ಲ ಡೊನಾಲ್ಡ್ ಟ್ರಂಪ್ ಸ್ಪಷ್ಟನೆ
ವಾಷಿಂಗ್ಟನ್: ‘ಇರಾನ್ ನಡೆಸಿದ ದಾಳಿಯಿಂದ ಅಮೆರಿಕ ಅಥವಾ ಇರಾಕ್ನ ಯಾವುದೇ ನಾಗರಿಕರ ಕೂದಲೂ ಕೊಂಕಿಲ್ಲ. ನಮ್ಮ ಎಲ್ಲ ಯೋಧರು ಸುರಕ್ಷಿತವಾಗಿದ್ದು, ವಾಯುನೆಲೆಗೆ ಕನಿಷ್ಠ ಹಾನಿಯಾಗಿದೆ. ಇರಾನ್ನ ಇಂತಹ ಚೇಷ್ಟೆಗೆ ತಕ್ಕ ಉತ್ತರ ನೀಡಲು ನಮ್ಮ ಸೇನೆ ಸಿದ್ಧವಿದೆ’ ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಪಷ್ಟ ಎಚ್ಚರಿಕೆ. ಇರಾಕ್ನಲ್ಲಿರುವ ಅಮೆರಿಕದ ಎರಡು ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ತರುವಾಯ ದೇಶವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಇರಾನ್ ಭಯೋತ್ಪಾದನೆ ಪ್ರಾಯೋಜಿಸುವುದನ್ನು ಬಿಡುವವರೆಗೂ ಮಧ್ಯಪ್ರಾಚ್ಯದಲ್ಲಿ ಶಾಂತಿ, ಸ್ಥಿರತೆ ಕಾಣಲು ಸಾಧ್ಯವಿಲ್ಲ. ಆದರೆ, ಇರಾನನ್ನು ವಿಶ್ವದ ಅತ್ಯಂತ ಶಾಂತಿಯುತ ದೇಶವನ್ನಾಗಿಸಲು ನಾವೆಲ್ಲರೂ (ವಿಶ್ವ ಸಮುದಾಯ) ಒಗ್ಗೂಡಬೇಕಿದೆ ಎಂದರು. ಇರಾನ್
ಅಣ್ವಸ್ತ್ರ ಕಾರ್ಯಕ್ರಮವನ್ನು ನಿಲ್ಲಿಸಬೇಕು ಎಂದ ಟ್ರಂಪ್, ನಾನು ಅಧ್ಯಕ್ಷ ಆಗಿರುವವರೆಗೂ ಇರಾನ್ಗೆ ಅಣ್ವಸ್ತ್ರ ಹೊಂದಲು ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.ಇರಾನ್ ವಿರುದ್ಧ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಅತ್ಯುಗ್ರ ನಿರ್ಬಂಧಗಳನ್ನು ಶೀಘ್ರ ಜಾರಿ ಮಾಡಲಾಗುವುದು. ಇರಾನ್ ಈಗ ದಯನೀಯ ಸ್ಥಿತಿಯಲ್ಲಿದೆ. ಇದು ವಿಶ್ವಕ್ಕೆ ಒಳ್ಳೆಯ ಸಂಗತಿ. ನೈಸರ್ಗಿಕ ಅನಿಲ ಮತ್ತು ತೈಲ ಉತ್ಪಾದನೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಹೀಗಾಗಿ ನಾವು ತೈಲಕ್ಕಾಗಿ ಮಧ್ಯಪ್ರಾಚ್ಯದ ಮೇಲೆ ಅವಲಂಬಿತರಲ್ಲ ಎಂದರು.