ನವದೆಹಲಿ: ಕೊವಿಡ್-19ರಿಂದಾದ ಬಿಕ್ಕಟ್ಟು ನಿರ್ವಹಣೆಗಾಗಿ ಪ್ರಧಾನಮಂತ್ರಿ ಮೋದಿಯವರು ನಿನ್ನೆ ಆತ್ಮ ನಿರ್ಭರ ಭಾರತ ಅಭಿಯಾನ ಹೆಸರಿನಲ್ಲಿ 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಈ ಆರ್ಥಿಕ ಪ್ಯಾಕೇಜ್ ದೇಶಾದ್ಯಂತ ಹೇಗೆ ಹಂಚಿಕೆಯಾಗುತ್ತದೆ? ಯಾವ್ಯಾವ ವರ್ಗಕ್ಕೆ ಎಷ್ಟು ಎಂಬಿತ್ಯಾದಿ ವಿಚಾರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.
ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಒಂದು ಸಮಗ್ರ ದೃಷ್ಟಿಕೋನವನ್ನು ರೂಪಿಸಿದ್ದಾರೆ. ಸಮಾಜದ ಹಲವಾರು ವರ್ಗಗಳೊಂದಿಗೆ ವ್ಯಾಪಕ ಚರ್ಚೆ ನಡೆಸಿದ ನಂತರವೇ ಈ ಪ್ಯಾಕೇಜ್ ಘೋಷಿಸಲಾಗಿದೆ.
ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮತ್ತು ಆರ್ಥಿಕತೆಯ ಅತ್ಯಂತ ವೇಗದ ಬೆಳವಣಿಗೆಗೆ ಈ ಪ್ಯಾಕೇಜ್ ಸಹಾಯಕವಾಗಲಿದೆ. ಸ್ವಾವಲಂಬಿ ಭಾರತ ಎಂದರೆ ನಮ್ಮ ರಾಷ್ಟ್ರ ಪ್ರತ್ಯೇಕವಾಗಿ ಇರುತ್ತದೆ ಎಂದೂ ಅಲ್ಲ. ನಾವು ನಮ್ಮ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಬ್ರ್ಯಾಂಡ್ನ್ನಾಗಿ ಪರಿವರ್ತಿಸಬೇಕು. ಸ್ವಾವಲಂಬಿ ಭಾರತದ ಐದು ಆಧಾರ ಸ್ತಂಭಗಳಾದ ಆರ್ಥಿಕತೆ, ಮೂಲ ಸೌಕರ್ಯ, ವ್ಯವಸ್ಥೆ, ಜನಸಂಖ್ಯೆ, ಬೇಡಿಕೆ-ಪೂರೈಕೆಗಳನ್ನು ಉತ್ತೇಜನ ಮಾಡಲೆಂದೇ ಈ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಹಾಗೇ ಲಾಕ್ಡೌನ್ ಸಂದರ್ಭದಲ್ಲಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ನೆರವು ನೀಡಲಾಗಿದೆ. ಹಾಗೇ ಉಜ್ವಲಾ ಯೋಜನೆ ಮೂಲಕ ಬಡವರಿಗೆ ಉಚಿತ ಗ್ಯಾಸ್ ವಿತರಣೆ ಮಾಡಲಾಗಿದೆ. ಈ ಯೋಜನೆ ಇಲ್ಲದಿದ್ದರೆ ಅವರಿಗೆ ಗ್ಯಾಸ್ ಸಿಗುತ್ತಿರಲಿಲ್ಲ. 41 ಕೋಟಿ ಜನಧನ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಬಡವರಿಗೆ 71 ಸಾವಿರ ಟನ್ ಪಡಿತರ ವಿತರಿಸಲಾಗಿದೆ ಎಂದು ತಿಳಿಸಿದರು.
ಪ್ಯಾಕೇಜ್ಗೆ ಸಂಬಂಧಪಟ್ಟಂತೆ ಇಂದು 15 ಹೊಸ ಕ್ರಮಗಳನ್ನು ಕೈಗೊಳ್ಳಲಾಗುವುದು. ಅದರಲ್ಲಿ 6 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಂಬಂಧಪಟ್ಟದ್ದಾಗಿವೆ. ಎರಡು ಇಪಿಎಫ್ಗೆ, ಎರಡು ಎಚ್ಎಫ್ಸಿಎಸ್ ಮತ್ತು ಎಂಎಫ್ಐಎಸ್ಗೆ ಹಾಗೂ ಒಂದು ಡಿಸ್ಕಾಮ್ಗಳಿಗೆ, ಒಂದು ಗುತ್ತಿಗೆದಾರರು, ಒಂದು ರಿಯಲ್ ಎಸ್ಟೇಟ್ ಮತ್ತು ಇತರರಿಗೆ ಸಂಬಂಧಪಟ್ಟದ್ದು ಎಂದು ತಿಳಿಸಿದರು. ಹಾಗೇ ಮೊದಲನೇದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡುವುದಾಗಿ ತಿಳಿಸಿದರು. (ಏಜೆನ್ಸೀಸ್)