ಧಾರವಾಡ: ಇರುವುದು ಒಂದು ಟಿಕೆಟ್. 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹಾಗಾಗಿ ಯಾರೂ ಒತ್ತಡ ತರಬೇಡಿ; ಗೆಲ್ಲುವವರಿಗೆ ಟಿಕೆಟ್ ಪಕ್ಕಾ ಎಂದು ಲೋಕಸಭಾ ಕ್ಷೇತ್ರದ ವೀಕ್ಷಕಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಲೋಕಸಭಾ ಟಿಕೆಟ್ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಯ ಭ್ರಷ್ಟಾಚಾರದಿಂದ ಬೇಸತ್ತ ಜನ ಕಾಂಗ್ರೆಸ್ ಸರ್ಕಾರವನ್ನು ಅಽಕಾರಕ್ಕೆ ತಂದಿದ್ದಾರೆ. ಕಾರ್ಯಕರ್ತರ ಶ್ರಮದಿಂದ ನಾವು ಶಾಸಕ, ಸಚಿವರಾಗಿದ್ದೇವೆ. ಇದೀಗ ಎಂಪಿಗಳನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಾಂಗ್ರೆಸ್ ಗ್ಯಾರಂಟಿಗಳು ನಮಗೆ ಶಕ್ತಿ ಕೊಟ್ಟಿವೆ. ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಜವಾಬ್ದಾರಿ ಕಾರ್ಯಕರ್ತರದು ಎಂದರು.
ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಆಕಾಂಕ್ಷಿಗಳಿ೦ದ ಅರ್ಜಿ ಸ್ವೀಕರಿಸಲಾಗಿದೆ. ಪಕ್ಷದ ಹೈಕಮಾಂಡ್‌ಗೆ ಸಲ್ಲಿಸಿದ ನಂತರ ಮತ್ತೊಂದು ಸುತ್ತಿನ ಸರ್ವೇ ಆಗಲಿದೆ. ಶೀಘ್ರವೇ ಅಭ್ಯರ್ಥಿಯನ್ನು ಘೋಷಿಸಿ ತಯಾರಿಗೆ ಅನುಕೂಲ ಕಲ್ಪಿಸಲಾಗುವುದು. ಪ್ರಲ್ಹಾದ ಜೋಶಿಯವರು ಪ್ರಭಾವಿಗಳು. ಆದರೂ ನಮ್ಮ ಗ್ಯಾರಂಟಿಗಳಿಗೆ ಹೆದರಿ ಬಿಜೆಪಿಯವರು `ಮೋದಿ ಗ್ಯಾರಂಟಿ' ಜಾರಿಗೆ ಹೊರಟಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಇತಿಹಾಸ ಸೃಷ್ಟಿಸೋಣ ಎಂದರು.
ಆಕಾಂಕ್ಷಿಗಳಿ೦ದ ಅರ್ಜಿ ಸಲ್ಲಿಕೆ
ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಎಂ.ಎಸ್. ಅಕ್ಕಿ, ಮೋಹನ ಲಿಂಬಿಕಾಯಿ, ಬಸವರಾಜ ಗುರಿಕಾರ, ಡಾ. ವಿಜಯ ಕುಲಕರ್ಣಿ, ಶರಣಪ್ಪ ಮತ್ತಿಕಟ್ಟಿ, ಅನಿಲಕುಮಾರ ಪಾಟೀಲ, ರಜತ್ ಉಳ್ಳಾಗಡ್ಡಿಮಠ, ಡಾ. ಲೋಹಿತ ನಾಯ್ಕರ್, ಸ್ವಾತಿ ಮಳಗಿ, ಶಾಕೀರ ಸನದಿ, ಸದಾನಂದ ಡಂಗನವರ, ಡಾ. ಮಯೂರ ಮೋರೆ, ರಾಜಶೇಖರ ಮೆಣಸಿನಕಾಯಿ, ಡಾ. ಮಾಲಿಪಾಟೀಲ, ಮೆಹಬೂಬ ಪಾಷಾ, ಇತರರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿದರು.