ಸೊರಬ: ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಹಬ್ಬಗಳಿವೆ. ಮಕ್ಕಳಲ್ಲಿ ದೇವರನ್ನು ಕಾಣುವ ವಿಶೇಷ ಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಸಮಾಜ ಸೇವಕ ರಾಜು ಹಿರಿಯಾವಲಿ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯ ಆಶಾ ಕಿರಣ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ನೀಡಿದ ಸಂದೇಶ ಹಾಗೂ ಧರ್ಮ ಸ್ಥಾಪನೆ ಕುರಿತು ಮಾಡಿದ ಬೋಧನೆಗಳು ಮಾನವಕುಲಕ್ಕೆ ದಾರಿದೀಪವಾಗಿವೆ ಎಂದರು.
ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆದರೆ ಮಾತ್ರ ಜಯ ಸಾಧ್ಯ ಎಂಬ ತತ್ವವನ್ನು ಶ್ರೀಕೃಷ್ಣ ಸಾರಿದ್ದಾನೆ. ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸದೆ ಅವರಲ್ಲಿರುವ ಪ್ರತಿಭೆ ಗುರುತಿಸುವ ಕೆಲಸವನ್ನು ಪಾಲಕರು ಮತ್ತು ಶಿಕ್ಷಕರು ಮಾಡಬೇಕು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಇಂಜಿನಿಯರ್, ಡಾಕ್ಟರ್ ಮಾಡಿದರೆ ಸಾಲದು. ಉತ್ತಮ ವಿಚಾರವಂತರನ್ನಾಗಿ ಮಾಡುವುದು ಕೂಡ ಅಗತ್ಯ ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಯು.ಸಂಗಪ್ಪ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನಗಳ ಮೂಲಕ ಐತಿಹಾಸಿಕ ಮತ್ತು ಪೌರಣಿಕ ಘಟನೆಗಳನ್ನು ಮೆಲುಕು ಹಾಕಲು ಸಾಧ್ಯ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯಿಂದ ಕೃಷ್ಣನ ಬಗೆಗೆ ಮಕ್ಕಳಲ್ಲಿ ಆಸಕ್ತಿ ಮತ್ತು ಕುತೂಹಲ ಮೂಡುತ್ತದೆ. ಮಕ್ಕಳು ಕೃಷ್ಣನ ವೇಷದೊಂದಿಗೆ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಮೂಡುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಸ್ತು ಮತ್ತು ಸಮಯಪಾಲನೆ ಕುರಿತು ತಿಳಿಸುವುದು ಅಗತ್ಯ ಎಂದರು.
ಶ್ರೀಕೃಷ್ಣನ ವಿವಿಧ ಅವತಾರಗಳ ಕುರಿತು ಹಾಗೂ ಭಗವದ್ಗಿತೆಯ ಶ್ಲೋಕಗಳನ್ನು ಪಠಿಸುವುದು ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ಪ್ರದರ್ಶಿಸಿದರು. ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯಶಿಕ್ಷಕಿ ಶೋಭಾ ಸಂಗಪ್ಪ, ತೀರ್ಪುಗಾರರಾದ ಶಿಲ್ಪಾ, ಸುಶ್ಮಿತಾ, ಪ್ರವೀಣ್, ಸುಪ್ರಜಾ, ಸುಮಲತಾ, ಶಿಕ್ಷಕಿ ದಿವ್ಯಾ ಇತರರಿದ್ದರು.