ನವೀನ್ ಬಿಲ್ಗುಣಿ ಶಿವಮೊಗ್ಗ
ಖಾಸಗಿ ಶಾಲೆಗಳ ಪೈಪೋಟಿ ನಡುವೆ ವಿದ್ಯಾರ್ಥಿಗಳೇ ಇಲ್ಲದೇ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಯೊಂದು ಅಲ್ಲಿನ ಶಿಕ್ಷಕನ ಪ್ರಯತ್ನದಿಂದ ಇಂದು ಪಿಎಂಶ್ರೀ ಶಾಲೆಯಾಗಿ ಪರಿವರ್ತನೆ ಆಗಿದೆ. ಜತೆಗೆ ಶಾಲೆಯ ಚಿತ್ರಣವೇ ಬದಲಾಗಿದ್ದು 7 ಮಕ್ಕಳಿದ್ದ ಶಾಲೆಯಲ್ಲೀಗ 270ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಶಿವಮೊಗ್ಗದ ಕೆಆರ್‌ಪುರಂ ಬಡಾವಣೆಯ ಸರ್ಕಾರಿ ಆಂಗ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಕೆಪಿಎಸ್)ಯ ಹಿರಿಯ ಶಿಕ್ಷಕ ಬಿ.ರಾಮಾಚಾರಿ ಅವರು ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಗೆ ಮರುಜೀವ ನೀಡಿದ್ದಾರೆ. ಅದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ಥಳೀಯರು ಮತ್ತು ಶಾಲೆಯ ಸಹೋದ್ಯೋಗಿಗಳು ಸಾಥ್ ನೀಡಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದ ಕಾರಣ ಶಾಲೆಯನ್ನು ಪಕ್ಕದ ಶಾಲೆಯೊಂದಿಗೆ ವಿಲೀನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮತ್ತೊಂದೆಡೆ ಶಾಲೆಯ ಕಟ್ಟಡದ ಸ್ಥಿತಿ, ಸರ್ಕಾರಿ ಶಾಲೆಯೆಂಬ ಸ್ಥಳೀಯರ ತಿರಸ್ಕಾರದಿಂದ ಶಾಶ್ವತವಾಗಿ ಬಾಗಿಲು ಹಾಕಲು ಶಿಕ್ಷಣ ಇಲಾಖೆಯೇ ನಿರ್ಧರಿಸಿತ್ತು. ಆ ಸಮಯದಲ್ಲಿ ಶಾಲೆಗೆ ಶಿಕ್ಷಕ ರಾಮಾಚಾರಿ ಶಾಲೆಯ ಚಿತ್ರಣವನ್ನೇ ಬದಲಾಯಿಸಿದ್ದಾರೆ.
2018ರಲ್ಲಿ ಶಾಲೆಯಲ್ಲಿ 7 ವಿದ್ಯಾರ್ಥಿಗಳಿದ್ದು ದೈಹಿಕ ಶಿಕ್ಷಕ ಸೇರಿ ಮೂವರು ಶಿಕ್ಷಕರಿದ್ದರು. ಆಗ ಶಾಲೆಗೆ ಶಿಕ್ಷಕರಾಗಿ ವರ್ಗಾವಣೆಯಾಗಿ ಬಂದವರು ರಾಮಾಚಾರಿ. ಬಂದವರೇ ಇಲ್ಲಿನ ಸ್ಥಿತಿ ಕಂಡು ಶಾಲೆಯ ಸುಸ್ಥಿತಿಗೆ ತರುವ ಆಲೋಚನೆ ಮಾಡಿದ್ದರು. ಶಾಲಾ ಸುತ್ತಮುತ್ತಲಿನ ಮನೆ ಮನೆಗಳಿಗೆ ತೆರಳಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ವಿನಂತಿ ಮಾಡಿಕೊಂಡರು. ರಸ್ತೆಯಲ್ಲಿ ನಿಂತು ಜನರಿಗೆ ತಮ್ಮ ಶಾಲೆಯ ವಸ್ತುಸ್ಥಿತಿ ಕುರಿತು ಕರಪತ್ರ ಹಂಚಿದ್ದರು.
ಪಾಲಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಒತ್ತು:
ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಿದರೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಮಾತುಗಳು ಪಾಲಕರಿಂದ ಕೇಳಿಬಂದವು. ಪಾಲಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ ಅವರು ಅಂದಿನ ಡಿಡಿಪಿಐ ಆಗಿದ್ದ ಸುಮಂಗಲಾ ಅವರ ಮನವೊಲಿಸಿ ಶತಾಯಗತಾಯ ಪ್ರಯತ್ನದಿಂದ ಕೆಪಿಎಸ್ ಶಾಲೆಯನ್ನಾಗಿ ಪರಿವರ್ತನೆ ಮಾಡಿಸಿದರು. ಮೊದಲ ವರ್ಷವೇ ಎಲ್‌ಕೆಜಿ, ಯುಜಿಕೆ ಸೇರಿ 50ಕ್ಕೂ ಅಧಿಕ ಮಕ್ಕಳು ದಾಖಲಾತಿ ಆಯಿತು. ಶಿಸ್ತು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದ ಪರಿಣಾಮ ಮಕ್ಕಳ ಸಂಖ್ಯೆ ತ್ರಿಶತಕದ ಸನಿಹಕ್ಕೆ ತಲುಪಿದೆ.
ಕೇಂದ್ರದ ಪಿಎಂಶ್ರೀ ಯೋಜನೆಗೆ ಸೇರ್ಪಡೆ
ಶೈಕ್ಷಣಿಕ ಪ್ರಗತಿ ಹಾಗೂ ಅಭಿವೃದ್ಧಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಗೆ ಈ ಶಾಲೆ ಸೇರ್ಪಡೆಯಾಗಿದೆ. ಯೋಜನೆಯಡಿ ವರ್ಷಕ್ಕೆ ಎರಡು ಬಾರಿ ಸುಮಾರು 7.5 ಲಕ್ಷ ರೂ.ನಷ್ಟು ಅನುದಾನ ಬಂದಿದೆ. ಡಿಜಿಟಲ್ ಲೈಬ್ರರಿ, ಯೋಗ, ಕರಾಟೆ, ಅಸೈನ್ಮೆಂಟ್, ಪ್ರಾಜೆಕ್ಟ್ ವರ್ಕ್, ಸಾಮೂಹಿಕ ಕಲಿಕೆ, ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಕರೆಯಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು. ಸ್ಮಾರ್ಟ್‌ಕ್ಲಾಸ್, ಕಂಪ್ಯೂಟರ್ ತರಬೇತಿ, ಇ-ಲೈಬ್ರರಿ ಸೇರಿ ಅನೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಸಿ.ದಾನೇಶ್ವರಿ.
ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಹಂತಕ್ಕೆ ನಮ್ಮ ಶಾಲೆ ಬೆಳೆದಿದೆ. ನಾನು ಬಂದಾಗ ಕೇವಲ ಆರು ಮಕ್ಕಳಿದ್ದರು. ಇಂದು 276 ಮಕ್ಕಳು ಓದುತ್ತಿದ್ದಾರೆ. ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು ಮತ್ತು ಎಲ್ಲ ಸಹಶಿಕ್ಷಕರ ಸಹಕಾರದಿಂದ ಕಳೆದ ಆರು ವರ್ಷದಲ್ಲಿ ಶಾಲೆ ಚಿತ್ರಣ ಬದಲಾಗಿದೆ.- ಬಿ. ರಾಮಾಚಾರಿ, ಹಿರಿಯ ಶಿಕ್ಷಕ ಶಿಕ್ಷಕ ರಾಮಾಚಾರಿ ಅವರ ಶ್ರಮದಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆಗೆ ಜೀವಕಳೆ ಬಂದಿದೆ. ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತಹ ಶಿಕ್ಷಣ ಇಲ್ಲಿ ಮಕ್ಕಳಿಗೆ ಸಿಗುತ್ತಿದೆ. ಎಲ್‌ಕೆಜಿ, ಯುಕೆಜಿಯಿಂದ 7ನೇ ತರಗತಿವರೆಗೆ ನೂರಾರು ಮಕ್ಕಳು ಗುಣಮಟ್ಟದ ಶಿಕ್ಷಣ ಕಲಿಯುತ್ತಿದ್ದಾರೆ.- ಮಸ್ತಾನ್, ಪಾಲಕ