100% Tariffs | ಟ್ರಂಪ್ ಕೈಗೆ ಸಿಕ್ಕಿತು ಸುಂಕಾಸ್ತ್ರ
ಭಾರತಕ್ಕೆ ಅಮೆರಿಕದಿಂದ ಮತ್ತೊಮ್ಮೆ ದೊಡ್ಡ ಮಟ್ಟದ ಆತಂಕ ಎದುರಾಗಿದೆ. "ಲಿಂಡ್ಸೆ ಒ. ಗ್ರಹಾಂ ಸ್ಯಾಂನಿಂಗ್ ರಷ್ಯಾ ಆ್ಯಂಡ್ ಇರಾನ್ ಆ್ಯಕ್ಟ್ 2026' ಮಸೂದೆಯನ್ನು ಅಮೆರಿಕದ ಹೌಸ್ ಆಫ್ ರಿಪ್ರೆಸೆಂಟೇಟಿವ್ಸ್ ಬುಧವಾರ ಅಂಗೀಕರಿಸಿದೆ. ಇದಕ್ಕೂ ಮುನ್ನ ಸೆನೆಟ್ ಆಗಸ್ಟ್ನಲ್ಲೆ ಮಸೂದೆಗೆ ಅನುಮೋದನೆ ನೀಡಿತ್ತು. ಇದೀಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದರೆ ಅದು ಕಾನೂನಾಗಲಿದೆ. ರಷ್ಯಾದಿಂದ ಕಚ್ಚಾ ತೈಲ ಅಥವಾ ನೈಸರ್ಗಿಕ ಅನಿಲ ಖರೀದಿಸುವ ಕೆಲವು ದೇಶಗಳ ಮೇಲೆ ಶೇ. 100ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಅಧಿಕಾರವನ್ನು ಅಧ್ಯರಿಗೆ ನೀಡುವುದು ಮಸೂದೆಯ ಪ್ರಮುಖ ಅಂಶ. ಇದರಿಂದ ಯಾವ್ಯಾವ ದೇಶಗಳ ಮೇಲೆ ಪರಿಣಾಮ ಆಗುತ್ತದೆ? ಭಾರತದ ಮೇಲೆ ತಕ್ಷಣವೇ ಶೇ.100ರಷ್ಟು ಸುಂಕ ಬೀಳಲಿದೆಯೇ? ಬಿದ್ದರೆ ಭಾರತದ ಮೇಲಾಗುವ ಪರಿಣಾಮಗಳೇನು? ಭಾರತ ಮತ್ತು ರಷ್ಯಾದ ತೈಲ ರಾಜತಾಂತ್ರಿಕತೆಯ ಬಗ್ಗೆ ಟ್ರಂಪ್ ಹೇಳುವುದೇನು? ಇದಕ್ಕೆ ಕೇಂದ್ರ ಸರ್ಕಾರ ನೀಡಿರುವ ಪ್ರತಿಕ್ರಿಯೆಯೇನು? ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಮೆರಿಕದ ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾದೊಡನೆಯೇ ಶೇ. 100ರಷ್ಟು ಸುಂಕ ಭಾರತದ ಮೇಲೆ ಹೇರಿಕೆಯಾಗಿಬಿಡುತ್ತದೆ ಎಂದರ್ಥವಲ್ಲ. ಮೊದಲು ಆ ಮಸೂದೆಗೆ ಟ್ರಂಪ್ ಸಹಿ ಹಾಕಬೇಕು. ಬಳಿಕ ಅದರಲ್ಲಿರುವ ನಿಯಮಗಳಡಿ ಯಾವ ದೇಶಗಳ ಮೇಲೆ ಎಷ್ಟು ಪ್ರಮಾಣದ ಸುಂಕ ವಿಧಿಸಬೇಕು ಎಂಬುದು ನಿರ್ಧಾರವಾಗಬೇಕು. ಮಸೂದೆಯಲ್ಲಿ ಗರಿಷ್ಠ ಪ್ರಮಾಣವನ್ನು ಶೇ. 100 ಎಂದು ನಿಗದಿಪಡಿಸಲಾಗಿದೆ. ಅಂದರೆ ಅಷ್ಟು ದೊಡ್ಡ ಪ್ರಮಾಣದ ಸುಂಕ ಕಡ್ಡಾಯವಲ್ಲ; ಸೊನ್ನೆಯಿಂದ ಶೇ. 100ರವರೆಗೆ ಎಷ್ಟು ಬೇಕಾದರೂ ದರ ನಿಗದಿಪಡಿಸಲು ಅವಕಾಶವಿದೆ. ರಷ್ಯಾದಿಂದ ತೈಲ ಅಥವಾ ಅನಿಲ ಖರೀದಿಸುವ ದೇಶದಿಂದ ಅಮೆರಿಕಕ್ಕೆ ಬರುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ದ್ವೀತಿಯ ಸ್ತರದ ವ್ಯವಸ್ಥೆ ಇದು. ಹೀಗಾಗಿ ಅಮೆರಿಕಕ್ಕೆ ಭಾರತೀಯ ಉತ್ಪನ್ನಗಳನ್ನು ರಫ್ತು ಮಾಡುವ ಕಂಪನಿಗಳ ಮೇಲೆ ಇದರಿಂದ ನೇರ ಪರಿಣಾಮವಾಗುತ್ತದೆ.
ಐದು ದೇಶಗಳ ಮೇಲೆ ಕಣ್ಣು
ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ನಂತರದ 12 ತಿಂಗಳಲ್ಲಿ ರಷ್ಯಾದ ಕಚ್ಚಾ ತೈಲ ಅಥವಾ ನೈಸರ್ಗಿಕ ಅನಿಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ಐದು ದೇಶಗಳ ಮೇಲೆ ಶೇ. 100ರವರೆಗೆ ದ್ವೀತಿಯ ಸುಂಕ ವಿಧಿಸಲು ಅಮೆರಿಕ ಅಧ್ಯರಿಗೆ ಅಧಿಕಾರ ಸಿಗಲಿದೆ. ಸದ್ಯ ಭಾರತ, ಚೀನಾ, ಟರ್ಕಿ, ಹಂಗೇರಿ ಮತ್ತು ಸ್ಲೊವಾಕಿಯಾ ಈ ವಿಷಯದಲ್ಲಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿವೆ. ಆದರೆ ಈ ಐದು ದೇಶಗಳ ಮೇಲೂ ಸುಂಕ ಸ್ವಯಂಚಾಲಿತವಾಗಿ ಜಾರಿಯಾಗುವುದಿಲ್ಲ. ಮಸೂದೆಗೆ ಟ್ರಂಪ್ ಸಹಿ ಮಾಡಿದ ಬಳಿಕ, ಯಾವ ದೇಶದ ಮೇಲೆ ಎಷ್ಟು ದರ ವಿಧಿಸಬೇಕು ಎಂಬುದನ್ನು ಅವರ ಆಡಳಿತ ನಿರ್ಧರಿಸಲಿದೆ. ಅಲ್ಲದೆ, ರಷ್ಯಾದ ತೈಲ ಖರೀದಿಯ ಪ್ರಮಾಣ ಬದಲಾದರೆ ಐದು ದೊಡ್ಡ ಖರೀದಿದಾರರ ಪಟ್ಟಿಯೂ ಪರಿಷ್ಕರಣೆಯಾಗುತ್ತದೆ.
ಜುಲೈನಲ್ಲಿ ದಾಖಲೆ, ಆಗಷ್ಟನಲ್ಲಿ ಇಳಿಕೆ
ಆಸಕ್ತಿದಾಯಕ ಸಂಗತಿಯೆಂದರೆ ಅಮೆರಿಕದ ಸುಂಕದ ಬೆದರಿಕೆ ನಡುವೆಯೂ ಜುಲೈನಲ್ಲಿ ಭಾರತವು ರಷ್ಯಾದಿಂದ ದಾಖಲೆ ಪ್ರಮಾಣದ ಕಚ್ಚಾ ತೈಲ ಖರೀದಿಸಿತ್ತು. ದಿನಕ್ಕೆ 25-28 ಲ ಬ್ಯಾರೆಲ್ಗಳಷ್ಟು ರಷ್ಯಾ ತೈಲ ಭಾರತಕ್ಕೆ ಬಂದಿತ್ತು. ಒಟ್ಟು ಆಮದುಗಳಲ್ಲಿ ರಷ್ಯಾದ ಪಾಲು ಅರ್ಧಕ್ಕಿಂತಲೂ ಹೆಚ್ಚಾಗಿತ್ತು. ಆದರೆ ಆಗಸ್ಟ್ನಲ್ಲಿ ಚಿತ್ರ ಬದಲಾಯಿತು. ರಷ್ಯಾದ ಪಾಲು ಜುಲೈನ ಶೇ. 55.9ರಿಂದ ಸುಮಾರು ಶೇ. 45ಕ್ಕೆ ಇಳಿಯಿತು. ರಷ್ಯಾದ ಪೂರೈಕೆಯ ಲಭ್ಯತೆ, ಚೀನಾದ ಸಂಸ್ಕರಣಾಗಾರಗಳಿಂದ ಹೆಚ್ಚಿದ ಸ್ಪರ್ಧೆ ಮತ್ತು ಕೆಲವು ಭಾರತೀಯ ಸಂಸ್ಕರಣಾಗಾರಗಳು ನಿರ್ವಹಣೆಗಾಗಿ ಸ್ಥಗಿತಗೊಂಡಿದ್ದು ಇದಕ್ಕೆ ಕಾರಣ.
ರಷ್ಯಾ ತೈಲವೇ ಭಾರತದ ಬಲ
ರಷ್ಯಾದ ಕಚ್ಚಾ ತೈಲ ಭಾರತಕ್ಕೆ ಪ್ರಮುಖವಾಗಿರುವುದಕ್ಕೆ ಮುಖ್ಯ ಕಾರಣ ಬೆಲೆ ಮಾತ್ರವಲ್ಲ; ಲಭ್ಯತೆ, ಸಾಗಣೆ ವ್ಯವಸ್ಥೆ ಮತ್ತು ಭಾರತೀಯ ಸಂಸ್ಕರಣಾಗಾರಗಳ ಹೊಂದಾಣಿಕೆಯೂ ಕಾರಣ. ಯೂಕ್ರೇನ್ ಯುದ್ಧ ಆರಂಭವಾದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ತೈಲದ ಮೇಲೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ರಷ್ಯಾ ಪ್ರಮುಖವಾಗಿ ಏಷ್ಯಾದ ಮಾರುಕಟ್ಟೆಗಳತ್ತ ತಿರುಗಿತು. ಭಾರತವೂ ಕಡಿಮೆ ಬೆಲೆಯ ರಷ್ಯಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಆರಂಭಿಸಿತು. ಯುದ್ಧಕ್ಕೂ ಮೊದಲು ಭಾರತದ ಒಟ್ಟು ಕಚ್ಚಾ ತೈಲ ಆಮದುಗಳಲ್ಲಿ ರಷ್ಯಾದ ಪಾಲು ತುಂಬ ಕಡಿಮೆ ಇತ್ತು. ನಂತರ ಅದು ವೇಗವಾಗಿ ಏರಿತು. 2026ರ ಏಪ್ರಿಲ್-ಜುಲೈ ಅವಧಿಯಲ್ಲಿ ರಷ್ಯಾ ಭಾರತದ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿದ್ದು, ಸರಾಸರಿ ಪಾಲು ಶೇ. 43.25ರಷ್ಟಿತ್ತು. ಜುಲೈನಲ್ಲಿ ಅದು ಶೇ. 51ಕ್ಕೆ ಏರಿತ್ತು. ಅಮೆರಿಕದ ಹೊಸ ಸುಂಕದ ಬೆದರಿಕೆ ಗಂಭೀರವಾಗಲು ಇದೇ ಮುಖ್ಯ ಕಾರಣ.
ಕರಗಿದ ರಷ್ಯಾ ರಿಯಾಯಿತಿ
ರಷ್ಯಾದಿಂದ ಭಾರತ ತೈಲ ಖರೀದಿಸಲು ಪ್ರಮುಖ ಕಾರಣವೇ ಕಡಿಮೆ ಬೆಲೆ. ಭಾರತಕ್ಕೆ ಸಾಕಷ್ಟು ಹಣ ಉಳಿತಾಯವಾಗುತ್ತಿತ್ತು. ಉದಾಹರಣೆಗೆ, ಜುಲೈ ಆರಂಭದಲ್ಲಿ ರಷ್ಯಾದ ಒಂದು ಬ್ಯಾರೆಲ್ ತೈಲದ ಬೆಲೆ ಜಾಗತಿಕ ಮಾರುಕಟ್ಟೆಯ ಬೆಲೆಗಿಂತ 10 ಡಾಲರ್ನಷ್ಟು ಕಡಿಮೆ ಇತ್ತು. ಆದರೆ ಜುಲೈ ಅಂತ್ಯದ ವೇಳೆಗೆ ಈ ಬೆಲೆ ವ್ಯತ್ಯಾಸ 1-2 ಡಾಲರ್ಗೆ ಇಳಿಯಿತು. ಸೆಪ್ಟೆಂಬರ್ ವೇಳೆಗೆ ಪರಿಸ್ಥಿತಿ ಮತ್ತಷ್ಟು ಬದಲಾಯಿತು. ಭಾರತದ ಪಶ್ಚಿಮ ಕರಾವಳಿಗೆ ಬರುವ ರಷ್ಯಾ ತೈಲ ಕೆಲವು ಸಂದರ್ಭಗಳಲ್ಲಿ ಜಾಗತಿಕ ಮಾರುಕಟ್ಟೆಯ ತೈಲಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗಿತ್ತು. ಹೀಗಾಗಿ, ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸಿ ಭಾರತ ಪಡೆಯುತ್ತಿದ್ದ ದೊಡ್ಡ ಲಾಭ ಈಗ ಗಣನೀಯವಾಗಿ ಕಡಿಮೆಯಾಗಿದೆ.
ಅಮೆರಿಕಕ್ಕೆ ಏಕೆ ಸಿಟ್ಟು?
ತೈಲ ಮಾರಾಟದಿಂದ ಬರುತ್ತಿರುವ ಆದಾಯವನ್ನು ರಷ್ಯಾ ಆಡಳಿತವು ಯೂಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಸುತ್ತಿದೆ ಎಂಬುದು ಅಮೆರಿಕದ ನಿಲುವು. ರಷ್ಯಾದಿಂದ ತೈಲ ಖರೀದಿಸುವ ದೊಡ್ಡ ದೇಶಗಳ ಮೇಲೆ ಒತ್ತಡ ಹೇರಿದರೆ ಮಾಸ್ಕೋ ಮೇಲಿನ ಒತ್ತಡ ಹೆಚ್ಚಾಗುತ್ತದೆ ಎಂಬುದು ಅಮೆರಿಕದ ಲೆಕ್ಕಾಚಾರ. ರಷ್ಯಾದ ಬದಲು ಬೇರೆ ದೇಶಗಳಿಂದ ತೈಲ ಖರೀದಿಸುವಂತೆ ಅಮೆರಿಕದ ಕೆಲವು ಸಂಸದರು ಭಾರತ ಮತ್ತು ಚೀನಾ ಮೇಲೆ ಈ ಹಿಂದೆ ಬಹಿರಂಗವಾಗಿಯೇ ಒತ್ತಡ ಹಾಕಿದ್ದಾರೆ.
ಭಾರತದ ಮೇಲೆ ಪರಿಣಾಮವೇನು...?
ಅಮೆರಿಕ ಶೇ. 100ರಷ್ಟು ಸುಂಕ ವಿಧಿಸಿದರೆ ಅದರ ಮೊದಲ ಹೊಡೆತ ಭಾರತೀಯ ರಫ್ತುದಾರರ ಮೇಲೆ ಬೀಳಲಿದೆ. ಅಮೆರಿಕಕ್ಕೆ ರಫ್ತು ಮಾಡುವ ಜವಳಿ, ಉಡುಪು, ಎಂಜಿನಿಯರಿಂಗ್ ಉತ್ಪನ್ನಗಳು, ರಾಸಾಯನಿಕಗಳು, ಔಷಧಗಳ ಬೆಲೆ ಹೆಚ್ಚಾಗುತ್ತದೆ. ಭಾರತ-ಅಮೆರಿಕ ವ್ಯಾಪಾರ ಮಾತುಕತೆಯ ಮೇಲೂ ಇದರಿಂದ ಪರಿಣಾಮವಾಗಬಹುದು. ರಷ್ಯಾದಿಂದ ಖರೀದಿಯನ್ನು ಭಾರತ ಕಡಿಮೆ ಮಾಡಿದರೆ ಮಧ್ಯಪ್ರಾಚ್ಯ, ಅಮೆರಿಕ, ಲ್ಯಾಟಿನ್ ಅಮೆರಿಕ, ಆಫ್ರಿಕಾ ಮುಂತಾದೆಡೆಯಿಂದ ಖರೀದಿಸಬೇಕಾಗುತ್ತದೆ. ರಷ್ಯಾ ನೀಡುತ್ತಿದ್ದ ದರದಲ್ಲಿಯೇ ಅವರೂ ನೀಡುತ್ತಾರೆ ಎಂಬ ಖಾತ್ರಿ ಇಲ್ಲ. ಹಾಗಾಗಿ ಭಾರತದ ತೈಲ ಆಮದು ಬಿಲ್ ಹೆಚ್ಚಾಗುತ್ತದೆ. ಸಂಸ್ಕರಣಾ ಗಾರಗಳ ಲಾಭ ಕುಸಿಯುತ್ತದೆ. ಹಣದುಬ್ಬರವೂ ಜಾಸ್ತಿಯಾಗುತ್ತದೆ.
ಪೆಟ್ರೋಲ್-ಡೀಸೆಲ್ ಬೆಲೆ ಏರುತ್ತಾ?
ಅಮೆರಿಕ ಶೇ.100ರಷ್ಟು ಸುಂಕ ವಿಧಿಸಿದ ತಕ್ಷಣ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರುತ್ತದೆ ಎಂದು ಹೇಳಲಾಗುವುದಿಲ್ಲ. ಅಮೆರಿಕಕ್ಕೆ ರಫ್ತು ಮಾಡುವ ಭಾರತೀಯ ಸರಕುಗಳ ಮೇಲೆ ಇದರ ಪರಿಣಾಮ ಉಂಟಾಗುತ್ತದೆ. ಜಾಗತಿಕ ಕಚ್ಚಾ ತೈಲ ಬೆಲೆ, ರೂಪಾಯಿ-ಡಾಲರ್ ವಿನಿಮಯ ದರ, ಸರ್ಕಾರದ ತೆರಿಗೆ, ತೈಲ ಕಂಪನಿಗಳ ಬೆಲೆ ನೀತಿ-ಇವೆಲ್ಲವೂ ಅಂತಿಮವಾಗಿ ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಿರ್ಧರಿಸುತ್ತವೆ. ಹೀಗಾಗಿ ಅಮೆರಿಕ ಸುಂಕ ಹೆಚ್ಚಾದ ಕೂಡಲೇ ಪೆಟ್ರೋಲ್ ಬೆಲೆ ಏರಿಕೆ ಆಗುತ್ತದೆ ಎಂದೇನಿಲ್ಲ. ಆದರೆ ರಷ್ಯಾ ತೈಲದ ಲಭ್ಯತೆ ಕುಸಿದರೆ ಮತ್ತು ಬೆಲೆಯ ಮೇಲೆ ದೊಡ್ಡ ಹೊಡೆತ ಬಿದ್ದರೆ ಇಂಧನ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದ ನಿಲುವೇನು?
"ಈ ಬೆಳವಣಿಗೆಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ಹೇಳಿದ್ದಾರೆ. "140 ಕೋಟಿ ಭಾರತೀಯರ ಇಂಧನ ಭದ್ರತೆಯೇ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆ. ಹೀಗಾಗಿ ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ದೇಶಗಳಿಂದ ತೈಲ ಖರೀದಿಸುವ ನೀತಿ ಮುಂದುವರಿಯಲಿದೆ. ಅಮೆರಿಕದ ಅಧಿಕಾರಿಗಳೊಂದಿಗೆ ಕಳೆದ ಕೆಲವು ತಿಂಗಳ ಹಿಂದೆಯೇ ಈ ಕುರಿತು ಮಾತುಕತೆ ನಡೆಸಲಾಗಿದೆ. ಭಾರತದ ವ್ಯಾಪಾರ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಿದೆ' ಎಂದು ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.
ಮುಂದೇನು..?
ಯಾವ ದೇಶಗಳ ಮೇಲೆ ಎಷ್ಟು ತೆರಿಗೆ ವಿಧಿಸಬೇಕು, ಯಾವಾಗ ಕಡಿಮೆ ಮಾಡಬೇಕು ಎಂಬುದಕ್ಕೆ ಮಸೂದೆಯಲ್ಲಿ ಹಲವು ನಿಯಮಗಳಿವೆ. ರಾಷ್ಟ್ರದ ಹಿತಾಸಕ್ತಿಯನ್ನು ಗಮನಿಸಿ ಸುಂಕ ಮನ್ನಾ ಮಾಡುವ ಅಧಿಕಾರವನ್ನೂ ಟ್ರಂಪ್ಗೆ ನೀಡಲಾಗಿದೆ. ಸುಂಕ ಎದುರಿಸಲಿರುವ ಟಾಪ್ ಐದು ದೇಶಗಳ ಪಟ್ಟಿಯೂ ಶಾಶ್ವತವಲ್ಲ. ಪ್ರತಿ 180 ದಿನಗಳಿಗೊಮ್ಮೆ ರಷ್ಯಾದ ತೈಲ ಮತ್ತು ಅನಿಲದ ಅತಿ ದೊಡ್ಡ ಆಮದುದಾರರು ಯಾರು ಎಂಬುದನ್ನು ಗುರುತಿಸುವ ವ್ಯವಸ್ಥೆ ಇದೆ. ಹೀಗಾಗಿ ಭಾರತ ತನ್ನ ರಷ್ಯಾ ತೈಲ ಆಮದನ್ನು ಕಡಿಮೆ ಮಾಡಿದರೆ ಅಮೆರಿಕದ ಟಾರ್ಗೆಟ್ನಿಂದ ಹೊರಬರುವ ಸಾಧ್ಯತೆ ಇದೆ.
ಭಾರತದ ಮುಂದಿವೆ 3 ದಾರಿ
ಸದ್ಯ ಭಾರತದ ಮುಂದೆ 3 ದಾರಿಗಳಿವೆ- ಅಮೆರಿಕದೊಂದಿಗೆ ಮಾತುಕತೆ ನಡೆಸಿ ಸುಂಕ ವಿನಾಯಿತಿ ಅಥವಾ ಕಡಿಮೆ ಮಾಡಿಸುವುದು, ರಷ್ಯಾದ ತೈಲ ಖರೀದಿಯ ಪ್ರಮಾಣವನ್ನು ಪರಿಸ್ಥಿತಿಗೆ ಅನುಗುಣವಾಗಿ ಬದಲಿಸುವುದು ಮತ್ತು ಪರ್ಯಾಯ ದೇಶಗಳಿಂದ ತೈಲ ಪೂರೈಕೆಯನ್ನು ಹೆಚ್ಚಿಸುವುದು. ಈ ಉಪಾಯಗಳೇ ಮುಂದಿನ ದಿನಗಳಲ್ಲಿ ಭಾರತದ ಇಂಧನ ಭದ್ರತೆ ಮತ್ತು ರಫ್ತನ್ನು ರಕ್ಷಿಸಲಿವೆ ಎನ್ನುವುದು ತಜ್ಞರ ಅಭಿಮತ.