ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳ ಗಲ್ಲುಶಿಕ್ಷೆಯನ್ನು ತಡೆಹಿಡಿದ ಪಟಿಯಾಲಾ ಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.
ನಿನ್ನೆ ತೀರ್ಪು ನೀಡಿದ್ದ ಹೈಕೋರ್ಟ್ ಕೇಂದ್ರದ ಅರ್ಜಿಯನ್ನು ವಜಾಗೊಳಿಸಿತ್ತು. ನಾಲ್ವರು ಅಪರಾಧಿಗಳನ್ನು ಒಟ್ಟಿಗೇ ಗಲ್ಲಿಗೇರಿಸಬೇಕು. ಹಾಗೇ ಅಪರಾಧಿಗಳು ಇನ್ನೊಂದು ವಾರಗಳಲ್ಲಿ ತಮ್ಮ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿಕೊಳ್ಳಬೇಕು ಎಂದು ಆದೇಶ ನೀಡಿತ್ತು.
ಈಗ ಹೈಕೋರ್ಟ್ ಅರ್ಜಿ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಅಪರಾಧಿಗಳನ್ನು ಗಲ್ಲಿಗೇರಿಸಲು ಬ್ಲ್ಯಾಕ್ ವಾರಂಟ್ ಜಾರಿ ಮಾಡಬೇಕು ಎಂದು ಒತ್ತಾಯಿಸಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಎನ್.ವಿ.ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣಾ ಮುರಾರಿ ಅವರನ್ನೊಳಗೊಂಡ ಪೀಠಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರದ ಅರ್ಜಿಯನ್ನು ನಾಳೆ (ಫೆಬರವರಿ 7) ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.(ಏಜೆನ್ಸೀಸ್)