ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಅವರ ನೇಮಕವನ್ನು ಪ್ರಶ್ನಿಸಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇದೇ ಜುಲೈ 11 ರಂದು ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ರಜೆ ಪೀಠದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆಕೆ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠ ಜುಲೈ 11ಕ್ಕೆ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಈಗಾಗಲೇ ಬಾಕಿ ಇರುವ ಅರ್ಜಿಗಳೊಂದಿಗೆ ಹೊಸ ಅರ್ಜಿ ವಿಚಾರಣೆಯನ್ನೂ ನಡೆಸಬೇಕೆಂದು ಹಿರಿಯ ವಕೀಲ ದೇವದತ್ ಕಾಮಪತ್ ಶಿವಸೇನೆಯ ನಾಯಕ ಸುಭಾಷ್ ದೇಸಾಯಿ ಅವರ ಪರ ಹಾಜರಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಇದರ ಜತೆಗೆ ಜೂನ್ 30 ರಂದು ಶಿಂಧೆ ಬಣಕ್ಕೆ ಬಿಜೆಪಿ ಸರ್ಕಾರ ರಚಿಸಲು ಆಹ್ವಾನಿಸಿದ ರಾಜ್ಯಪಾಲರ ನಿರ್ಧಾರವನ್ನು ಕೋರ್ಟ್ನಲ್ಲಿ ಪ್ರಶ್ನಿಸಿದ್ದು, ಹೊಸ ಸ್ಪೀಕರ್ ಆಯ್ಕೆ ಸೇರಿದಂತೆ ಜುಲೈ 3 ಮತ್ತು 4 ರಂದು ನಡೆದ ವಿಧಾನಸಭಾ ಪ್ರಕ್ರಿಯೆಗಳನ್ನು ಸಹ ಠಾಕ್ರೆ ಬಣ ಪ್ರಶ್ನಿಸಿದೆ. (ಏಜೆನ್ಸೀಸ್)