ನ್ಯೂಸ್

ನ್ಯಾ. ನಾಗರತ್ನ ಭಿನ್ನ ತೀರ್ಪು; ನೋಟ್​ಬ್ಯಾನ್ ಅಧಿಕಾರ ಆರ್​ಬಿಐಗಿದೆ ಕೇಂದ್ರಕ್ಕಿಲ್ಲ ಎಂದು ಉಲ್ಲೇಖ

ನವದೆಹಲಿ: ನೋಟು ನಿಷೇಧ ಕುರಿತು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಪೀಠದಲ್ಲಿದ್ದ ಕಿರಿಯ ನ್ಯಾಯಮೂರ್ತಿಯಾಗಿದ್ದ ಬಿ.ವಿ. ನಾಗರತ್ನ ಭಿನ್ನ ತೀರ್ಪು ಬರೆದಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮ ಸರಿಯಾದುದಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೋಟ್ ಬ್ಯಾನ್ ಕ್ರಮ ಆರ್​ಬಿಐನ ಸ್ವತಂತ್ರ ಚಿಂತನೆಯಿಂದ ಹೊರಬಿದ್ದದ್ದಲ್ಲ. ಸಂಪೂರ್ಣ ಪ್ರಕ್ರಿಯೆ ಕೇವಲ 24 ಗಂಟೆಯೊಳಗೆ ನಡೆದು ಹೋಗಿತ್ತು. ನನ್ನ ದೃಷ್ಟಿಯಲ್ಲಿ, ಕೇಂದ್ರದ ಅಧಿಕಾರ ಅಗಾಧವಾಗಿರುವುದ ರಿಂದ ಕೇವಲ ಅಧಿಸೂಚನೆ ಹೊರಡಿಸುವ ಬದಲು, ಪೂರ್ಣ ಶಾಸನದ ಮೂಲಕ ಅದನ್ನು ಅನುಷ್ಠಾನಗೊಳಿಸಬೇಕಿತ್ತು. ದೇಶದ ಜನಪ್ರತಿನಿಧಿಗಳನ್ನು ಒಳಗೊಂಡಿರುವ ಸಂಸತ್ತಿನಲ್ಲಿ ಈ ಬಗ್ಗೆ ರ್ಚಚಿಸಿ, ನಂತರ ಅನುಮೋದನೆ ಪಡೆದುಕೊಳ್ಳಬೇಕಿತ್ತು. ಆದರೆ, ಆ ಪ್ರಕ್ರಿಯೆ ಇಲ್ಲಿ ನಡೆಯದ ಕಾರಣ ನೋಟುಗಳ ಅಮಾನ್ಯೀಕರಣವು ಕಾನೂನುಬಾಹಿರ ಎಂದು ತೀರ್ಪು ಬರೆದಿದ್ದಾರೆ. ನೋಟ್​ಬ್ಯಾನ್ ಕ್ರಮ ಆರ್​ಬಿಐ ವ್ಯಾಪ್ತಿಯಲ್ಲಿ ಬರುತ್ತದೆಯೇ ವಿನಃ ಕೇಂದ್ರ ಸರ್ಕಾರ ನಿಷೇಧ ಹೇರಲು ಸಾಧ್ಯವಿಲ್ಲ ಎಂದಿದ್ದಾರೆ.

ನೋಟು ಅಮಾನ್ಯೀಕರಣದಂತಹ ನಿರ್ಣಾಯಕ ವಿಷಯ ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿಯ ಸುಮಾರು 86 ಪ್ರತಿಶತದ ಮೇಲೆ ಪ್ರಭಾವ ಬೀರುವುದರಿಂದ ಉದ್ದೇಶಿತ ಕ್ರಮದ ಬಗ್ಗೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ಆಗಬೇಕಿತ್ತು. ಈ ಕ್ರಮವು ಕಪ್ಪುಹಣದ ನಿಯಂತ್ರಣ, ರಾಷ್ಟ್ರದ ಆರ್ಥಿಕತೆಗೆ ಮಾರಕವಾಗಿರುವ ಭಯೋತ್ಪಾದಕ ನಿಧಿ, ಮಾದಕವಸ್ತು ಕಳ್ಳಸಾಗಣೆ, ಹವಾಲಾ ವಹಿವಾಟು ಸೇರಿ ಹಣಕಾಸು ಅವ್ಯವಹಾರಗಳನ್ನು ನಿಷ್ಕ್ರಿಯಗೊಳಿಸುವ ಉದ್ದೇಶ ಹೊಂದಿದ್ದದ್ದು ನಿಜ. ಆದರೆ, ಕಾನೂನಿನ ಸಂಬಂಧಿತ ನಿಬಂಧನೆಗಳನ್ನು ನೋಡಿದಾಗ ಈ ಕ್ರಮ ಕಾನೂನುಬಾಹಿರವೆಂದು ಹೇಳಬೇಕಾಗುತ್ತದೆ. ಹಾಗಂತ ನೋಟು ಬ್ಯಾನ್ ಕ್ರಮದ ಹಿಂದಿನ ಉದ್ದೇಶವೂ ಕಾನೂನು ಬಾಹಿರ ಎನ್ನುವುದು ತೀರ್ಪಿನ ತಾತ್ಪರ್ಯವಲ್ಲ ಎಂದು ವಿವರಿಸಿದ್ದಾರೆ. 1946 ಮತ್ತು 1978 ರಲ್ಲಿ ನೋಟು ಅಮಾನ್ಯೀಕರಣ ಮಾಡಿದ್ದಾಗ ಅದನ್ನು ಕ್ರಮವಾಗಿ ಸುಗ್ರೀವಾಜ್ಞೆ ಮತ್ತು ಕಾನೂನಿನ ಮೂಲಕ ಜಾರಿ ಮಾಡಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ, ಕೇಂದ್ರ ಸರ್ಕಾರವು ಕೇವಲ ಆರ್​ಬಿಐ ಕಾಯಿದೆಯ ಸೆಕ್ಷನ್ 26(2)ರ ಅಡಿಯಲ್ಲಿ ಬ್ಯಾಂಕ್​ನ ಕೇಂದ್ರ ಮಂಡಳಿ ಮಾಡಿದ ಶಿಫಾರಸಿನ ಮೇರೆಗೆ ನೋಟುಗಳನ್ನು ಅಮಾನ್ಯ ಗೊಳಿಸಿರಲಿಲ್ಲ. ಅದೊಂದು ಶಾಸನಬದ್ಧ ನಿರ್ಣಯವಾಗಿತ್ತು ಎಂದು ಹೇಳಿದ್ದಾರೆ.

ನಗದು ಪ್ರಸರಣ ಶೇ. 83

2016ರ ನವೆಂಬರ್​ನಲ್ಲಿ ಅಧಿಕ ಮುಖಬೆಲೆಯ ನೋಟು ಅಮಾನ್ಯೀಕರಣಗೊಂಡ ನಂತರವೂ ಜನರ ಕೈಯಲ್ಲಿರುವ ಹಣದ ಪ್ರಮಾಣ ಶೇ. 83 ಇದೆ. ನೋಟು ಅಮಾನ್ಯೀಕರಣಕ್ಕೆ ನಾಲ್ಕು ದಿನ ಮೊದಲು ಅಂದರೆ 2016ರ ನ. 4ರಂದು 17.74 ಲಕ್ಷ ಕೋಟಿ ರೂ. ನಗದು ಜನರಲ್ಲಿತ್ತು. ಅಧಿಕ ಮುಖಬೆಲೆಯ ನೋಟು ರದ್ದತಿಯಾದ ನಂತರ (2017ರ ಜ. 6) 9 ಲಕ್ಷ ಕೋಟಿ ರೂ. ಕಡಿಮೆ ಆಯಿತು. ಅದೇ ವರ್ಷ ಮಾರ್ಚ್​ನಲ್ಲಿ 13.10 ಲಕ್ಷ ಕೋಟಿ ರೂ.ಗೆ ಚೇತರಿಕೆ ಕಂಡಿತು. 2018ರ ಮಾರ್ಚ್ ಹೊತ್ತಿಗೆ ಇದು 18.03 ಲಕ್ಷ ಕೋಟಿ ರೂ.ಗೆ ವೃದ್ಧಿಸಿತು. 2019ರ ಮಾರ್ಚ್​ನಲ್ಲಿ 21.10 ಲಕ್ಷ ಕೋಟಿ ರೂ., 2020ರಲ್ಲಿ 24.20 ಲಕ್ಷ ಕೋಟಿ ರೂ., 2021ರಲ್ಲಿ 28.26 ಲಕ್ಷ ಕೋಟಿ ರೂ. ಮತ್ತು 2022ರಲ್ಲಿ 31.05 ಲಕ್ಷ ರೂ.ಗೆ ಹೆಚ್ಚಳಗೊಂಡಿತು. ಕಳೆದ ಡಿಸೆಂಬರ್ 23ಕ್ಕೆ 32.42 ಲಕ್ಷ ಕೋಟಿ ರೂ. ನಗದು ಜನರ ಕೈಯಲ್ಲಿದೆ. 2016ರ ನ.4 ಮತ್ತು 2022ರ ಡಿ.23ರ ನಡುವೆ ಇರುವ ಕೈಯಲ್ಲಿರುವ ನಗದು ಪ್ರಮಾಣ ಶೇ. 83ರಷ್ಟು ವೃದ್ಧಿ ಎಂದು ಆರ್​ಬಿಐ ಮಾಹಿತಿ ನೀಡಿದೆ. ಡಿಜಿಟಲ್ ಮೂಲಕ ನಗದು ವರ್ಗಾವಣೆ ಪ್ರಮಾಣ ಶೇ. 88 ಇದೆ.

ಸುಪ್ರೀಂ ವಿಚಾರಣೆಗೆ ವಿರೋಧ

2016ರ ಕ್ರಮವನ್ನು ಪರಿಶೀಲಿಸುವ ಸುಪ್ರೀಂಕೋರ್ಟ್​ನ ಪ್ರಯತ್ನ ವಿರೋಧಿಸಿದ ಕೇಂದ್ರ ಸರ್ಕಾರ, ಗಡಿಯಾರವನ್ನು ಹಿಂದಕ್ಕೆ ಹಾಕುವುದರಿಂದ ಯಾವುದೇ ಸ್ಪಷ್ಟ ಪರಿಹಾರ ಸಿಗದು. ನೋಟ್ ಬ್ಯಾನ್ ವಿಷಯವನ್ನು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ನೋಟ್ ಬ್ಯಾನ್​ನಿಂದ ತಾತ್ಕಾಲಿಕ ಸಂಕಷ್ಟ ಎದುರಾಗಿತ್ತು ಎಂದು ಒಪ್ಪಿಕೊಂಡಿದ್ದ ಆರ್​ಬಿಐ, ಇವೆಲ್ಲವೂ ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿವೆ. ಉದ್ಭವಿಸಿದ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವಿಧಾನಗಳನ್ನೂ ನಾವು ಮುಂದಿಟ್ಟಿದ್ದೆವು ಎಂದು ಹೇಳಿತ್ತು. ನೋಟು ಅಮಾನ್ಯೀಕರಣ ತೀರ್ಮಾನ ಎಲ್ಲಾ ಒಳಗೊಂಡಿದೆ. ಕಾಳಧನ, ಭಯೋತ್ಪಾದನೆಗೆ ಹಣಕಾಸು ಹಾಗೂ ತೆರಿಗೆ ವಂಚನೆಯ ಜಾಲ ನಿಯಂತ್ರಿಸುವ ಕಾರ್ಯತಂತ್ರದ ಭಾಗ ನೋಟ್ ಬ್ಯಾನ್ ಆಗಿತ್ತು ಎಂದು ಕೇಂದ್ರ ಸಮರ್ಥಿಸಿಕೊಂಡಿತ್ತು.

ನಕಲಿ ನೋಟಿನ ಕಡಿವಾಣವೇ ಸವಾಲು

ಉಗ್ರರ ಆರ್ಥಿಕ ಮೂಲ, ಕಪು್ಪಹಣ ನಿಯಂತ್ರಣಕ್ಕಾಗಿ ನೋಟು ಅಮಾನ್ಯೀಕರಣ ಮಾಡಿದರೂ ನಕಲಿ ನೋಟುಗಳ ಹಾವಳಿ ನಿಮೂಲನೆ ಮಾಡಲು ಆಗಿಲ್ಲ. ರಾಷ್ಟ್ರೀಯ ಅಪರಾಧ ನಿಯಂತ್ರಣ ಬ್ಯುರೊ (ಎನ್​ಸಿಆರ್​ಬಿ) ಮಾಹಿತಿ ಪ್ರಕಾರ, ನೋಟು ಅಮಾನ್ಯೀಕರಣದಿಂದೀಚೆಗೆ 245.33 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. 2016ರಲ್ಲಿ 15.92 ಕೋಟಿ ರೂ., 2017ರಲ್ಲಿ 26.35 ಕೋಟಿ ರೂ., 2018ರಲ್ಲಿ 55.71 ಕೋಟಿ ರೂ., 2019ರಲ್ಲಿ 34.79 ಕೋಟಿ ರೂ. 2020ರಲ್ಲಿ 92.17 ಕೋಟಿ ರೂ., 2021ರಲ್ಲಿ 20.39 ಕೋಟಿ ರೂ. ಮೌಲ್ಯ ಖೋಟಾ ನೋಟು ಜಪ್ತಿಯಾಗಿದೆೆ. 2021-22ರಲ್ಲಿ 500 ರೂ. ಮುಖಬೆಲೆಯ 79,699 ಮತ್ತು 2000 ರೂ. ಮುಖಬೆಲೆಯ 13,604 ನಕಲಿ ನೋಟುಗಳು ಪತ್ತೆಯಾಗಿವೆ.

ನೋಟು ಅಮಾನ್ಯೀಕರಣದ ಪರಿಣಾಮ ಬಗ್ಗೆ ಕೋರ್ಟ್ ಏನೂ ಹೇಳಿಲ್ಲ. ಇದು ಏಕಪಕ್ಷೀಯವಾಗಿದ್ದ ವಿನಾಶಕಾರಿ ನಿರ್ಧಾರವಾಗಿತ್ತು. ದೇಶದ ಬೆಳವಣಿಗೆಯ ವೇಗಕ್ಕೆ ಹಾನಿ ಮಾಡಿದ ನಿರ್ಧಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ದುರ್ಬಲಗೊಳಿಸಿತು. ಲಕ್ಷಗಟ್ಟಲೆ ಜನರ ಬದುಕನ್ನೇ ನಾಶ ಮಾಡಿತು.

| ಜೈರಾಮ್ ರಮೇಶ್ ಕಾಂಗ್ರೆಸ್ ನಾಯಕ