ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಸೋಮವಾರ (ಜುಲೈ 15) ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಎಸ್‌ಸಿ ಶರ್ಮಾ ಅವರಿದ್ದ ಪೀಠವು ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸಿದ್ಧವಿಲ್ಲ. ಕ್ಷಮಿಸಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಹೇಳಿದೆ. 2023 ಅಕ್ಟೋಬರ್ 19ರಂದು ಕರ್ನಾಟಕ ಹೈಕೋರ್ಟ್ ತನ್ನ ಮನವಿಯನ್ನು ತಿರಸ್ಕರಿಸಿದ ಆದೇಶದ ವಿರುದ್ಧ ಡಿಕೆ ಶಿವಕುಮಾರ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.
ಮೂರು ತಿಂಗಳೊಳಗೆ ತನಿಖೆ ಮುಗಿಸಿ ವರದಿ ಸಲ್ಲಿಸುವಂತೆ ಸಿಬಿಐಗೆ ಹೈಕೋರ್ಟ್ ಸೂಚಿಸಿದೆ. ಶಿವಕುಮಾರ್ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾಗ 2013 ಏಪ್ರಿಲ್ 1 ಮತ್ತು 2018 ಏಪ್ರಿಲ್ 30ರ ನಡುವೆ ತಮ್ಮ ಆದಾಯದ ಮೂಲಗಳಿಗೆ ಅನುಗುಣವಾಗಿ 74.93 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಕೇಂದ್ರ ತನಿಖಾ ದಳ ಆರೋಪಿಸಿದೆ.
2017ರಲ್ಲಿ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಳಾಖೆ ಡಿ.ಕೆ ಶಿವಕುಮಾರ್ ಅವರ ಮನೆ ಮತ್ತು ಕಚೇರಿಗಳಲ್ಲಿ ನಡೆಸಿದ ಶೋಧದ ಆಧಾರದ ಮೇಲೆ ಅವರ ವಿರುದ್ಧ ತನಿಖೆ ಪ್ರಾರಂಭಿಸಲಾಯಿತು. ಕೇಂದ್ರ ಏಜೆನ್ಸಿಯ ತನಿಖೆಯ ಆಧಾರದ ಮೇಲೆ ಸಿಬಿಐ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರದಿಂದ ಅನುಮತಿ ಕೇಳಿದೆ. ರಾಜ್ಯ ಸರ್ಕಾರ ಸೆಪ್ಟೆಂಬರ್ 25, 2019ರಂದು ಅನುಮೋದನೆ ನೀಡಿದ ಬಳಿಕ ಬಿಐ ಅವರ ವಿರುದ್ಧ ಅಕ್ಟೋಬರ್ 3, 2020ರಂದು ಎಫ್‌ಐಆರ್ ದಾಖಲಿಸಿತ್ತು. (ಏಜೆನ್ಸೀಸ್)