ಸೊರಬ: ಸಮಾಜದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗಿ ತಳ ಸಮುದಾಯಗಳ ಮೇಲೆ ನಿರಂತರ ಶೋಷಣೆ, ದಬ್ಬಾಳಿಕೆ ನಡೆಯುತ್ತಿದ್ದಾಗ ಸಮಾನತೆಯ ಸಂದೇಶವನ್ನು ಸಾರಿದವರು ಬ್ರಹ್ಮಶ್ರೀ ನಾರಾಯಣಗುರು ಎಂದು ಉಪನ್ಯಾಸಕ ರವಿ ಕಲ್ಲಂಬಿ ಹೇಳಿದರು.
ತಾಲೂಕು ಆಡಳಿತ, ಆರ್ಯ ಈಡಿಗ ಸಮಾಜ ಮತ್ತು ವಿವಿಧ ಇಲಾಖೆಗಳಿಂದ ಪಟ್ಟಣದ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು.
ಬಡವರು, ದೀನ ದಲಿತರು, ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದವರು ನಾರಾಯಣಗುರುಗಳು. ಮೂಢನಂಬಿಕೆ, ಅಂಧಾನುಕರಣೆ, ಜಾತಿಪದ್ಧತಿ, ಮಡಿವಂತಿಕೆ ವಿರುದ್ಧ ರಕ್ತ ರಹಿತ ಕ್ರಾಂತಿ ಮಾಡಿ, ಸಮಾನತೆಯ ಸಮಾಜ ಕಟ್ಟಲು ಮಾಡಿದ ಅವರ ಹೋರಾಟ ಎಂದಿಗೂ ಸ್ಮರಣೀಯ ಎಂದರು.
ಮಹಾತ್ಮ ಗಾಂಧಿ ಅವರ ದಲಿತೋದ್ಧಾರ ಚಳವಳಿ ಮತ್ತು ಆಚಾರ್ಯ ವಿನೋಬ ಭಾವೆ ಅವರ ಹೋರಾಟಕ್ಕೆ ಮೂಲ ಪ್ರೇರಣೆ ನಾರಾಯಣಗುರುಗಳು. ಜನರಿಗೆ ಧಾರ್ಮಿಕ ಸ್ವಾತಂತ್ರೃ ತಂದುಕೊಟ್ಟ ಮಹಾನ್ ದಾರ್ಶನಿಕ. ನಾರಾಯಣಗುರುಗಳ ಜೀವನ, ಹೋರಾಟ, ಚಿಂತನೆಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ತಾಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷ ಗಣಪತಿ ಎಚ್. ಹುಲ್ತಿಕೊಪ್ಪ ಮಾತನಾಡಿ, ನಾರಾಯಣಗುರು ಸರ್ವ ಸಮಾಜದ ಗುರುಗಳಾಗಿದ್ದರು. ಕರಾವಳಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಬ್ರಹ್ಮಶ್ರೀ ಅವರ ಪ್ರಭಾವ ಹೆಚ್ಚಾಗಿರುವುದನ್ನು ನಾವು ಕಾಣುತ್ತೇವೆ ಎಂದರು.
ತಹಸೀಲ್ದಾರ್ ಮಂಜುಳಾ ಹೆಗಡಾಳ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ರಾಜಪ್ಪ ಮಾಸ್ತರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಜಯಶೀಲ ಗೌಡ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಕರವೇ ಅಧ್ಯಕ್ಷ ಬಲೀಂದ್ರಪ್ಪ, ಪುರಸಭೆ ಸದಸ್ಯರಾದ ಮಧುರಾಯ್ ಶೇಟ್, ಎಂ.ಡಿ.ಉಮೇಶ್, ಪ್ರೇಮಾ, ಮುಖ್ಯಾಧಿಕಾರಿ ಚಂದನ್, ಬಿಇಒ ಆರ್.ಪುಷ್ಪಾ, ಡಾ.ಶ್ರೀಕಾಂತ್, ಸದಾನಂದ, ತಾಪಂ ಮಾಜಿ ಸದಸ್ಯ ನಾಗರಾಜ್, ಬಿಎಸ್‌ಎನ್‌ಡಿಪಿ ಜಿಲ್ಲಾದ್ಯಕ್ಷ ಎಸ್.ಡಿ.ನಾಯಕ್ ಇತರರಿದ್ದರು.