ನ್ಯೂಸ್

ಸ್ಯಾನಿಟರಿ ಪ್ಯಾಡ್​ಗಳ ಆವಿಷ್ಕಾರದ ಹಿಂದಿನ ಕತೆ!

ಒಂದು ಕಾಲದಲ್ಲಿ ಭಾರತದ ಬಡ ಗ್ರಾಮಸ್ಥ ಹೆಣ್ಣು ಮಕ್ಕಳು, ಮಾಸಿಕ ಮುಟ್ಟಿನ ಹರಿವನ್ನು ಹೀರಿಕೊಳ್ಳಲು, ಹಳೆಯ ಚಿಂದಿ ಬಟ್ಟೆಗಳನ್ನು, ಇಲ್ಲವೇ ಮರಳು, ಮರದ ಹೊಟ್ಟು, ಬೂದಿ ಮೊದಲಾದ ಅನಾರೋಗ್ಯಕರ ವಸ್ತುಗಳನ್ನು ಬಳಸುತ್ತಿದ್ದರು. ಪರಿಣಾಮವಾಗಿ ಹಲವಾರು ಲೈಂಗಿಕ ಕಾಯಿಲೆಗಳು, ಅಕಾಲಿಕ, ಅನಪೇಕ್ಷಿತ ಸಾವುಗಳು ಸಂಭವಿಸಿದ್ದುಂಟು. ತಮಿಳುನಾಡಿನ ಕೊಯಮತ್ತೂರಿನಲ್ಲಿ ವಾಸವಾಗಿದ್ದ ಶಾಂತಿ ಎಂಬ ಬಡ ನೇಕಾರನ ಮಡದಿಗೆ ಇಂತಹುದೇ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂತು. ಪ್ರತಿಬಾರಿ ಮಾಸಿದ, ಕೊಳಕಾದ ನಾರುವ ಚಿಂದಿ ಬಟ್ಟೆಗಳನ್ನು ಮರು ಬಳಕೆ ಮಾಡುವ ಕ್ರಮವನ್ನು ಕಂಡು, ಆಕೆಯ ಪತಿ ಮೊದಲಿಗೆ ಹತ್ತಿಯಿಂದ ಮತ್ತು ಮೆದು ಬಟ್ಟೆಯಿಂದ ತಾನೇ ಸ್ಯಾನಿಟರಿ ಪ್ಯಾಡನ್ನು ತಯಾರಿಸಿ, ಆಕೆಗೆ ನೀಡಿದರೂ ಅದು ಸರಿಹೋಗದೆ, ಆಕೆ ಮತ್ತೆ ಚಿಂದಿ ಬಟ್ಟೆಗೆ ಶರಣಾದಳು.

ಎದೆ ಗುಂದದ ಆಕೆಯ ಪತಿ, ವೈದ್ಯಕೀಯ ವಿದ್ಯಾರ್ಥಿನಿಯರನ್ನು ಸಂರ್ಪಸಿ, ತಾನು ಸಿದ್ಧಪಡಿಸಿದ ಪ್ಯಾಡ್​ಗಳಲ್ಲಿನ ಲೋಪದೋಷಗಳನ್ನು ಅರಿತುಕೊಳ್ಳಲು ಪ್ರಯತ್ನಿಸಿದ. ಆದರೆ, ಅವರೆಲ್ಲರೂ ಸಂಕೋಚಪಟ್ಟು ಅವನನ್ನು ಬೈದು ಕಳುಹಿಸಿದರು. ಆದರೂ ಧೈರ್ಯಗೆಡದ ಈ ಮನುಷ್ಯ ತನ್ನ ಸಂಶೋಧನೆಯನ್ನು ತನ್ನ ಮೇಲೆಯೇ ಪ್ರಯೋಗಿಸುವ ನಿರ್ಧಾರವನ್ನು ಕೈಗೊಂಡ. ಅಂತೆಯೇ, ಒಂದು ಕೃತಕ ಗರ್ಭಕೋಶವನ್ನು ಸೃಷ್ಟಿಸಿ, ಅದರೊಳಗೆ ಕುರಿಯ ರಕ್ತವನ್ನು ತುಂಬಿ, ಒತ್ತಿದಾಗ ಅದರೊಳಗಿನ ರಕ್ತ ಎರಡು ಪ್ಲಾಸ್ಟಿಕ್ ಕೊಳವೆಗಳ ಮೂಲಕ ತಾನೇ ತಯಾರಿಸಿದ ಸ್ಯಾನಿಟರಿ ಪ್ಯಾಡಿಗೆ ಸೇರುವಂತೆ ಮಾಡಿದ. ಇವೆಲ್ಲವನ್ನು ತನ್ನ ದೇಹದ ಮುಂಭಾಗದಲ್ಲಿ ಸೊಂಟದ ಕೆಳಗೆ ತೊಡೆಗಳ ಮಧ್ಯೆ ಬಿಗಿದುಕೊಂಡು ತಾನು ಧರಿಸುವ ಉಡುಪಿನೊಳಗೆ ಇಟ್ಟುಕೊಂಡು ಓಡಾಡಿದ.

ಹೀಗೆ ಓಡಾಡುವಾಗ ಕೃತಕ ಗರ್ಭಕೋಶವನ್ನು ಅದುಮಿದಂತಾಗಿ ಒಳಗಿದ್ದ ಕುರಿಯ ರಕ್ತವು ಮುಟ್ಟಿನ ಹರಿವಿನಂತೆ, ಕೊಳವೆಗಳ ಮೂಲಕ ಹಾದು ತಾನು ಕಟ್ಟಿಕೊಂಡಿದ್ದ ಪ್ಯಾಡನ್ನು ಒದ್ದೆ ಮಾಡುತ್ತಿತ್ತು. ಆದರೆ ಸುರಿದ ರಕ್ತ ಕೆಲವೇ ನಿಮಿಷಗಳಲ್ಲಿ ಕೊಳೆತು ಸುತ್ತಲೂ ದುರ್ನಾತ ಬೀರುತ್ತಿತ್ತು. ಮಾತ್ರವೇ ಅಲ್ಲ ಅವನು ಧರಿಸಿದ್ದ ಉಡುಪುಗಳ ಮೇಲೆಲ್ಲಾ ರಕ್ತದ ಕಲೆಗಳು ಕಾಣಲಾರಂಭಿಸಿದವು. ಇವನ ಈ ವರ್ತನೆಯಿಂದ ಹೇಸಿಹೋದ ಅವನ ಮಡದಿ ಶಾಂತಿಯೂ ಇವನನ್ನ ತೊರೆದು, ತವರುಮನೆಯನ್ನು ಸೇರಿ, ವಿವಾಹ ವಿಚ್ಛೇದನಕ್ಕೂ ಮುಂದಾದಳು. ಇವನ ಈ ವಿಚಿತ್ರ ವರ್ತನೆಯಿಂದ ಜನರೂ ಇವನನ್ನು ಹೊರ ಇಡಲು ಆರಂಭಿಸಿದರು. ಇಷ್ಟಕ್ಕೂ ಎದೆಗುಂದದ ಈ ಗಂಡು, ಶ್ರೀಮಂತ ಮಹಿಳೆಯರು ಬಳಸಿ ಎಸೆದಿದ್ದ ವಿದೇಶೀ ನಿರ್ವಿುತ ಪ್ಯಾಡುಗಳನ್ನು ಸಂಗ್ರಹಿಸಿ, ಅವುಗಳ ರಚನೆಯನ್ನು ಅಧ್ಯಯನ ಮಾಡಲು ಶುರು ಮಾಡಿದ. ಇದನ್ನು ಗಮನಿಸಿದ ಇವನ ತಾಯಿಯೂ ಇವನನ್ನು ಬಿಟ್ಟು ಹೊರಟುಹೋದಳು. ಊರ ಜನರು ಇವನಿಗೆ ದೆವ್ವ ಹಿಡಿದಿರಬೇಕು ಎಂದುಕೊಂಡು, ಮರಕ್ಕೆ ನೇತುಹಾಕಿ, ಮಾಂತ್ರಿಕನ ಮೂಲಕ ದೆವ್ವ ಬಿಡಿಸಲು ಸಿದ್ಧರಾದರು. ಇವರ ಉಪಟಳವನ್ನು ಸಹಿಸಲಾಗದೆ, ಈತ ಊರನ್ನೇ ತೊರೆದು ಪರಾರಿಯಾದ.

ಇಷ್ಟಾದರೂ ಈತ ತನ್ನ ಹುಚ್ಚು ಸಾಹಸವನ್ನು ನಿಲ್ಲಿಸಲಿಲ್ಲ. ಅಮೆರಿಕಾದ ಕಂಪೆನಿಯೊಂದರಿಂದ ಸ್ಯಾನಿಟರಿ ಪ್ಯಾಡನ್ನು ತರಿಸಿ, ಆ ಪ್ಯಾಡುಗಳಲ್ಲಿ ಸೆಲ್ಯುಲೋಸ್ ನಾರುಗಳು ಇರುವುದನ್ನು ಪತ್ತೆ ಹಚ್ಚಿದ. ಸೆಲ್ಯುಲೋಸ್ ಎಳೆಗಳನ್ನು ಒತ್ತಿದರೆ, ಅವು ಸ್ಪಂಜಿನಂತೆ ಮೃದುವಾಗಿ ಉಬ್ಬಿ ಹೇರಳವಾಗಿ ದ್ರವವನ್ನು ಹೀರಿಕೊಂಡರೂ, ತೇವವಿಲ್ಲದೆ ಶುಷ್ಕವಾಗಿರುವಂತೆ ಕಂಡುಬಂತು. ಪೈನ್ ಮರದ ಸೆಲ್ಯುಲೋಸ್ ತಿರುಳನ್ನು ಪುಡಿಮಾಡಿ, ಅದರಲ್ಲಿರುವ ಕ್ರಿಮಿಕೀಟಗಳನ್ನು ನಾಶಮಾಡಿ, ಪೊಟ್ಟಣಕಟ್ಟಿ ಪ್ಯಾಡ್​ಗಳಾಗಿ ಸಿದ್ಧಪಡಿಸುವ ಯಂತ್ರವನ್ನು ಈತ ತಯಾರಿಸಿದ. ಮಾತ್ರವೇ ಅಲ್ಲ, ಸಹಸ್ರಾರು ಡಾಲರ್ ಬೆಲೆಬಾಳುವ ಈ ಯಂತ್ರವನ್ನು ಕೇವಲ 65ಸಾವಿರ ರೂಪಾಯಿಗಳಿಗೆ ಇಳಿಸಿದ.

ಇದರಿಂದ, ಹೆಣ್ಣುಮಕ್ಕಳಿರುವ ಶಾಲೆಗಳು, ಸ್ತ್ರೀ ಸ್ವಸಹಾಯ ಸಂಘಗಳು ಈ ಯಂತ್ರದ ಸಹಾಯದಿಂದ, ಬರೇ 3 ರೂಪಾಯಿಗೆ ಲಭ್ಯವಿರುವ ಅಗ್ಗದ ಆದರೆ ಅಷ್ಟೇ ಪರಿಣಾಮಕಾರಿಯಾದ ಸ್ಯಾನಿಟರಿ ಪ್ಯಾಡ್​ಗಳನ್ನು ತಯಾರಿಸಲಾರಂಭಿಸಿದವು. ಅನೇಕ ಗ್ರಾಮೀಣ ಮಹಿಳೆಯರಿಗೆ ಉದ್ಯೋಗವಕಾಶವು ಲಭ್ಯವಾಗಿ, ಅವರೆಲ್ಲರೂ, ಶುಭ್ರ ಮತ್ತು ಆರೋಗ್ಯಕರ ಪ್ಯಾಡುಗಳನ್ನು ಬಳಸುವಂತಾಯಿತು. ಇಷ್ಟೇ ಅಲ್ಲದೆ, ಗ್ರಾಮಾಂತರ ಹೆಣ್ಣುಮಕ್ಕಳ ಆರೋಗ್ಯವೂ ಸುಧಾರಿಸಿ, ಅವರಲ್ಲಿನ ಲೈಂಗಿಕ ಸಂಬಂಧಿತ ರೋಗಗಳು ಮತ್ತು ಸಾವುಗಳ ಪ್ರಮಾಣವು ಗಣನೀಯವಾಗಿ ಇಳಿಯಿತು. ದೇಶಾದ್ಯಂತ ಅಂದಾಜು ಹತ್ತು ಲಕ್ಷ ಸ್ತ್ರೀಯರ ಜೀವನೋಪಾಯಕ್ಕೆ ನೆರವಾಯಿತು.

2014ರ ಟೈಮ್ಸ್​ ಮ್ಯಾಗಝೀನ್​ನ ವಿಶ್ವದ 100 ಪ್ರಭಾವೀ ವ್ಯಕ್ತಿಗಳ ಪಟ್ಟಿಯಲ್ಲಿ ಇವನ ಹೆಸರನ್ನೂ ಸೇರಿಸಿತು. ಹಾಗೂ ಈತನಿಗೆ 2016ರಲ್ಲಿ ಪದ್ಮಶ್ರೀ ಪ್ರಶಸ್ತಿಯೂ ಲಭ್ಯವಾಯಿತು. ಮ್ಯಾನ್ಸ್​ಟ್ರುಯೆಲ್ ಮ್ಯಾನ್ ಆಫ್ ಇಂಡಿಯಾ ಹೆಸರಿನ ಕಿರು ಚಿತ್ರವನ್ನು ಇವನ ಹೆಸರಿನಲ್ಲಿ ತಯಾರಿಸಲಾಯಿತು. ಈತನೇ, ಮನೆ ಬಿಟ್ಟು ಹೋದರೂ ಮತ್ತೆ ಗಂಡನನ್ನು ಸೇರಿಕೊಂಡ ಶಾಂತಿಯ ಪತಿ, ಅರುಣಾಚಲಂ ಮುರುಗಾನಂದಮ್.