ಮುಂಬೈ: ಔಷಧ, ಲೋಹ, ಐಟಿ ಷೇರುಗಳಲ್ಲಿ ಭಾರಿ ನಷ್ಟ, ವ್ಯಾಪಾರ ಸಂಬಂಧಿ ಅನಿಶ್ಚಿತತೆ, ಜಾಗತಿಕ ಮಾರುಕಟ್ಟೆಗಳಲ್ಲಿನ ಒತ್ತಡ, ವಿದೇಶಿ ಹೂಡಿಕೆ ಹಿಂತೆಗೆತ ಮುಂತಾದ ಕಾರಣಗಳಿಂದಾಗಿ ಭಾರತೀಯ ಷೇರುಪೇಟೆ ಶುಕ್ರವಾರ ಮತ್ತಷ್ಟು ಕುಸಿದಿದೆ.
ದಿನದ ವಹಿವಾಟಿನ ಮಧ್ಯೆ 690.01 ಅಂಕ ಕುಸಿದು 80,495.57ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 585.67 ಅಂಕ ಇಳಿಕೆ ದಾಖಲಿಸಿ 80,599.91ಕ್ಕೆ ಸ್ಥಿರಗೊಂಡಿತು. ನಿಫ್ಟಿ 203 ಅಂಕ ಕುಸಿದು 24,565.35ಕ್ಕೆ ಸ್ಥಿರವಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 5,588.91 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕಚೇರಿ ತಿಳಿಸಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 0.39ರಷ್ಟು ಕಡಿಮೆಯಾಗಿ ಪ್ರತಿ ಬ್ಯಾರೆಲ್ಗೆ 71.42 ಅಮೆರಿಕನ್ ಡಾಲರ್ಗೆ ತಲುಪಿದೆ.
ದಾಸ್ತಾನುದಾರರಿಂದ ನಿರಂತರ ಮಾರಾಟದ ಪರಿಣಾಮವಾಗಿ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 400 ರೂ. ಇಳಿದಿದೆ. ಗುರುವಾರ 10 ಗ್ರಾಂಗೆ 98,020 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಶುಕ್ರವಾರ 97,620 ರೂ.ಗೆ ತಲುಪಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ 300 ರೂ. ಕುಸಿದು 97,500 ರೂ.ಗೆ ತಲುಪಿದೆ. ಇದು ಗುರುವಾರ 97,800 ರೂ. ಇತ್ತು. ಬೆಳ್ಳಿ ಬೆಲೆ 2,500 ರೂ. ಕುಸಿದು 1,09,500 ರೂ.ಗೆ ಇಳಿದಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.