ನ್ಯೂಸ್

ಷೇರುಪೇಟೆ ಮತ್ತೆ ಭಾರಿ ಕುಸಿತ

ಮುಂಬೈ: ಜಾಗತಿಕ ಮಟ್ಟದಲ್ಲಿನ ದುರ್ಬಲ ಪ್ರವೃತ್ತಿ, ಅಮೆರಿಕದ ವ್ಯಾಪಾರ ನೀತಿಯ ಅನಿಶ್ಚಿತತೆ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ ಷೇರುಗಳ ಮಾರಾಟ ಹೆಚ್ಚಾಗಿದ್ದರಿಂದ ಭಾರತೀಯ ಷೇರುಪೇಟೆ ಸೋಮವಾರ ತೀವ್ರ ಕುಸಿತ ದಾಖಲಿಸಿದೆ.

ದಿನದ ಮಧ್ಯ ಭಾಗದಲ್ಲಿ 922 ಅಂಕ ಇಳಿಕೆಯಾಗಿ 75,267ಕ್ಕೆ ತಲುಪಿದ್ದ ಸೆನ್ಸೆಕ್ಸ್ ದಿನದ ಅಂತ್ಯದಲ್ಲಿ 824 ಅಂಕ ಕುಸಿದು 75,366ಕ್ಕೆ ಸ್ಥಿರಗೊಂಡಿತು. ನಿಫ್ಟಿ 263 ಅಂಕ ಕುಸಿದು 22,829ಕ್ಕೆ ತಲುಪಿತು. 2024ರ ಜೂ. 6ರ ನಂತರ ನಿಫ್ಟಿ 23 ಸಾವಿರಕ್ಕಿಂತ ಕೆಳಗಿನ ಮಟ್ಟಕ್ಕೆ ಇಳಿದಿರುವುದು ಇದೇ ಮೊದಲು. ದಿನದ ಮಧ್ಯಭಾಗದಲ್ಲಿ ನಿಫ್ಟಿ 305 ಅಂಕ ಕುಸಿದು 22,786ಕ್ಕೆ ತಲುಪಿತ್ತು.

ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ, ವಿದ್ಯುತ್, ಗ್ರಾಹಕ ಉತ್ಪನ್ನಗಳು, ತೈಲ ಮತ್ತು ಅನಿಲ, ಆರೋಗ್ಯ ವಲಯದ ಷೇರುಗಳು ನಷ್ಟ ಅನುಭವಿಸಿದವು. ಎಚ್​ಸಿಎಲ್ ಟೆಕ್ ಶೇ. 4.49ರಷ್ಟು ಕುಸಿದರೆ, ಜೊಮ್ಯಾಟೊ, ಟೆಕ್ ಮಹಿಂದ್ರಾ, ಪವರ್​ಗ್ರಿಡ್, ಟಾಟಾ ಮೋಟರ್ಸ್ ಕೂಡ ಅದನ್ನು ಅನುಸರಿಸಿದವು. ಇನ್​ಫೋಸಿಸ್, ಟಾಟಾ ಸ್ಟೀಲ್, ಎಚ್​ಡಿಎಫ್​ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್​ಟೆಲ್ ಷೇರುಗಳೂ ಕುಸಿದು ಸೆನ್ಸೆಕ್ಸ್ ಸೂಚ್ಯಂಕವನ್ನು 7 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಸಿದವು. ಐಸಿಐಸಿಐ, ಹಿಂದುಸ್ತಾನ್ ಯುನಿಲಿವರ್, ಎಂಆಂಡ್​ಎಂ, ಎಸ್​ಬಿಐ, ಎಲ್​ಆಂಡ್​ಟಿ ಷೇರುಗಳು ಲಾಭ ಗಳಿಸಿದವು. ಸತತ 2 ದಿನಗಳ ಕುಸಿತದಿಂದಾಗಿ ಹೂಡಿಕೆದಾರರು 9.28 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.

ರೂಪಾಯಿ ಕುಸಿತ

ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿಯ ಬೆಲೆ ಸೋಮವಾರ 9 ಪೈಸೆಯಷ್ಟು ಕುಸಿದು 86.31ಕ್ಕೆ ತಲುಪಿತು.