ಶಿವಮೊಗ್ಗ ವಿತರಕರ ಸಂಘದಿಂದ ಏರ್ಪಡಿಸಿದ್ದ ವಿತರಕರ ದಿನಾಚರಣೆಯನ್ನು ಎಂಎಲ್‌ಸಿ ಡಿ.ಎಸ್.ಅರುಣ್ ಉದ್ಘಾಟಿಸಿದರು. ಬದರಿನಾಥ್, ಎಂ.ಸಿ.ದೇವರಾಜ್, ಬಿ.ಗೋಪಿನಾಥ್, ಜಯಂತ್ ಗಾಣಿಗ, ಗಿರೀಶ್ ಶಂಕರ್ ಸುಂಕದ ಇದ್ದರು. 
ನ್ಯೂಸ್

ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ

ಅರವಿಂದ ಅಕ್ಲಾಪುರ

ಶಿವಮೊಗ್ಗ: ದೇಶದಲ್ಲಿ ಕರ್ನಾಟಕವನ್ನು ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ವಿತರಕರ ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಶಿವಮೊಗ್ಗ ವಿತರಕರ ಸಂಘದಿಂದ ಏರ್ಪಡಿಸಿದ್ದ ವಿತರಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಆರ್ಥಿಕ ಪ್ರಗತಿಯಲ್ಲಿ ವಿತರಕರ ಕೊಡುಗೆ ದೊಡ್ಡದು. ಚಿಲ್ಲರೆ ಮಾರುಕಟ್ಟೆಯನ್ನು ಬೆಳೆಸುವ ಬಗ್ಗೆ ವಿತರಕರಿಗೆ ಮಾಹಿತಿ ಒದಗಿಸುವ ಮೂಲಕ ದೇಶದ ಆರ್ಥಿಕತೆಗೆ ವಿತರಕರ ಉದ್ಯಮ ಉತ್ತಮ ಕೊಡುಗೆ ನೀಡುತ್ತಿದೆ ಎಂದರು.

ಕರ್ನಾಟಕ ಗ್ರಾಹಕ ವಸ್ತುಗಳ ವಿತರಕರ ಸಂಘಗಳ ಒಕ್ಕೂಟ ಅಧ್ಯಕ್ಷ ಗಿರೀಶ್ ಶಂಕರ್ ಸುಂಕದ ಮಾತನಾಡಿ, ಕಂಪನಿಗಳ ಹಾಗೂ ಸರ್ಕಾರದ ಕೆಲ ನೀತಿಗಳಿಂದ ವಿತರಕರ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಸವಾಲುಗಳನ್ನು ಎದುರಿಸಬೇಕು ಎಂದು ಹೇಳಿದರು.

ಕರ್ನಾಟಕ ಫೆಡರೇಶನ್ ಆಫ್ ಡಿಸ್ಟ್ರಿಬ್ಯೂಟರ್ಸ್‌ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಜಯಂತ್ ಗಾಣಿಗ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿತರಕರ ಮಂಡಳಿ ರಚಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿತರಿಕರಿಗೆ ಹೆಚ್ಚಿನ ಮಟ್ಟದ ಭದ್ರತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಕಂಪನಿ ಹಾಗೂ ವರ್ತಕರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿತರಕರು ಆಧುನಿಕ ಮಾರುಕಟ್ಟೆಯ ವ್ಯವಸ್ಥೆ ದೃಷ್ಟಿಯಿಂದ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬೇಕು. ತಾಂತ್ರಿಕತೆ ಬಳಸಿಕೊಳ್ಳಬೇಕು ಎಂದರು.

ಜಿಲ್ಲಾ ವಿತರಕ ಸಂಘದ ಅಧ್ಯಕ್ಷ ಎಂ.ಸಿ.ದೇವರಾಜ್ ಮಾತನಾಡಿ, ಮೊದಲ ಬಾರಿಗೆ ಶಿವಮೊಗದಲ್ಲಿ ವಿತರಕರ ದಿನಾಚರಣೆ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಆಚರಿಸುವಂತಾಗಲಿ ಎಂದು ಆಶಿಸಿದರು.

ವಿತರಕರ ದಿನಾಚರಣೆ ಅಂಗವಾಗಿ 29 ಸಂಸ್ಥಾಪಕ ಸದಸ್ಯರನ್ನು ಸನ್ಮಾನಿಸಲಾಯಿತು. ಭದ್ರಾವತಿ, ಶಿಕಾರಿಪುರ, ಸಾಗರ, ಗದಗ ಹಾಗೂ ಕೊಪ್ಪದಿಂದ ಆಗಮಿಸಿದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಬದರಿನಾಥ್, ಕಾರ್ಯದರ್ಶಿ ಗಿರೀಶ್ ಇತರರಿದ್ದರು.