ಬೆಂಗಳೂರು; ಹಣ್ಣುಗಳ ರಾಜಾ ಎಂದೇ ಪ್ರಸಿದ್ಧವಾಗಿರುವ ಮಾವಿನಹಣ್ಣಿನ ಸೀಸನ್‌ನಲ್ಲಿ ಶುದ್ಧ ರಾಸಾಯನಿಕ ಮುಕ್ತ ಹಣ್ಣು ಸವಿಯಬೇಕೆಂಬ ಗ್ರಾಹಕರಿಗೆ ರಾಜ್ಯ ತೋಟಗಾರಿಕೆ ಇಲಾಖೆ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಿದ್ದು, ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.
ಲಾಲ್‌ಬಾಗ್ ಸಸ್ಯತೋಟದಲ್ಲಿ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿಯು ಆಯೋಜಿಸಿರುವ ಮೇಳದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವು ಮತ್ತು ಹಲಸಿನಹಣ್ಣು ಮಾರಾಟ ಮಾಡಲು ಉತ್ತಮ ವೇದಿಕೆ ನಿರ್ಮಿಸಿದೆ.
ಮೇ 24ರಿಂದ ಆರಂಭವಾಗಿರುವ ಮಾವು ಮೇಳವು ಜೂ.10 ರವರೆಗೆ ಮುಂದುವರೆಯಲಿದ್ದು, ಸುಮಾರು 90 ಸ್ಟಾಲ್‌ಗಳಲ್ಲಿ ವಿವಿಧ ತಳಿಯ ಮಾವು ಮತ್ತು ಹಲಸಿನ ಹಣ್ಣುಗಳ ಮಾರಾಟ ಭರದಿಂದ ಸಾಗಿದೆ. ಇದೇ ವೇಳೆ ತೋಟಗಾರಿಕಾ ಇಲಾಖೆಯು ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಗ್ರಾಹಕರು ತಮ್ಮ ಮನೆಯ ಸಮೀಪದಲ್ಲಿರುವ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಮಾವು ಖದೀದಿಸುತ್ತಿದ್ದಾರೆ.
ಮಾವು ಮೇಳಕ್ಕೆ ಮೊದಲೆರಡು ದಿನ ಬೆಂಗಳೂರಿನಲ್ಲಿ ಸುರಿಯುತ್ತಿದ್ದ ಮಳೆ ಹಾಗೂ ಕೆಲಸದ ದಿನವಾದ್ದರಿಂದ ಗ್ರಾಹಕರಿಂದ ನಿರೀಕ್ಷಿತ ರೆಸ್ಪಾನ್ಸ್ ವ್ಯಕ್ತವಾಗಿರಲಿಲ್ಲ. ಆದರೆ ವೀಕೆಂಡ್‌ನಲ್ಲಿ ಬೆಂಗಳೂರಿಗರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನದಿಂದ ಮಳೆ ಕೊಂಚ ವಿರಾಮ ನೀಡಿರುವುದು ಗ್ರಾಹಕರು ಹೆಚ್ಚಾಗಲು ಕಾರಣ. ಇದೇ ರೀತಿ ಮಳೆ ಅಡಚಣೆಯಾಗದಿದ್ದರೆ ಜೂ.10ರವರೆಗೆ ನಡೆಯುವ ಮಾವು ಮೇಳೆ ಸಂಪೂರ್ಣ ಯಶಸ್ವಿಯಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಮಾವು ಪ್ರಿಯರು ಕುಟುಂಬ ಸಮೇತವಾಗಿ ಬಂದು ಹಣ್ಣು ಸವಿಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಈ ವೀಕೆಂಡ್ ಆನಂದಿಸಲು ಜನರ ಆಯ್ಕೆ ಮಾವು ಮತ್ತು ಹಲಸು ಮೇಳ ಎಂಬುದು ಈ ಮೂಲಕ ಸಾಭೀತಾಗಿದೆ.
ಸುಮಾರು 72 ಸ್ಟಾಲ್‌ಗಳಲ್ಲಿ 15ಕ್ಕೂ ಹೆಚ್ಚು ತಳಿಯ ಮಾವುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. 10 ಸ್ಟಾಲ್‌ಗಳಲ್ಲಿ ಹಲಸಿನ ಹಣ್ಣು ಮಾರಾಟವಾಗುತ್ತಿದೆ. ಇನ್ನುಳಿದ ಸ್ಟಾಲ್‌ಗಳಲ್ಲಿ ಮಾವಿನಹಣ್ಣಿನ ಜ್ಯೂಸ್, ಹಲಸಿನ ಹಪ್ಪಳ, ಚಿಪ್ಸ್ ಇನ್ನಿತರೆ ಮಾವು ಮತ್ತು ಹಲಸಿನ ವಿವಿಧ ಉತ್ಪನ್ನಗಳು ಹಾಗೂ ತೋಟಗಾರಿಕಾ ಬೆಳೆಯಾದ ಒಣದ್ರಾಕ್ಷಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಕೇಸರ, ದಶಾರಿ, ಬಾದಾಮಿ, ಅಮರಪಾಳೆ, ರಸಪುರಿ, ಸಿಂಧೂರ, ಮಲಗೋವ, ಮಲ್ಲಿಕಾ, ಇಮಾಮ್‌ಪಸಂದ ಮತ್ತಿತರ ತಳಿಯ ಮಾವಿನಹಣ್ಣುಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಹಲಸಿನಹಣ್ಣಿನಲ್ಲೂ ಬಕ್ಕೆ, ಚಂದ್ರಬಕ್ಕೆ ಇತ್ಯಾದಿ ವರ್ಣರಂಜಿತ ವೆರೈಟಿಗಳಿದ್ದು, ನೋಡುಗರ ಬಾಯಲ್ಲಿ ನೀರೂರಿಸುತ್ತಿವೆ. ಅತಿ ಕಡಿಮೆ ಬೆಲೆ ಎಂದರೆ ತೋತಾಪುರಿ ಕೆಜಿಗೆ 50 ರಿಂದ ಇಮಾಮ್‌ಪಸಂದ 250 ರೂ.ವರೆಗೆ ಕೆಜಿ ಮಾವಿನಹಣ್ಣಿನ ಬೆಲೆ ಇದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಮಾವಿನ ಇಳುವರಿಯಲ್ಲಿ ಕೊಂಚ ಕಡಿಮೆಯಾಗಿದೆಯಾದರೂ; ಗ್ರಾಹಕರ ಬೇಡಿಕೆಗೆ ಅಗತ್ಯವಿರುವಷ್ಟು ಮಾಲು ಮೇಳಕ್ಕೆ ಬರುತ್ತಿದೆ. ಕನಕಪುರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ರೈತರು ಮಾವು ಮೇಳದಲ್ಲಿ ಭಾಗವಹಿಸಿದ್ದು, ರೈತರಿಂದ ನೇರವಾಗಿ ಗ್ರಾಹಕರು ಕೊಳ್ಳುತ್ತಿದ್ದಾರೆ ಎಂದು ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿಯ ಉಪ ನಿರ್ದೇಶಕ ಶಿವಪ್ರಸಾದ್ ತಿಳಿಸಿದ್ದಾರೆ
ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವ್ಯಾಪಾರಕ್ಕೆ ಸಮಯ ನಿಗದಿಯಾಗಿದೆಯಾದರೂ ಬೆಳಗ್ಗೆ ವಾಯು ವಿಹಾರಕ್ಕೆ ಬರುವ ಜನರು 7 ಗಂಟೆಯಿಂದಲೇ ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಹಲಸಿನಹಣ್ಣನ್ನು ಸವಿಯಲು ಮಳಿಗೆಗಳ ಮುಂದೆ ಜನದಟ್ಟಣೆಯಾಗುತ್ತಿದೆ ಎಂದು ಅವರು ವಿವರಿಸಿದರು.
-ಶಿವಕುಮಾರಸ್ವಾಮಿಗಳು, ದ್ರಾಕ್ಷಿ ಬೆಳೆಗಾರರು, ಕರಿಭಂಟನಾಳ, ವಿಜಯಪುರ ಜಿಲ್ಲೆ
-ಸುಗುಣ, ಗ್ರಾಹಕರು, ವಿದ್ಯಾಪೀಠ