ನ್ಯೂಸ್

ಕೋವಿಡ್ ತಡೆಗೆ ಅಷ್ಟಸೂತ್ರ; ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ | ಪ್ರಧಾನಿಯಿಂದಲೂ ಚರ್ಚೆ

ಬೆಳಗಾವಿ: ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ರಾಜ್ಯದಲ್ಲಿ ಹರಡದಂತೆ ನಿಯಂತ್ರಿಸಲು ರಾಜ್ಯ ಸರ್ಕಾರ ಒಳಾಂಗಣದಲ್ಲಿ ಮಾಸ್ಕ್ ಕಡ್ಡಾಯ ಸೇರಿದಂತೆ ಎಂಟು ಸೂತ್ರಗಳನ್ನು ರೂಪಿಸಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ನಡೆದು ಕೆಲ ಕ್ರಮ ತೀರ್ಮಾನಿಸಲಾಯಿತು. ಕೆಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಕರೊನಾದ ಬಿಎಫ್-7 ಉಪತಳಿ ಬಹಳ ವೇಗವಾಗಿ ಹರಡುತ್ತಿದೆ ಹಾಗೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಶೇ. 20ರಷ್ಟು ಮಾತ್ರ ಬೂಸ್ಟರ್ ಡೋಸ್: ರಾಜ್ಯದಲ್ಲಿ ಬೂಸ್ಟರ್ ಡೋಸ್ ಲಸಿಕೆ ಪಡೆದವರು ಶೇ.20 ಮಂದಿ ಮಾತ್ರ, ಇದನ್ನು ಶೇ.100ಕ್ಕೆ ಹೆಚ್ಚಿಸಲು ಆದ್ಯತೆ ನೀಡಬೇಕೆಂದು ಸಭೆಯಲ್ಲಿ ನಿರ್ಧಾರವಾಗಿದೆ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ಬೂಸ್ಟರ್ ಡೋಸ್ ನೀಡಲು ತಾಲೂಕುಮಟ್ಟದಲ್ಲಿ ವಿಶೇಷ ಅಭಿಯಾನ ನಡೆಸಲು ತೀರ್ವನಿಸಲಾಗಿದೆ. ವಿಶೇಷ ಕ್ಯಾಂಪ್​ಗಳನ್ನು ನಡೆಸಲಾಗುತ್ತದೆ. ಲಸಿಕೆ ಕೊರತೆ ಆಗದಂತೆ ದಾಸ್ತಾನು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ರಾಜ್ಯದ ಜನತೆ ಯಾವುದಕ್ಕೂ ಹಿಂಜರಿಯದೆ ಬೂಸ್ಟರ್ ಡೋಸ್ ಪಡೆಯಬೇಕು. ಎರಡನೇ ಡೋಸ್ ಪಡೆದವರಲ್ಲಿ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಂದರು.

ಕರೊನಾ ಆತಂಕ ಬೇಡ

ದೇಶದಲ್ಲಿ ಸೋಂಕು ನಿಯಂತ್ರಿಸಲು ಮುನ್ನೆಚ್ಚರಿಕೆ ಒಂದೇ ಮದ್ದು ಎಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ತಿಳಿಸಿದ್ದಾರೆ. ಸದ್ಯ ದೇಶದಲ್ಲಿ ಪತ್ತೆಯಾಗಿರುವ ಒಮಿಕ್ರಾನ್​ನ ಹೊಸ ತಳಿ ವೇಗವಾಗಿ ಹರಡುತ್ತದೆ. ಹೀಗಾಗಿ ಜನರು ಸೋಂಕಿನಿಂದ ಮುಕ್ತರಾಗಲು ಮೊದಲಿನಂತೆ ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಕೈಗಳು ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜತೆಗೆ ಅನಗತ್ಯವಾಗಿ ಗುಂಪು ಸೇರುವುದು, ಸಭೆ ಸಮಾರಂಭಗಳಲ್ಲಿ ಭಾಗವಹಿಸು ವುದನ್ನು ನಿಯಂತ್ರಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಮುಖ್ಯವಾಗಿ ಗರ್ಭಿಣಿಯರು, ಮಕ್ಕಳು, ಗಂಭೀರ ಹಾಗೂ ದೀರ್ಘಕಾಲಿನ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚು ಜಾಗ್ರತೆ ವಹಿಸಬೇಕು. ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಬೇಕು ಎಂದು ಸೂಚಿಸಿದ್ದಾರೆ.

ಚರಂಡಿ ನೀರಿನ ಪರೀಕ್ಷೆ: ರಾಜ್ಯದಲ್ಲಿ ಹೊಸ ತಳಿಗಳ ಪತ್ತೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಪಾರ್ಟ್​ವೆುಂಟ್​ಗಳು ಸೇರಿ ನಗರದ 12 ಕಡೆಗಳಲ್ಲಿ ಚರಂಡಿ ನೀರಿನಲ್ಲಿ ಕೋವಿಡ್ ವೈರಸ್ ಪತ್ತೆ ಕಾರ್ಯ ನಡೆದಿದೆ. ಸಾಂಕ್ರಾಮಿಕ ರೋಗಗಳ ಸಂಶೋಧನಾ ಪ್ರತಿಷ್ಠಾನ (ಐಡಿಆರ್​ಎಫ್) ಈ ಕಾರ್ಯದಲ್ಲಿ ನಿರತವಾಗಿದೆ.

ಟೆಸ್ಟ್ ಹೆಚ್ಚಿಸುವ ಅಗತ್ಯವಿಲ್ಲ

ಜನಜಂಗುಳಿ ಇರುವ ಕಡೆಯಲ್ಲಿ ಟೆಸ್ಟಿಂಗ್ ಹೆಚ್ಚಿಸುವ ಅಗತ್ಯವೇನೂ ಇಲ್ಲ. ವಿಮಾನ ನಿಲ್ದಾಣದಲ್ಲಿ ರ್ಯಾಂಡಂ ಟೆಸ್ಟ್ ಮಾಡುವುದನ್ನು ಮುಂದುವರಿಸಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಸಚಿವ ಸುಧಾಕರ್ ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮಗಳು

  • ಸಾರಿ, ಐಎಲ್​ಐ ಪ್ರಕರಣಗಳಲ್ಲಿ ಕಡ್ಡಾಯ ಟೆಸ್ಟಿಂಗ್ ? ಎಸಿ ಇರುವ ಒಳಾಂಗಣದಲ್ಲಿ ಮಾಸ್ಕ್ ಕಡ್ಡಾಯ
  • ಆಕ್ಸಿಜನ್ ಪ್ಲಾಂಟ್​ಗಳ ಪರಿಶೀಲನೆ; ತಾಂತ್ರಿಕ ದೋಷಗಳಿದ್ದರೆ ತಕ್ಷಣ ಸರಿಪಡಿಸುವುದು ? ವಿದೇಶದಿಂದ ಬರುವ ಪ್ರಯಾಣಿಕರ ರ್ಯಾಂಡಂ ಪರೀಕ್ಷೆ ನಡೆಸುವುದು ? ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಮೀಸಲು ? ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್​ಗೆ ಹಾಸಿಗೆ ಮೀಸಲಿಡಲು ಸೂಚನೆ ? ತಾಲೂಕು ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಅಭಿಯಾನಕ್ಕೆ ಒತ್ತು ? ಲಸಿಕೆ ಕೊರತೆ ಆಗದಂತೆ ಕೇಂದ್ರದ ಜತೆ ನಿರಂತರ ಸಂಪರ್ಕ

ಹೊಸ ಅಲೆ ಎದುರಿಸಲು ಸಿದ್ಧತೆ

ನವದೆಹಲಿ: ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಉನ್ನತಮಟ್ಟದ ಸಭೆ ನಡೆಸಿದ್ದು, ಕರೊನಾ ತಡೆಗೆ ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವ, ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಕಣ್ಗಾವಲು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಎಲ್ಲ ಸಮಯದಲ್ಲೂ ಅದರಲ್ಲೂ ವಿಶೇಷವಾಗಿ ಮುಂಬರುವ ಹಬ್ಬಗಳ ಸಂದರ್ಭಗಳಲ್ಲಿ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವಂತೆ ಜನರಿಗೆ ಕರೆ ನೀಡಿದ್ದಾರೆ.

ದುರ್ಬಲ ಮತ್ತು ವಯಸ್ಸಾದವರಿಗೆ ಮುನ್ನೆಚ್ಚರಿಕೆಯ ಡೋಸ್ ನೀಡುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಹೊಸ ರೂಪಾಂತರಿಗಳನ್ನು ಸಕಾಲಿಕವಾಗಿ ಪತ್ತೆ ಹಚ್ಚಲು ಎಲ್ಲ ಪಾಸಿಟಿವ್ ಪ್ರಕರಣಗಳ ಜೀನೋಮ್ ಸೀಕ್ವೆನ್ಸಿಂಗ್ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆಮ್ಲಜನಕ ಸಿಲಿಂಡರ್​ಗಳು, ಪಿಎಸ್​ಎ ಸ್ಥಾವರಗಳು, ವೆಂಟಿಲೇಟರ್​ಗಳು ಮತ್ತು ಮಾನವ ಸಂಪನ್ಮೂಲ ಸೇರಿದಂತೆ ಆಸ್ಪತ್ರೆಯ ಮೂಲಸೌಕರ್ಯಗಳ ಕಾರ್ಯಾಚರಣೆ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳಿಗೆ ಕರೆ ನೀಡಿದರು. ಅಗತ್ಯ ಔಷಧಗಳ ಲಭ್ಯತೆ ಮತ್ತು ಬೆಲೆಗಳ ಬಗ್ಗೆಯೂ ನಿಯಮಿತವಾಗಿ ನಿಗಾ ವಹಿಸಬೇಕು ಎಂದು ಸೂಚಿಸಿದರು. ಔಷಧಗಳು, ಲಸಿಕೆಗಳು ಮತ್ತು ಆಸ್ಪತ್ರೆ ಬೆಡ್​ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಹಾಗೂ ಡಿಸೆಂಬರ್ 22ಕ್ಕೆ ಕೊನೆಗೊಂಡ ವಾರದಲ್ಲಿ ಸರಾಸರಿ ದೈನಂದಿನ ಪ್ರಕರಣಗಳು 153ಕ್ಕೆ ಮತ್ತು ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 0.14ಕ್ಕೆ ಇಳಿದಿರುವ ಬಗ್ಗೆ ಪ್ರಧಾನಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಪ್ರಧಾನಿ ಮೋದಿ ಪ್ರಶಂಸಿಸಿದರು.