ನ್ಯೂಸ್

ಅಬ್ಬರಿಸಿ ತಣ್ಣಗಾಯ್ತು ಬಿಟ್ ಕಾಯಿನ್ ಸದ್ದು!

| ಕೀರ್ತಿನಾರಾಯಣ ಸಿ. ಬೆಂಗಳೂರು

ರಾಜ್ಯ ರಾಜಕೀಯದ ಜತೆಗೆ ಪೊಲೀಸ್ ವಲಯದಲ್ಲೂ ತಲ್ಲಣ ಮೂಡಿಸಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಕೈವಾಡದ ಬಿಟ್ ಕಾಯಿನ್ ಹಗರಣ ಬಿರುಬೇಸಿಗೆಯಲ್ಲೂ ತಣ್ಣಗಾಗಿದೆ. ಸಿಐಡಿ ವಿಶೇಷ ತನಿಖಾ ತಂಡದ (ಎಸ್​ಐಟಿ) ತನಿಖಾಧಿಕಾರಿಗಳೆಲ್ಲ ಚುನಾವಣಾ ಕರ್ತ ವ್ಯಕ್ಕೆ ನಿಯೋಜನೆ ಗೊಂಡಿದ್ದರಿಂದ ತನಿಖೆ ನಿಧಾನಗೊಂಡಿದೆ.

ಸಾಕ್ಷ್ಯ ನಾಶ ಪಡಿಸಿದ ಪ್ರಮುಖ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ ತಲೆಮರೆಸಿಕೊಂಡಿದ್ದಾರೆ. ಫೆ.27ರಂದು ಬಂಧಿಸಲು ಹೋಗಿದ್ದ ಎಸ್​ಐಟಿಯ ಇಬ್ಬರು ಅಧಿಕಾರಿಗಳಿಗೆ ಕಾರು ಗುದ್ದಿಸಿ ಅವರ ಕೊಲೆಗೆ ಯತ್ನಿಸಿ ಶ್ರೀಧರ್ ಪೂಜಾರ ಪರಾರಿಯಾಗಿದ್ದಾರೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಶ್ರೀಧರ್ ಪೂಜಾರ ಎಸಿಎಂಎಂ ಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ವಿಳಂಬಕ್ಕೆ ಕಾರಣವೇನು?: ಶ್ರೀಕೃಷ್ಣ, ಬಿಟ್ ಕಾಯಿನ್ ವಿನಿಮಯ ಕಂಪನಿಗಳ ವೆಬ್​ಸೈಟ್ ಹ್ಯಾಕ್ ಮಾಡಿರುವುದು ಗೊತ್ತಾಗಿದೆ. ಆದರೆ, ಹ್ಯಾಕ್ ಮಾಡಿ ಕದ್ದ ಬಿಟ್ ಕಾಯಿನ್​ಗಳನ್ನು ಹೇಗೆ? ಯಾವ್ಯಾವ ವ್ಯಾಲೆಟ್​ಗಳಿಗೆ ವರ್ಗಾವಣೆಯಾಗಿದೆ ಎಂಬುದರ ಮಾಹಿತಿ ಸಿಕ್ಕಿಲ್ಲ. ಹ್ಯಾಕ್ ಮಾಡಿದ ಬಿಟ್ ಕಾಯಿನ್​ಗಳನ್ನು ನಗದು ರೂಪದಲ್ಲಿ ಸ್ಥಳೀಯ ಬ್ಯಾಂಕ್​ಗಳಿಂದ ಡ್ರಾ ಮಾಡಿರುವುದು ಎಸ್​ಐಟಿ ತನಿಖೆಯಲ್ಲಿ ಗೊತ್ತಾಗಿದೆ. ಆದರೆ,ಆನ್​ಲೈನ್ ವೇದಿಕೆಯಲ್ಲಿ ನಡೆದಿರುವ ಬಿಟ್ ವ್ಯವಹಾರದ ಸ್ಪಷ್ಟ ಮಾಹಿತಿ ಎಸ್​ಐಟಿಗೆ ಸಿಗದಿರುವುದು ತನಿಖೆ ವಿಳಂಬಕ್ಕೆ ಕಾರಣ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾವಿರಾರು ಕೋಟಿ ವ್ಯವಹಾರ: 2020 ನ.18ರಂದು ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ಬಂಧಿಸಲಾಗಿತ್ತು. ವ್ಯಾಲೆಟ್​ನಲ್ಲಿದ್ದ ಬಿಟ್ ಕಾಯಿನ್​ಗಳನ್ನು ಬಲವಂತವಾಗಿ ಬೇರೆಬೇರೆ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡಿಸಿ, ನಂತರ ಅಲ್ಲಿಂದ ಬಿಟ್ ಕಾಯಿನ್ ಟ್ರೇಡಿಂಗ್ ಎಕ್ಸ್​ಚೇಂಜ್​ಗೆ ಟ್ರಾನ್ಸ್​ಫರ್ ಮಾಡಲಾಗಿದೆ. ಸಾವಿರಾರು ಕೋಟಿ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಟ್ ಕಾಯಿನ್ ವರ್ಗಾವಣೆಯ ಡಿಜಿಟಲ್ ಸಾಕ್ಷ್ಯವನ್ನು ಬಂಧಿತ ಪೊಲೀಸ್ ಅಧಿಕಾರಿಗಳು ನಾಶಪಡಿಸಿದ್ದಾರೆ.

ತನಿಖೆಯ ಹೆಜ್ಜೆ ಗುರುತು

. 2023ರ ಜು.3ಕ್ಕೆ ಎಸ್​ಐಟಿ ತಂಡ ರಚನೆ

. 10 ತಿಂಗಳಾದರೂ ರ್ತಾಕ ಅಂತ್ಯ ಕಂಡಿಲ್ಲ

. ಎಸ್​ಐಟಿ ಮೂರು ಅಧಿಕಾರಿಗಳನ್ನು ಬಂಧಿಸಿದೆ

. ಈ ಪೈಕಿ ಇಬ್ಬರು ಇನ್​ಸ್ಪೆಕ್ಟರ್​ಗಳಾಗಿದ್ದಾರೆ

. ಡಿ.ಎಂ.ಪ್ರಶಾಂತ್, ಲಕ್ಷ್ಮೀಕಾಂತಯ್ಯ ಅರೆಸ್ಟ್

. ಖಾಸಗಿ ಸೈಬರ್ ತಜ್ಞ ಸಂತೋಷ್ ಕೂಡ ಸೆರೆ

. ಶ್ರೀಕಿ ಸ್ನೇಹಿತ ರಾಬಿಲ್ ಖಂಡೆಲ್​ವಾಲಾ ಬಂಧನ

. ಇದನ್ನು ಬಿಟ್ಟರೆ ಬೇರೆ ಯಾರೂ ಸೆರೆಸಿಕ್ಕಿಲ್ಲ

ಮುಂದೇನು?

. ಚುನಾವಣಾ ಕರ್ತವ್ಯದಿಂದ ವಾಪಸಾದ ಬಳಿಕ ಎಸ್​ಐಟಿ ಅಧಿಕಾರಿಗಳಿಂದ ತನಿಖೆಗೆ ವೇಗ

. ಎಫ್​ಐಆರ್ ದಾಖಲಾದ 90 ದಿನದಲ್ಲಿ ಚಾರ್ಜ್​ಶೀಟ್ ಸಲ್ಲಿಸ ಬೇಕಾದ್ದರಿಂದ ಶೀಘ್ರ ಸಲ್ಲಿಕೆ

. ಹಗರಣದ ಸಂಬಂಧ ಹಿರಿಯ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಮತ್ತೆ ವಿಚಾರಣೆ ಸಾಧ್ಯತೆ

ಈವರೆಗೆ ತನಿಖೆಯಲ್ಲಿ ಆಗಿದ್ದೇನು?

. ಅಧಿಕಾರಿಗಳ ಬಂಧನವಾದರೂ ಲಾಭ ಪಡೆದವರ ಗುರುತು ಪತ್ತೆ ಹಚ್ಚಿಲ್ಲ

. ಹಿರಿಯ ಐಪಿಎಸ್ ಅಧಿಕಾರಿ ವಿಚಾರಣೆ ನಡೆಸಿದ ಹೇಳಿಕೆ ದಾಖಲು

. ಕೆಲ ರಾಜಕಾರಣಿಗಳು, ಅವರ ಮಕ್ಕಳು ಹಗರಣದಲ್ಲಿ ಭಾಗಿ ಆಗಿರುವ ಶಂಕೆ

. ಆದರೂ ರಾಜಕಾರಣಿಗಳು, ಮಕ್ಕಳ ವಿಚಾರಣೆಯನ್ನು ನಡೆಸಿಲ್ಲ

. ಆರೋಪಿತ ಅಧಿಕಾರಿಗಳ ಆಸ್ತಿ ವಿವರವನ್ನು ಸಂಗ್ರಹಿಸಲಾಗಿದೆ

. ಹಗರಣಕ್ಕೂ ಮುಂಚೆ ಮತ್ತು ಹಗರಣದ ಬಳಿಕ ಆಸ್ತಿ ಮಾಹಿತಿ ಸಂಗ್ರಹ